ಹೈದರಾಬಾದ್: ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿರುವ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಅವರ ರುಂಡ ಚೆಂಡಾಡಿ ಎಂದು ಪ್ರತಿಭಟನೆ ವೇಳೆ ಘೋಷಣೆ ಕೂಗಿರುವುದನ್ನು ಎಐಎಂಐಎಂ ಖಂಡಿಸಿದೆ. ನೂಪುರ್ ಶರ್ಮಾ ಬಳಿಕ ಪ್ರವಾದಿ ಕುರಿತು ರಾಜಾ ಸಿಂಗ್ (Raja Singh) ಹೇಳಿಕೆ ನೀಡಿದ ಕಾರಣ ಹೈದರಾಬಾದ್‌ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಹಲವೆಡೆ ಹೆಚ್ಚುವರಿಯಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಳೆದ ಸೋಮವಾರ ದಕ್ಷಿಣ ವಲಯದ ಡಿಸಿಪಿ ಕಚೇರಿ ಎದುರು ಪ್ರತಿಭಟನೆ ನಡೆಸುವ ವೇಳೆ ರುಂಡ ಚೆಂಡಾಡಿ (ಸರ್ ತರ್ ಸೆ ಜುಡಾ) ಘೋಷಣೆ ಕೂಗಲಾಗಿತ್ತು.
ಅದರಲ್ಲೂ, ಎಐಎಂಐಎಂ ಐಟಿ ಸೆಲ್‌ನ ಮಾಜಿ ಮುಖ್ಯಸ್ಥ ಸೈಯದ್ ಅಬ್ದಾಹು ಕಶಫ್ ಅವರೇ ಘೋಷಣೆ ಕೂಗಿದ ಕಾರಣ ರಾಜಾ ಸಿಂಗ್ ಬೆಂಬಲಿಗರಿಂದಲೂ ಆಕ್ರೋಶ ವ್ಯಕ್ತವಾಗಿದೆ. ಹಾಗಾಗಿ, ರುಂಡ ಚೆಂಡಾಡಿ ಎಂಬ ಘೋಷಣೆ ಕೂಗಿದ್ದನ್ನು ಎಐಎಂಐಎಂ ಕಾರ್ಪೊರೇಟರ್ ಮುಸ್ತಫಾ ಅಲಿ ಮುಜಾಫರ್ ಖಂಡಿಸಿದ್ದಾರೆ.
ಕಳೆದ ಎರಡು ದಿನಗಳಿಂದ ರಾಜಾ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈದರಾಬಾದ್‌ನಲ್ಲಿ ಹೆಚ್ಚಿನ ಒತ್ತಾಯ ಕೇಳಿಬರುತ್ತಿದೆ. ಅದರಲ್ಲೂ, ರಾಜಾ ಸಿಂಗ್ ಅವರನ್ನು ಬಂಧಿಸಿದ ದಿನವೇ ಅವರಿಗೆ ಜಾಮೀನು ಸಿಕ್ಕಿರುವುದನ್ನು ಸಾವಿರಾರು ಜನ ಖಂಡಿಸಿದ್ದಾರೆ. ಹಾಗಾಗಿ, ಬುಧವಾರವೂ ಪ್ರತಿಭಟನೆ ಮುಂದುವರಿದಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ | ವಿವಾದಗಳ ರಾಜ; ಬಿಜೆಪಿಯಿಂದ ಅಮಾನತುಗೊಂಡ ರಾಜಾ ಸಿಂಗ್ ವಿರುದ್ಧ ಇವೆ 72 ಕೇಸ್ಗಳು !