Site icon Vistara News

Agnipth: ಅಗ್ನಿವೀರರಿಗೆ ಸೇವಾವಧಿಯಲ್ಲೇ ಪದವಿ ಶಿಕ್ಷಣ ಪಡೆಯಲು ಅವಕಾಶ

ನವ ದೆಹಲಿ: ಕೇಂದ್ರ ಸರಕಾರದ ʻಅಗ್ನಿಪಥʼ ಯೋಜನೆಯಡಿ ನಾಲ್ಕು ವರ್ಷದ ಕರ್ತವ್ಯ ಮುಗಿಸಿ ನಿವೃತ್ತರಾಗುವ ಯುವಕರ ಭವಿಷ್ಯದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸ್ಪಷ್ಟನೆಯೊಂದನ್ನು ನೀಡಿದೆ. ಈ ಯುವಕರು ತಮ್ಮ ಸೇವಾವಧಿಯಲ್ಲಿ ಪದವಿ ಸೇರಿದಂತೆ ಯಾವುದೇ ಕೌಶಲಾಧರಿತ ತರಬೇತಿಯನ್ನು ಪಡೆಯಲು ಅವಕಾಶವಿದೆ ಎಂದು ಹೇಳಿದೆ.

ʻಅಗ್ನಿವೀರʼರು ತಮ್ಮ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಮೂರು ವರ್ಷಗಳ ಕೌಶಲಾಧಾರಿತ ಪದವಿ ಕೋರ್ಸ್‌ ಮಾಡಲು ಅನುಕೂಲವಾಗುವಂತೆ ಹೊಸ ಯೋಜನೆ ಆರಂಭಿಸಲು ಕೇಂದ್ರ ಶಿಕ್ಷಣ ಸಚಿವಾಲಯ ಉದ್ದೇಶಿಸಿದೆ. ಈ ಮೂಲಕ ಅವರು ಭವಿಷ್ಯದ ಬದುಕಿನಲ್ಲಿ ತಮಗೆ ಸೂಕ್ತವೆನಿಸಿದ ನಾಗರಿಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ), ರಾಷ್ಟ್ರೀಯ ಕ್ರೆಡಿಟ್‌ ಚೌಕಟ್ಟು ಅಥವಾ ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟಿನ (ಎನ್‌ಎಸ್‌ಕ್ಯೂಎಫ್‌) ಮಾನದಂಡಕ್ಕೆ ಸೂಕ್ತವಾಗುವಂತೆ ಇದನ್ನು ರೂಪಿಸಲಾಗುತ್ತದೆ. ʻಅಗ್ನಿವೀರʼರು ಇಲ್ಲಿ ಪಡೆಯುವ ತರಬೇತಿಯನ್ನು ʻಕ್ರೆಡಿಟ್‌ʼಗಳಾಗಿ ಗುರುತಿಸಲಾಗುತ್ತದೆ. ಪದವಿ ಕೋರ್ಸ್‌ ಪೂರ್ಣಗೊಳಿಸುವುದಕ್ಕೆ ಅಗತ್ಯವಾದ ಕ್ರೆಡಿಟ್‌ಗಳಲ್ಲಿ ಶೇ. ೫೦ರಷ್ಟನ್ನು ಕೌಶಲ್ಯ ತರಬೇತಿಯ (ತಾಂತ್ರಿಕ ಮತ್ತು ತಾಂತ್ರಿಕೇತರ) ಮೂಲಕ ಹಾಗೂ ಉಳಿದರ್ಧವನ್ನು ನಾನಾ ವಿಷಯಗಳ ಅಧ್ಯಯನದಿಂದ ಪಡೆಯಬೇಕಿದೆ.

ಏನೇನು ತರಬೇತಿಗಳಿವೆ?

ವಿಷಯಾಧಾರಿತ ಅಧ್ಯಯನದಲ್ಲಿ ಭಾಷಾಧ್ಯಯನ, ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಸಾರ್ವಜನಿಕ ಆಡಳಿತ, ಸಮಾಜಶಾಸ್ತ್ರ, ಗಣಿತ, ಪ್ರವಾಸೋದ್ಯಮ, ವಾಣಿಜ್ಯ ಶಾಸ್ತ್ರ, ಪರಿಸರ ಅಧ್ಯಯನ, ಕೃಷಿ ಮತ್ತು ಜ್ಯೋತಿಷವೂ ಸೇರಿವೆ. ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ಕ್ಕೆ ಸೂಕ್ತವಾಗುವಂತೆ ರೂಪಿಸಲಾಗಿರುವ ಈ ಶಿಕ್ಷಣ ಕಾರ್ಯಕ್ರಮ, ಅಭ್ಯರ್ಥಿಗಳಿಗೆ ಶೈಕ್ಷಣಿಕ ಆಯ್ಕೆಯನ್ನೂ ನೀಡಿದೆ. ಅಂದರೆ, ಅರ್ಹತಾಪತ್ರ ಹೊಂದಲು ಸಾಧ್ಯವಾಗುವ ಒಂದು ವರ್ಷದ ಕೋರ್ಸ್‌, ಎರಡು ವರ್ಷದ ಡಿಪ್ಲೊಮಾ ತರಬೇತಿ ಮತ್ತು ಮೂರು ವರ್ಷ ವ್ಯಾಸಂಗದ ಪದವಿ ಕೋರ್ಸ್‌ಗೆ ಅವಕಾಶವಿದೆ.  ಭೂಸೇನೆ, ವಾಯುಸೇನೆ ಮತ್ತು ನೌಕಾ ಪಡೆಗಳು ಈ ನಿಟ್ಟಿನಲ್ಲಿ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ (ಇಗ್ನೊ)ದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಿವೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮತ್ತು ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಪರಿಷತ್ತುಗಳ (ಎನ್‌ಸಿವಿಇಟಿ) ಮಾನ್ಯತೆ ಇದಕ್ಕೆ ದೊರೆತಿದೆ.

ಯುಜಿಸಿ ನಿಮಯಗಳ ಅಡಿಯಲ್ಲಿಯೇ ಈ ಬಿಎ, ಬಿಕಾಂ, ಬಿಎ (ವೃತ್ತಿಪರ)‌ ಮತ್ತು ಬಿಎ (ಪ್ರವಾಸೋದ್ಯಮ ನಿರ್ವಹಣೆ) ಪದವಿಯನ್ನು ಇಗ್ನೋ ನೀಡಲಿದ್ದು, ಇದಕ್ಕೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಮಾನ್ಯತೆ ಇರುತ್ತದೆ ಎಂದು ಸಚಿವಾಲಯದ ಪತ್ರಿಕಾ ಪ್ರಕಟಣೆ ತಿಳಿಸಿದೆ.

Exit mobile version