ನವ ದೆಹಲಿ: ಬಿಜೆಪಿ ಸಂಸದ ಪರ್ವೇಶ್ ವರ್ಮಾ ಬೈಗುಳದಿಂದ ಮುಜುಗರಕ್ಕೀಡಾಗಿದ್ದ ದೆಹಲಿ ಜಲ ಮಂಡಳಿ ನಿರ್ದೇಶಕ ಸಂಜಯ್ ಶರ್ಮಾ, ಇವತ್ತು ಯಮುನಾ ನದಿ ನೀರಿನಲ್ಲಿ, ಸಾರ್ವಜನಿಕವಾಗಿ ಸ್ನಾನ ಮಾಡಿದ್ದಾರೆ. ನೆರೆದಿದ್ದ ಜನರ ಎದುರು ಯಮುನಾ ನದಿ ನೀರನ್ನು ಮೈಮೇಲೆ ಸುರಿದುಕೊಂಡಿದ್ದಾರೆ. ಈ ಮೂಲಕ ಯಮುನಾ ನದಿಯಲ್ಲಿ ಯಾವುದೇ ರಾಸಾಯನಿಕವಿಲ್ಲ ನೋಡಿ ಎಂದು ವರ್ಮಾಗೆ ತಿಳಿಸಿದ್ದಾರೆ.
ಈಗೆರಡು ದಿನಗಳ ಹಿಂದೆ ದೆಹಲಿಯಲ್ಲಿ ಯಮುನಾ ನದಿಗೆ ಜಲಮಂಡಳಿಯಿಂದ ನೊರೆನಿವಾರಕ ರಾಸಾಯನಿಕ ಸಿಂಪಡಿಸಲಾಗುತ್ತಿತ್ತು. ದೊಡ್ಡದೊಡ್ಡ ಬ್ಯಾರೆಲ್ಗಳಲ್ಲಿ ನೊರೆನಿವಾರಕ ರಾಸಾಯನಿಕಗಳನ್ನು ಇಟ್ಟುಕೊಂಡು ನೀರಿಗೆ ಹಾಕಲಾಗುತ್ತಿತ್ತು. ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಬಿಜೆಪಿ ಸಂಸದ ಪರ್ವೇಶ್ ವರ್ಮಾ, ನಿರ್ದೇಶಕ ಶರ್ಮಾಗೆ ಬೈದಿದ್ದರು. ‘ಛಾತ್ ಪೂಜೆ ಹತ್ತಿರ ಬರುತ್ತಿದೆ. ಜನ ಇಲ್ಲಿ ಪವಿತ್ರ ಸ್ನಾನಕ್ಕೆ ಬರುತ್ತಾರೆ. ಇಂಥ ಹೊತ್ತಲ್ಲಿ ನದಿ ನೀರಿಗೆ ವಿಷಕಾರಿ ರಾಸಾಯನಿಕ ಸಿಂಪಡಣೆ ಮಾಡುತ್ತೀರಾ?. ಇಂಥ ರಾಸಾಯನಿಕ ಹಾಕಿದ ನೀರಿನಲ್ಲಿ ಜನ ಸ್ನಾನ ಮಾಡಿ ಸಾಯಬೇಕಾ?’ ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ್ದ ಸಂಜಯ್ ಶರ್ಮಾ ‘ನಾವಿಲ್ಲಿ ಯಮುನಾ ನದಿಗೆ ಹಾಕಿದ್ದು ವಿಷಯಕಾರಿ ರಾಸಾಯನಿಕವಲ್ಲ. ಆಹಾರವನ್ನು ಸಂರಕ್ಷಿಸಿ ಇಡಲು ಬಳಸುವಂಥ ರಾಸಾಯನಿಕವನ್ನೇ ನಾವಿಲ್ಲಿ ಸಿಂಪಡಿಸಿದ್ದೇವೆ. ಕೆಲವು ಸ್ವರೂಪದ ಕಾಸ್ಮೆಟಿಕ್ಗಳಲ್ಲಿ ಕೂಡ ಇದು ಬಳಕೆಯಾಗುತ್ತದೆ. ಅಷ್ಟೇ ಅಲ್ಲ, ಈ ರಾಸಾಯನಿಕ ಸುರಕ್ಷಿತ ಎಂದು