ಭೋಪಾಲ್: ಇತ್ತೀಚೆಗಷ್ಟೇ ನಮೀಬಿಯಾದಿಂದ ಭಾರತಕ್ಕೆ ತರಲಾಗಿರುವ ಎಂಟು ಚೀತಾಗಳಲ್ಲಿ ಎರಡು ಚೀತಾಗಳು ಮೊದಲ ಬೇಟೆಯನ್ನಾಡಿವೆ. ಸೆಪ್ಟೆಂಬರ್ 17ರಂದು ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ಪಾಲ್ಪುರ ಉದ್ಯಾನವನಕ್ಕೆ ಎಂಟು ಚೀತಾಗಳನ್ನು ತರಲಾಗಿದೆ. ಭಾರತದಲ್ಲಿ ಚೀತಾಗಳ ಸಂತತಿ ನಶಿಸಿ ಹೋಗಿರುವ ಚೀತಾ ಸಂತತಿಯನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ನಮೀಬಿಯಾದಿಂದ ಐದು ಗಂಡು ಮತ್ತು ಮೂರು ಹೆಣ್ಣು ಸೇರಿ, ಒಟ್ಟು 8 ಚೀತಾಗಳನ್ನು ತರಲಾಗಿದೆ.
ಹೀಗೆ ತರಲಾದ ಚೀತಾಗಳನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ನವೆಂಬರ್ 5ರಂದು ಕ್ವಾರಂಟೈನ್ನಿಂದ ಅರಣ್ಯಕ್ಕೆ ಬಿಡುಗಡೆಯಾಗುತ್ತಿದ್ದಂತೆ ಫ್ರೆಡ್ಡಿ ಮತ್ತು ಎಲ್ಟನ್ ಎಂಬ ಎರಡು ಗಂಡು ಚೀತಾಗಳು ಒಂದು ಜಿಂಕೆಯನ್ನು ಬೇಟೆಯಾಡಿವೆ. ಈ ಬಗ್ಗೆ ಮಾಹಿತಿ ನೀಡಿದ ಅರಣ್ಯ ಮುಖ್ಯ ಸಂರಕ್ಷಕ ಉತ್ತಮ್ ಕುಮಾರ್ ಶರ್ಮಾ, ‘ ನವೆಂಬರ್ 6ರ ಮಧ್ಯರಾತ್ರಿ ಅಥವಾ 7ರ ಮುಂಜಾನೆ ಹೊತ್ತಲ್ಲಿ ಈ ಚೀತಾಗಳು ಅರಣ್ಯದಲ್ಲಿ ಜಿಂಕೆಯನ್ನು ಬೇಟೆಯಾಡಿರುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದಾರೆ.
ಫ್ರೆಡ್ಡಿ ಮತ್ತು ಎಲ್ಟನ್ ಚೀತಾಗಳನ್ನು ಆಫ್ರಿಕಾದಿಂದ ತಂದ ಬಳಿಕ ಒಂದು ಸಣ್ಣ ಪ್ರದೇಶದಲ್ಲಿ ಬೇಲಿ ನಿರ್ಮಿಸಿ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಆಫ್ರಿಕಾದಿಂದ ಬಂದಿದ್ದ ಚೀತಾಗಳಲ್ಲಿ ಏನಾದರೂ ಸೋಂಕು ಇದ್ದರೆ, ಅದು ಕುನೋದಲ್ಲಿರುವ ಬೇರೆ ಪ್ರಾಣಿಗಳಿಗೆ ತಗುಲಬಾರದು ಎಂಬ ಕಾರಣಕ್ಕೆ ಪ್ರಾಣಿಗಳನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ನವೆಂಬರ್ 5ರಂದು ಅವುಗಳನ್ನು ಅಲ್ಲಿಂದ ವಿಶಾಲವಾದ ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು. ಅದಾಗಿ ಕೆಲವೇ ಗಂಟೆಯಲ್ಲಿ ಜಿಂಕೆಯನ್ನು ಬೇಟೆಯಾಡಿವೆ ಮತ್ತು ಬೇಟೆಯಾಡಿದ ಎರಡು ಗಂಟೆಯೊಳಗೆ ಆ ಮೃತ ಜಿಂಕೆಯನ್ನು ಸಂಪೂರ್ಣವಾಗಿ ತಿಂದು ಮುಗಿಸಿವೆ. ಚೀತಾಗಳು ಭಾರತದ ಹವಾಮಾನ, ಇಲ್ಲಿನ ಸ್ಥಿತಿಗೆ ಹೊಂದಿಕೊಳ್ಳುತ್ತಿವೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಉತ್ತಮ್ ಕುಮಾರ್ ಶರ್ಮಾ ಹೇಳಿದ್ದಾರೆ.
ಇನ್ನೂ ಆರು ಚೀತಾಗಳು ಸದ್ಯ ಕ್ವಾರಂಟೈನ್ನಲ್ಲೇ ಇದ್ದು, ಶೀಘ್ರದಲ್ಲೇ ಅವುಗಳನ್ನೂ ಅರಣ್ಯಪ್ರದೇಶಕ್ಕೆ ಬಿಡಲಾಗುತ್ತದೆ. ಈ ಚೀತಾಗಳನ್ನು ಪ್ರತ್ಯೇಕ ಸ್ಥಳಗಳಲ್ಲಿಯೇ ಇಡಲಾಗಿದ್ದು, ಶೀಘ್ರದಲ್ಲೇ ಅವುಗಳನ್ನೂ ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತದೆ. ಅಲ್ಲಿಯವರೆಗೆ ಎಮ್ಮೆ ಮತ್ತು ಇತರ ಪ್ರಾಣಿಗಳ ಮಾಂಸವನ್ನು ಅವಕ್ಕೆ ಕೊಡಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Narendra Modi : ಭಾರತಕ್ಕೆ ಚೀತಾಗಳು ಎಂಟ್ರಿ : ಪ್ರಧಾನಿ ಮೋದಿ ಹೇಳಿದ್ದೇನು?