Site icon Vistara News

ತೀಸ್ತಾ ಸೆಟಲ್ವಾಡ್‌ ಕೇಸ್‌ನಲ್ಲಿ ಅಹ್ಮದ್‌ ಪಟೇಲ್‌ ಹೆಸರು; ಪ್ರಶ್ನೆಯೊಂದನ್ನು ಕೇಳಿದ ಪುತ್ರಿ ಮುಮ್ತಾಜ್‌ ಪಟೇಲ್‌

Mumataaz Patel

ನವ ದೆಹಲಿ: ತೀಸ್ತಾ ಸೆಟಲ್ವಾಡ್‌ ಕೇಸ್‌ನಲ್ಲಿ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ ಹೆಸರು ಕೇಳಿಬರುತ್ತಿದ್ದಂತೆ ಅವರ ಪುತ್ರಿ ಮುಮ್ತಾಜ್‌ ಪಟೇಲ್‌ ಪ್ರತಿಕ್ರಿಯೆ ನೀಡಿದ್ದಾರೆ. ʼನನ್ನ ತಂದೆ, ಹಿರಿಯ ನಾಯಕ ಅಹ್ಮದ್‌ ಪಟೇಲ್‌ ರಾಜಕೀಯ ಕುತಂತ್ರ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಈಗ ಹೀಗೆಲ್ಲ ಆರೋಪ ಮಾಡುವ ಪೊಲೀಸರು, ಅವರು ಬದುಕಿದ್ದಾಗಲೇ ಏಕೆ ವಿಚಾರಣೆ ನಡೆಸಲಿಲ್ಲ ಎಂಬುದನ್ನು ನಾನು ತಿಳಿಯಬೇಕುʼ ಎಂದು ಆಗ್ರಹಿಸಿದ್ದಾರೆ.

ಟ್ವೀಟ್‌ ಮಾಡಿರುವ ಮುಮ್ತಾಜ್‌ ಪಟೇಲ್‌, ʼಅಹ್ಮದ್‌ ಪಟೇಲ್‌ ಹೆಸರು ಪ್ರತಿಪಕ್ಷಗಳ ಪ್ರತಿಷ್ಠೆ ಹಾಳು ಮಾಡಲು ಬಳಸುವಷ್ಟು ತೂಕವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಈ ಆರೋಪಗಳೆಲ್ಲ ಸತ್ಯವೇ ಆದಲ್ಲಿ, ಯುಪಿಎ ಸರ್ಕಾರದ ಅವಧಿಯಲ್ಲಿ ತೀಸ್ತಾ ಸೆಟಲ್ವಾಡ್‌ಗೇಕೆ ಒಳ್ಳೆಯ ಹುದ್ದೆ ಕೊಟ್ಟಿಲ್ಲ? ಅವರನ್ಯಾಕೆ ರಾಜ್ಯಸಭೆ ಸದಸ್ಯರನ್ನಾಗಿ ಮಾಡಿಲ್ಲ? 2020ರವರೆಗೂ ಕೇಂದ್ರ ಸರ್ಕಾರ ನನ್ನ ತಂದೆಯನ್ನೇಕೆ ಈ ಕೇಸ್‌ನಡಿ ವಿಚಾರಣೆಗೆ ಒಳಪಡಿಸಿಲ್ಲ? ಈ ಪ್ರಶ್ನೆಗಳಿಗೆಲ್ಲ ಉತ್ತರ ಬೇಕುʼ ಎಂದು ಹೇಳಿದ್ದಾರೆ.

2002ರ ಗುಜರಾತ್‌ ಗಲಭೆಯಲ್ಲಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರನ್ನು ಸಿಲುಕಿಸಲು ತೀಸ್ತಾ ಸೆಟಲ್ವಾಡ್‌ ಪಿತೂರಿ ಮಾಡಿದ್ದಾರೆ ಎಂಬ ಆರೋಪದಡಿ ಅವರನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಈ ಸಲುವಾಗಿ ಎಸ್‌ಐಟಿ ರಚನೆಗೊಂಡಿದೆ. ಇಂದು ಸೆಷನ್ಸ್‌ ಕೋರ್ಟ್‌ಗೆ ಅಫಿಡಿವಿಟ್‌ ಸಲ್ಲಿಸಿದ್ದ ಎಸ್‌ಐಟಿ ಅಧಿಕಾರಿಗಳು, ʼಗಲಭೆಯ ಸಮಯದಲ್ಲಿ ಗುಜರಾತ್‌ನಲ್ಲಿ ಇದ್ದ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ತೀಸ್ತಾ ಸೆಟಲ್ವಾಡ್‌ ಪ್ರಯತ್ನಿಸಿದ್ದರು. ಜನರು ಸರ್ಕಾರದ ವಿರುದ್ಧ ರೊಚ್ಚಿಗೇಳಲು ಪೂರಕವಾದ ಹಲವು ಕ್ರಿಮಿನಲ್‌ ಕೆಲಸಗಳನ್ನು ಮಾಡಿದ್ದಾರೆ. ಅದನ್ನೆಲ್ಲವನ್ನೂ ಅವರು ಅಹ್ಮದ್‌ ಪಟೇಲ್‌ ಆಜ್ಞೆಯ ಮೇರೆಗೆ ಮಾಡಿದ್ದಾರೆʼ ಎಂದು ಎಸ್‌ಐಟಿ ಹೇಳಿದೆ.

ಎಸ್‌ಐಟಿಯ ಈ ಅಫಿಡಿವಿಟ್‌ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನ ಅನೇಕರು ಇದನ್ನು ವಿರೋಧಿಸಿದ್ದಾರೆ. ʼಪ್ರಧಾನಮಂತ್ರಿ ನರೇಂದ್ರ ಮೋದಿ ಎಷ್ಟರ ಮಟ್ಟಿಗೆ ದ್ವೇಷದ ರಾಜಕಾರಣ ನಡೆಸುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ತಾವು ದೋಷಮುಕ್ತರಾಗಲು, ತಮ್ಮ ಲಾಭಕ್ಕಾಗಿ ಅವರು ಮೃತಪಟ್ಟವರನ್ನೂ ಬಿಡುವುದಿಲ್ಲʼ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಗುಜರಾತ್‌ ಗಲಭೆ: ತೀಸ್ತಾ ಸೆಟಲ್ವಾಡ್‌ ಪಿತೂರಿಗೆ ಬೆಂಬಲಿಸಿದ್ದು ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್‌ !

Exit mobile version