ಯುಎಸ್ನ ಔಷಧ ಮತ್ತು ಆಹಾರ ಆಡಳಿತವೂ ಅನುಮೋದನೆ ಕೊಟ್ಟಿದೆ’ ಎಂದು ಹೇಳಿದ್ದರು. ಆದರೆ ವರ್ಮಾ ಅದ್ಯಾವುದಕ್ಕೂ ಕಿವಿಗೊಡದೆ ‘ಈ ರಾಸಾಯನಿಕ ವಿಷವಲ್ಲ ಎಂದರೆ, ನೀವು ಹೋಗಿ ನೀರಿನಲ್ಲಿ ಮುಳುಗಿ’ ಎಂದು ಶರ್ಮಾಗೆ ಚಾಲೆಂಜ್ ಹಾಕಿದ್ದರು.
ಅದರಂತೆ ಎರಡು ದಿನಗಳ ಬಳಿಕ ಸಂಜಯ್ ಶರ್ಮಾ ಯಮುನಾ ನದಿ ನೀರಿನಲ್ಲಿ ಸ್ನಾನ ಮಾಡಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ಸಂಸದ ಪರ್ವೇಶ್ ವರ್ಮಾ ವಿರುದ್ಧ ಕಾಲಿಂದಿ ಕುಂಜ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ‘ಪರ್ವೇಶ್ ವರ್ಮಾ ನನ್ನನ್ನು ಅತ್ಯಂತ ಕೀಳು ಪದದಲ್ಲಿ ನಿಂದಿಸಿದ್ದಾರೆ. ಯಮುನಾ ನದಿಯನ್ನು ನಾವೆಲ್ಲ ಸೇರಿ ವಿಷಯುಕ್ತ ಮಾಡುತ್ತಿದ್ದೇವೆ ಎಂದು ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಆಪ್ ಕೂಡ ಬಿಜೆಪಿ ನಾಯಕ ವರ್ಮಾ ವಿರುದ್ಧ ಕಿಡಿ ಕಾರಿದೆ. ಜನರೆಲ್ಲ ಛಾತ್ ಸಂಭ್ರಮದಲ್ಲಿ ಇದ್ದಾರೆ. ಈ ಮಧ್ಯೆ ಬಿಜೆಪಿಯವರು ಬೇಡದ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ. ಅಷ್ಟಕ್ಕೂ ಯಮುನಾ ನದಿಯನ್ನು ಕಲುಷಿತಗೊಳಿಸಿದ್ದೇ ಈ ಬಿಜೆಪಿಯವರು ಎಂದು ಆಪ್ ಆರೋಪಿಸಿದೆ. ಇದೆಲ್ಲದರ ಮಧ್ಯೆ ‘ಛಾತ್ ಪೂಜೆ ಮಾಡುವವರು ಯಮುನಾ ನದಿಯಲ್ಲಿ ಮುಳುಗಲು ಅವಕಾಶ ಇಲ್ಲವೇ ಇಲ್ಲ’ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ-NGT) NGT) ಕಟ್ಟುನಿಟ್ಟಾಗಿ ಆದೇಶಿಸಿದೆ.
ಜಲಮಂಡಳಿ ನಿರ್ದೇಶಕ ಸ್ನಾನ ಮಾಡಿದ ದೃಶ್ಯ
ಬಿಜೆಪಿ ಸಂಸದ ಪರ್ವೇಶ್ ವರ್ಮಾ, ಸಂಜಯ್ ಶರ್ಮಾಗೆ ಬೈದಿದ್ದ ದೃಶ್ಯ…