ನವ ದೆಹಲಿ: ಕಾಂಗ್ರೆಸ್ ನಾಯಕರು, ಕಾರ್ಯಕರ್ತರ ಪ್ರತಿಭಟನೆ, ಸತ್ಯಾಗ್ರಹ ಮೆರವಣಿಗೆ ಮಧ್ಯೆ ಇಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi)ಯನ್ನು ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಸತತ ಮೂರು ಗಂಟೆ ವಿಚಾರಣೆ ನಂತರ, ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ಅವರನ್ನು ಒಮ್ಮೆ ಊಟಕ್ಕೆ ಕಳಿಸಲಾಗಿತ್ತು. ಊಟ ಮಾಡಿದ ರಾಹುಲ್ ಗಾಂಧಿ ಅಲ್ಲಿಂದ ತಮ್ಮ ತಾಯಿ ಸೋನಿಯಾ ಗಾಂಧಿ ಅಡ್ಮಿಟ್ ಆಗಿರುವ ಗಂಗಾ ರಾಮ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈಗ ಮತ್ತೆ ಇ.ಡಿ. ಕಚೇರಿಗೆ ವಾಪಸ್ ಬಂದಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ, ಮೆರವಣಿಗೆ ಮುಂದುವರಿದಿದೆ. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ರಾಹುಲ್ ಗಾಂಧಿಯವರನ್ನು ವಿಚಾರಣೆ ನಡೆಸುವುದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಅದರಲ್ಲಿ ದೆಹಲಿಯಲ್ಲಿ ತುಸು ಜಾಸ್ತಿಯೇ ಆಗಿದೆ. ಇಂದು ಬೆಳಗ್ಗೆ ರಾಹುಲ್ ಗಾಂಧಿ ಕಾಲ್ನಡಿಗೆಯಲ್ಲೇ ಇ.ಡಿ. ಕಚೇರಿಗೆ ತೆರಳಿದ್ದರು. ಅವರೊಂದಿಗೆ ನೂರಾರು ಜನ ಕಾರ್ಯಕರ್ತರು ಇದ್ದರು.
ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ತಾವು ಸತ್ಯಾಗ್ರಹ ಮೆರವಣಿಗೆ ಹಮ್ಮಿಕೊಳ್ಳುವುದಾಗಿ ಕಾಂಗ್ರೆಸ್ ನಾಯಕರು ನಿನ್ನೆಯೇ ಹೇಳಿದ್ದರು. ಆದರೆ ದೆಹಲಿ ಪೊಲೀಸರು ಅನುಮತಿ ನೀಡಿರಲಿಲ್ಲ. ಹಾಗಿದ್ದಾಗ್ಯೂ, ಇಂದು ಬೆಳಗ್ಗೆಯಿಂದ ಪ್ರತಿಭಟನೆ ಶುರುವಾಗಿದೆ. ಈಗಾಗಲೇ ರಣದೀಪ್ ಸಿಂಗ್ ಸುರ್ಜೇವಾಲಾ, ಹರೀಶ್ ರಾವತ್ ಸೇರಿ ಹಲವು ಪ್ರಮುಖ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ಅಧೀರ್ ರಂಜನ್ ಚೌಧರಿ ಪೊಲೀರಿಂದಲೇ ತೊಂದರೆಯಾಗಿದೆ ಎಂದು ದೂರು ನೀಡಿದ್ದಾರೆ. ಮೆರವಣಿಗೆ ಮಧ್ಯೆ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾದರು. ಈ ವೇಳೆ ನನಗೆ ಗಾಯವಾಗಿದೆ ಎಂದು ತುಘಲಕ್ ರಸ್ತೆ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ನೀಡಿದ್ದಾರೆ. ಅವರೊಂದಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಇದ್ದರು.
ʼದೊಡ್ಡ ಮಟ್ಟದ ಪ್ರತಿಭಟನೆಗಳಿಗೆ ಯಾವ ಕಾರಣಕ್ಕೂ ಅನುಮತಿ ಕೊಡುವುದಿಲ್ಲ ಎಂದು ಹೇಳಿದ್ದರೂ ಅವರು ಸತ್ಯಾಗ್ರಹ ಮೆರವಣಿಗೆ ಮಾಡಿದ್ದಾರೆ. ನಮ್ಮ ನಿಷೇಧ ನಿಯಮಗಳನ್ನು ಮೀರಿದ ಹಲವರನ್ನು ವಶಕ್ಕೆ ಪಡೆದಿದ್ದೇವೆ. ದೊಡ್ಡಮಟ್ಟದಲ್ಲಿ ಗುಂಪುಗೂಡುವುದಿದ್ದರೆ ಜಂತರ್ ಮಂತರ್‌ಗೆ ಹೋಗಿ ಎಂದು ಕಾಂಗ್ರೆಸ್ ನಾಯಕರಿಗೆ ಸೂಚನೆಯನ್ನೂ ಕೊಟ್ಟಿದ್ದೆವುʼ ಎಂದು ದೆಹಲಿ (ಕಾನೂನು ಮತ್ತು ಸುವ್ಯವಸ್ಥೆ) ವಿಶೇಷ ಆಯುಕ್ತ ಸಾಗರ್ ಪ್ರೀತ್ ಹೂಡಾ ತಿಳಿಸಿದ್ದಾರೆ.
ಇದನ್ನೂ ಓದಿ: Video: ಕಾಲ್ನಡಿಗೆಯಲ್ಲೇ ಇ ಡಿ ಕಚೇರಿಗೆ ಹೋದ ರಾಹುಲ್ ಗಾಂಧಿ; ಅವರ ಜತೆ ಕಾರ್ಯಕರ್ತರ ದಂಡು!