ನವದೆಹಲಿ: ಅಗ್ನಿಪಥ್ ಯೋಜನೆಯನ್ನು (Agnipath Scheme) ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ದಡಿ ಯುವಕರಿಗೆ ಉದ್ಯೋಗ ಭರವಸೆ ಇಲ್ಲ ಎಂದು ಆರೋಪಿಸಿ ಪ್ರತಿಭಟನೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಈ ಹಿಂದೆ ಪ್ರಧಾನಿ ಮೋದಿ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದು ಮಾಡಿದಂತೆ ಈ ಯೋಜನೆಯನ್ನೂ ಹಿಂಪಡೆಯಬೇಕು. ಈ ಮೂಲಕ ಯುವಕರ ಬೇಡಿಕೆಗೆ ಮನ್ನಣೆ ನೀಡಬೇಕು ಎಂದು ಹೇಳಿದ್ದಾರೆ.
ಹಿಂದಿಯಲ್ಲಿ ಟ್ವೀಟ್ ಮಾಡಿದ ರಾಹುಲ್ ಗಾಂಧಿ, ʼಜೈ ಜವಾನ್ ಮತ್ತು ಜೈ ಕಿಸಾನ್ʼ ಎಂಬುದರ ಮೌಲ್ಯವನ್ನು ಬಿಜೆಪಿ ಸರ್ಕಾರ ನಿರಂತರವಾಗಿ ಎಂಟು ವರ್ಷ ಹಾಳುಗೆಡವಿತು. ಈ ಹಿಂದೆ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದಾಗಲೂ ನಾನು ಅದನ್ನು ವಾಪಸ್ ಪಡೆಯುವಂತೆ ಹೇಳಿದ್ದೆ. ಕೊನೆಗೂ ಅವುಗಳನ್ನು ರದ್ದುಪಡಿಸಬೇಕಾಯಿತು. ನರೇಂದ್ರ ಮೋದಿ ಹೇಗೆ ರೈತರ ಆಗ್ರಹಕ್ಕೆ ಮಣಿದರೋ ಹಾಗೇ, ಇನ್ನೊಮ್ಮೆ ಮಾಫಿವೀರ್ (ಕ್ಷಮೆ ಯಾಚಿಸುವವರು) ಆಗುವ ಮೂಲಕ ಅಗ್ನಿಪಥ್‌ನ್ನೂ ಕೂಡ ವಾಪಸ್ ಪಡೆದು ಯುವಜನರ ಬೇಡಿಕೆ ಈಡೇರಿಸಬೇಕು ಎಂದು ಹೇಳಿದ್ದಾರೆ.
ಜೂ.19ಕ್ಕೆ ಕಾಂಗ್ರೆಸ್ ಸತ್ಯಾಗ್ರಹ
ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ, ಯುವಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಸಂಸದರು, ಹಿರಿಯ ನಾಯಕರು ಜೂ.19ರಂದು ದೆಹಲಿಯ ಜಂತರ್‌ಮಂತರ್‌ನಲ್ಲಿ ಸತ್ಯಾಗ್ರಹ ನಡೆಸಲಿದ್ದಾರೆ. ಸೇನಾ ನೇಮಕಾತಿಯ ಈ ಯೋಜನೆಯಿಂದ ಪ್ರಯೋಜನವಿಲ್ಲ ಎಂದು ಆರೋಪಿಸಿ ದೇಶದ ಅನೇಕ ಕಡೆಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅದಕ್ಕೆ ಬೆಂಬಲ ವ್ಯಕ್ತಪಡಿಸಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯ ಎಲ್ಲ ಸದಸ್ಯರು, ಕಾರ್ಯಕರ್ತರು, ಪ್ರಮುಖ ನಾಯಕರು ಸತ್ಯಾಗ್ರಹ ನಡೆಸುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Agneepath | ಕೇಂದ್ರಕ್ಕೆ ʼಅಗ್ನಿʼ ಪರೀಕ್ಷೆ ತಂದೊಡ್ಡಿದ ಅಗ್ನಿಪಥ್ ಬಗ್ಗೆ ನಿಮಗೆಷ್ಟು ಗೊತ್ತು?