ಕೋಲ್ಕತ್ತ: ಲಖನೌದಿಂದ ಕೋಲ್ಕತ್ತಕ್ಕೆ ತೆರಳಬೇಕಿದ್ದ ಏರ್ ಏಷ್ಯಾ ವಿಮಾನವೊಂದು ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ, ವಾಪಸ್ ಲಖನೌ ಏರ್ಪೋರ್ಟ್ಗೇ ಬಂದು ಲ್ಯಾಂಡ್ ಆಗಿದೆ. ವಿಮಾನ ಟೇಕ್ ಆಫ್ ಆಗಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಅದಕ್ಕೆ ಹಕ್ಕಿಯೊಂದು ಡಿಕ್ಕಿ ಹೊಡೆದು, ಸ್ವಲ್ಪ ಅವ್ಯವಸ್ಥೆ ಉಂಟಾದ ಹಿನ್ನೆಲೆಯಲ್ಲಿ ವಾಪಸ್ ಬಂದಿತ್ತು.
ಲಖನೌಗೇ ವಾಪಸ್ ಹೋಗುತ್ತಿರುವ ಬಗ್ಗೆ ವಿಮಾನ ಸಿಬ್ಬಂದಿ ಯಾವುದೇ ಅನೌನ್ಸ್ ಮಾಡದ ಹಿನ್ನೆಲೆಯಲ್ಲಿ ಅದರಲ್ಲಿದ್ದ ಪ್ರಯಾಣಿಕರಿಗೂ ಒಮ್ಮೆಲೇ ವಿಮಾನ ಏಕೆ ವಾಪಸ್ ಹೊರಟಿದೆ ಎಂದು ಗೊತ್ತಾಗಲಿಲ್ಲ ಎನ್ನಲಾಗಿದೆ.
ಲಖನೌದಿಂದ ಟೇಕ್ ಆಫ್ ಆದ ಐ5-319 ವಿಮಾನ ಕೋಲ್ಕತ್ತಕ್ಕೆ ತಲುಪಬೇಕಿತ್ತು. ಆದರೆ ಅದು ಆಕಾಶಕ್ಕೆ ಏರಿ ಕೆಲವೇ ಹೊತ್ತಲ್ಲಿ ಹಕ್ಕಿಯೊಂದು ಡಿಕ್ಕಿಯಾಯಿತು. ಹೆಚ್ಚೇನೂ ಅಪಾಯವಾಗದೆ ಇದ್ದರೂ, ಹೀಗೆ ಹಕ್ಕಿಗಳೆಲ್ಲ ಡಿಕ್ಕಿಯಾದಾಗ ವಿಮಾನವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡುವ ಅಗತ್ಯವಿರುತ್ತದೆ. ಮತ್ತೇನಾದರೂ ತಾಂತ್ರಿಕ ದೋಷ ಆಗಿದಿಯೇ ಎಂಬುದನ್ನು ಚೆಕ್ ಮಾಡಬೇಕಾಗುತ್ತದೆ. ಇದೇ ಕಾರಣಕ್ಕೇ ವಾಪಸ್ ಲಖನೌದಲ್ಲಿ ಲ್ಯಾಂಡ್ ಮಾಡಿಸಲಾಯಿತು ಎಂದು ಏರ್ ಏಷ್ಯಾದ ವಕ್ತಾರ ತಿಳಿಸಿದ್ದಾರೆ.
ಇದನ್ನೂ ಓದಿ: Kolkata Airport | 90 ನಿಮಿಷ, 11 ವಿಮಾನ ಲ್ಯಾಂಡ್ ಮಾಡಲು ಪೈಲಟ್‌ಗಳು ಯತ್ನಿಸಿದರೂ ಆಗಲಿಲ್ಲವೇಕೆ?
ಈಗೊಂದು ಮೂರು ತಿಂಗಳ ಹಿಂದೆ ಆಕಾಸಾ ಏರ್ ವಿಮಾನಕ್ಕೆ ಹೀಗೆ ಪಕ್ಷಿ ಡಿಕ್ಕಿಯಾಗಿತ್ತು. ಮುಂಬಯಿಯಿಂದ ಬೆಂಗಳೂರಿಗೆ ಬರುತ್ತಿದ್ದ ಈ ವಿಮಾನವೂ ಕೂಡ ಹಕ್ಕಿ ಡಿಕ್ಕಿಯಾಗುತ್ತಿದ್ದಂತೆ ವಾಪಸ್ ಮುಂಬಯಿಗೇ ಹೋಗಿ ಲ್ಯಾಂಡ್ ಆಗಿತ್ತು. ಈ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆಯುತ್ತಿದ್ದಂತೆ ಅದರ ಕ್ಯಾಬಿನ್ನಲ್ಲಿ ಏನೋ ಸುಟ್ಟುಹೋದ ವಾಸನೆಯೂ ಬಂದಿತ್ತು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ವಾಪಸ್ ಮುಂಬಯಿಯಲ್ಲಿ ಲ್ಯಾಂಡ್ ಮಾಡಲಾಗಿತ್ತು.