Site icon Vistara News

Rahul Gandhi Pet: ಶ್ವಾನಕ್ಕೆ ‘ನೂರಿ’ ಎಂದು ಹೆಸರಿಟ್ಟ ರಾಹುಲ್‌ ಗಾಂಧಿಗೆ ‘ಧರ್ಮ’ಸಂಕಟ; ಬಿತ್ತು ಕೇಸ್!

rahul gandhi

AIMIM leader moves court against Rahul Gandhi, says pet dog’s name Noorie hurts religious sentiment‌

ಹೈದರಾಬಾದ್:‌ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ (Sonia Gandhi) ಅವರಿಗೆ ಅಕ್ಟೋಬರ್‌ 4ರಂದು ವಿಶ್ವ ಪ್ರಾಣಿಗಳ ದಿನದ ಅಂಗವಾಗಿ ಶ್ವಾನವೊಂದನ್ನು ಉಡುಗೊರೆ (Rahul Gandhi Pet) ನೀಡಿದ್ದು ಸುದ್ದಿಯಾಗಿತ್ತು. ಆದರೆ, ರಾಹುಲ್‌ ಗಾಂಧಿ ಅವರು ತಾಯಿಗೆ ನೀಡಿದ ಶ್ವಾನದ ಹೆಸರನ್ನು “ನೂರಿ” (Pet Dog Noorie) ಎಂಬುದಾಗಿ ಇಟ್ಟಿದ್ದಕ್ಕೆ ಅವರಿಗೆ ಸಂಕಷ್ಟ ಎದುರಾಗಿದೆ. ಶ್ವಾನಕ್ಕೆ ನೂರಿ ಎಂದು ಹೆಸರಿಟ್ಟಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಎಐಎಂಐಎಂ ಪಕ್ಷವು ರಾಹುಲ್‌ ಗಾಂಧಿ ವಿರುದ್ಧ ಕೋರ್ಟ್‌ ಮೊರೆ ಹೋಗಿದೆ.

ಎಐಎಂಐಎಂ ಪಕ್ಷದ ಮುಖಂಡ ಮೊಹಮ್ಮದ್‌ ಫರ್ಹಾನ್‌ ಅವರು ರಾಹುಲ್‌ ಗಾಂಧಿ ವಿರುದ್ಧ ಪ್ರಯಾಗರಾಜ್‌ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. “ನೂರಿ ಎಂಬ ಪದವು ಇಸ್ಲಾಂಗೆ ಸಂಬಂಧಿಸಿದೆ. ಕುರಾನ್‌ನಲ್ಲೂ ಈ ಹೆಸರನ್ನು ಪ್ರಸ್ತಾಪಿಸಲಾಗಿದೆ. ಆದರೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶ್ವಾನವೊಂದಕ್ಕೆ ನೂರಿ ಎಂಬ ಹೆಸರಿಟ್ಟಿರುವುದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಹಾಗಾಗಿ, ರಾಹುಲ್‌ ಗಾಂಧಿ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಕ್ರಮ ತೆಗೆದುಕೊಳ್ಳಬೇಕು” ಎಂಬುದಾಗಿ ಕೋರ್ಟ್‌ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ನೂರಿಯ ಉಡುಗೊರೆ ನೀಡಿದ್ದ ರಾಹುಲ್‌ ಗಾಂಧಿ

ಗೋವಾದಿಂದ ಸೋನಿಯಾ ಗಾಂಧಿ ಅವರಿಗೆ ಉಡುಗೊರೆಯಾಗಿ ತಂದ ಜಾಕ್ ರಸೆಲ್ ಟೆರಿಯರ್ ತಳಿಯ ಶ್ವಾನದ ಮರಿಯಾದ ನೂರಿಯನ್ನು ರಾಹುಲ್‌ ಗಾಂಧಿ ಅವರು ಎಲ್ಲರಿಗೂ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯಿಸಿದ್ದರು. ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಗೋವಾ ಪ್ರವಾಸದ ವಿಡಿಯೊವನ್ನು ಹಂಚಿಕೊಂಡಿದ್ದ ರಾಹುಲ್‌ ಗಾಂಧಿ, ಅಲ್ಲಿ ನೂರಿಯನ್ನು ಭೇಟಿಯಾಗಿದ್ದು, ಬಳಿಕ ತಾಯಿಗೆ ತಲುಪಿಸಿದ್ದನ್ನು ವಿವರಿಸಿದ್ದರು. ಪ್ರಯಾಣದ ಮಧ್ಯೆ ಮೆಟ್ರೋ ರೈಲಿನಲ್ಲೂ ರಾಹುಲ್‌ ಗಾಂಧಿ ಸಂಚರಿಸಿದ್ದು ಈ ದೃಶ್ಯವೂ ವಿಡಿಯೊದಲ್ಲಿ ಕಂಡು ಬಂದಿದೆ.

ಇದನ್ನೂ ಓದಿ: Rahul Gandhi: ತಮ್ಮ ಕುಟುಂಬದ ಹೊಸ ಸದಸ್ಯೆಯನ್ನು ಪರಿಚಯಿಸಿದ ರಾಹುಲ್‌ ಗಾಂಧಿ

ನೂರಿಯನ್ನು ನೋಡಿ ಸೋನಿಯಾ ಗಾಂಧಿ ಅಚ್ಚರಿಗೊಳಗಾಗಿದ್ದರು. ಬಳಿಕ ಅದನ್ನು ಎತ್ತಿ ಮುದ್ದಾಡಿದರು. ರಾಹುಲ್ ಗಾಂಧಿ ಆಗಸ್ಟ್‌ನಲ್ಲಿ ಗೋವಾ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲೇ ಅವರಿಗೆ ‌ಈ ಜಾಕ್ ರಸೆಲ್ ಟೆರಿಯರ್ ಶ್ವಾನದ ತಳಿ ಸಿಕ್ಕಿದೆ ಎಂದು ವರದಿಯಾಗಿದೆ. ಗೋವಾ ಮೂಲದ ಶ್ವಾನ ಸಾಕಣೆದಾರರಾದ ಶರ್ವಾನಿ ಪಿಟ್ರೆ ಮತ್ತು ಪತಿ ಸ್ಟಾನ್ಲಿ ಬ್ರಾಗಾಂಕಾ ಅವರನ್ನು ರಾಹುಲ್ ಗಾಂಧಿ ಖಾಸಗಿಯಾಗಿ ಭೇಟಿಯಾಗಿದ್ದರು. ಜ್ಯಾಕ್ ರಸೆಲ್ ಟೆರಿಯರ್‌ಗಳನ್ನು ಲಭ್ಯತೆಯ ಬಗ್ಗೆ ವಿಚಾರಿಸಲು ರಾಹುಲ್ ಗಾಂಧಿ ಕಚೇರಿಯಿಂದ ಕರೆ ಬಂದಿದೆ ಎಂದು ಶರ್ವಾನಿ ಪಿಟ್ರೆ ಈ ಹಿಂದೆ ತಿಳಿಸಿದ್ದರು.

Exit mobile version