ನವ ದೆಹಲಿ: ಯುಎಸ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ(Air India) ವಿಮಾನದಲ್ಲಿ ಶಂಕರ್ ಮಿಶ್ರಾ (Shankar Mishra Case) ಎಂಬಾತ ತನ್ನ ಸಹ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದಾಗ, ಆ ಸಂದರ್ಭವನ್ನು ವಿಮಾನದಲ್ಲಿದ್ದ ಸಿಬ್ಬಂದಿ ಸರಿಯಾಗಿ ನಿಭಾಯಿಸಲಿಲ್ಲ. ನಿರ್ಲಕ್ಷಿಸಿದರು ಎಂಬ ಕಾರಣಕ್ಕೆ ಇತ್ತೀಚೆಗಷ್ಟೇ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) 30 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಷ್ಟೇ ಅಲ್ಲ, ಪ್ಲೈಟ್ ಕಮಾಂಡರ್ (ಕ್ಯಾಪ್ಟನ್ ಪೈಲೆಟ್) ಲೈಸೆನ್ಸ್ನ್ನು ಮೂರು ತಿಂಗಳ ಅವಧಿಗೆ ರದ್ದುಗೊಳಿಸಿದೆ. ಏರ್ ಇಂಡಿಯಾ ಪ್ಲೈಟ್ ಇನ್ ಸರ್ವೀಸ್ ಡೈರೆಕ್ಟರ್ಗೂ 3 ಲಕ್ಷ ರೂ. ದಂಡ ವಿಧಿಸಿತ್ತು. ಅದರ ಬೆನ್ನಲ್ಲೇ ಏರ್ ಇಂಡಿಯಾಕ್ಕೆ ಮತ್ತೆ 10 ಲಕ್ಷ ರೂಪಾಯಿ ದಂಡ ಬಿದ್ದಿದೆ..ಅದೂ ಕೂಡ ಇನ್ನೊಂದು ‘ಮೂತ್ರ ವಿಸರ್ಜನೆ ಕೇಸ್’ನಲ್ಲಿ.
ಡಿಸೆಂಬರ್ 6ರಂದು ಪ್ಯಾರಿಸ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೊಬ್ಬ ಅನುಚಿತವಾಗಿ ವರ್ತಿಸಿದ್ದ. ವಿಮಾನದ ಶೌಚಾಲಯಕ್ಕೆ ಹೋಗಿ ಅಲ್ಲಿ ಧೂಮಪಾನ ಮಾಡಿದ್ದಲ್ಲದೆ, ಕುಡಿದು ಅಮಲೇರಿಸಿಕೊಂಡು ತನ್ನ ಪಕ್ಕದ ಸೀಟ್ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಆ ಸೀಟ್ ಮಹಿಳೆಯೊಬ್ಬರಿಗೆ ಸೇರಿದ್ದಾಗಿತ್ತು. ಆದರೆ ಅವರ ಕಂಬಳಿ ಮಾತ್ರ ಅಲ್ಲಿತ್ತು. ಮಹಿಳೆ ಅಲ್ಲಿಂದ ಎದ್ದು ಆಚೆ ಹೋದಾಗ ಈ ಪ್ರಯಾಣಿಕ ಅಲ್ಲಿ ಹೋಗಿ ಕಂಬಳಿಯ ಮೇಲೆಯೂ ಮೂತ್ರ ವಿಸರ್ಜನೆ ಮಾಡಿದ್ದ. ಅಂದು ವಿಮಾನ ಸಿಬ್ಬಂದಿ ಈ ವಿಷಯವನ್ನು ಏರ್ಟ್ರಾಫಿಕ್ ಕಂಟ್ರೋಲ್ಗೆ ತಿಳಿಸಿದ್ದರು. ದೆಹಲಿ ಏರ್ಪೋರ್ಟ್ನಲ್ಲಿ ಇಳಿದ ಈತನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು. ಆದರೆ ಮಹಿಳೆ ದೂರು ನೀಡಲು ನಿರಾಕರಿಸಿದ ಕಾರಣ, ಆತನನ್ನು ಬಿಟ್ಟು ಕಳಿಸಲಾಗಿತ್ತು. ಶಂಕರ್ ಮಿಶ್ರಾ ಕೇಸ್ನ ಗಲಾಟೆಯಲ್ಲಿ ಈ ಪ್ರಕರಣ ಅಷ್ಟೊಂದು ದೊಡ್ಡ ಸುದ್ದಿಯನ್ನೇ ಮಾಡಿರಲಿಲ್ಲ.
ಇದನ್ನೂ ಓದಿ: Air India Pee Case | ಏರ್ ಇಂಡಿಯಾ ವಿಮಾನದ ಪೈಲೆಟ್, ನಾಲ್ವರು ಸಿಬ್ಬಂದಿ ಅಮಾನತು; ಕ್ಷಮೆ ಯಾಚಿಸಿದ ಸಿಇಒ
ಆದರೆ ಈ ಘಟನೆ ಬೇರೆ ಮೂಲಗಳಿಂದ DGCA ಗಮನಕ್ಕೆ ಬಂದಿತ್ತು. ನಾವು ಜನವರಿ 5ರಂದು ಈ ಬಗ್ಗೆ ಏರ್ ಇಂಡಿಯಾ ಬಳಿ ವರದಿ ಕೇಳುವವರೆಗೂ ಆ ವಿಮಾನಯಾನ ಸಂಸ್ಥೆ ನಮಗೆ ಏನನ್ನೂ ಹೇಳಿರಲಿಲ್ಲ. ವಿಮಾನದಲ್ಲಿ ಯಾರೇ ಅಶಿಸ್ತಿನ ವರ್ತನೆ ತೋರಿದರೂ ಅವರ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಮಾರ್ಗಸೂಚಿಯನ್ನು ಡಿಜಿಸಿಎ ಎಲ್ಲ ವಿಮಾನಯಾನ ಸಂಸ್ಥೆಗಳಿಗೂ ತಿಳಿಸಿರುತ್ತದೆ. ಆದರೆ ಪ್ಯಾರಿಸ್ನಿಂದ ದೆಹಲಿಗೆ ಬರುತ್ತಿರುವ ವಿಮಾನದಲ್ಲಿ ಈ ಪ್ರಯಾಣಿಕ ಇಷ್ಟೆಲ್ಲ ಅಶಿಸ್ತು ತೋರಿಸಿದರೂ ಆತನ ವಿರುದ್ಧ ಏರ್ ಇಂಡಿಯಾ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ನಮ್ಮ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಡಿಜಿಸಿಎ ಹೇಳಿದೆ. ಇನ್ನು ಡಿಜಿಸಿಎ ಕೊಟ್ಟಿದ್ದ ನೋಟಿಸ್ಗೆ ಜನವರಿ 23ರಂದು ಉತ್ತರ ನೀಡಿದ ಏರ್ ಇಂಡಿಯಾ ‘ತಮ್ಮಿಂದ ತಪ್ಪಾಗಿದೆ. ನಾವು ಡಿಜಿಸಿಎ ನಿಯಮಗಳನ್ನು ಪಾಲಿಸಿಲ್ಲ’ ಎಂದು ಹೇಳಿತ್ತು. ಅದರ ಬೆನ್ನಲ್ಲೇ 10 ಲಕ್ಷ ರೂಪಾಯಿ ದಂಡ ಬಿದ್ದಿದೆ.
ದೇಶಮಟ್ಟದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