ನವ ದೆಹಲಿ: 300 ಪ್ರಯಾಣಿಕರು ಇದ್ದ, ನೆವಾರ್ಕ್ (ಯುಸ್)-ದೆಹಲಿ ಏರ್ ಇಂಡಿಯಾ ವಿಮಾನ (Air India) ಎಐ106 ಸ್ವೀಡನ್ನ ಸ್ಟಾಕ್ಹೋಮ್ ಏರ್ಪೋರ್ಟ್ನಲ್ಲಿ ತುರ್ತುಭೂಸ್ಪರ್ಶವಾಗಿದೆ (Air India Emergency Land) . ನೆವಾರ್ಕ್ನಿಂದ ಟೇಕ್ಆಫ್ ಆಗಿ ಹೊರಟಿದ್ದ ವಿಮಾನದಲ್ಲಿ ಕೆಲವೇ ಹೊತ್ತಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ವಿಮಾನದ ಎರಡನೇ ಎಂಜಿನ್ನಿಂದ ತೈಲ ಸೋರಿಕೆ ಆಗಲು ಪ್ರಾರಂಭವಾಯಿತು. ಹೀಗಾಗಿ ಅದನ್ನು ಸ್ವೀಡನ್ನಲ್ಲಿ ಲ್ಯಾಂಡ್ ಮಾಡಿಸಲಾಯಿತು. ಎಲ್ಲ ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ. ಇನ್ನು ಲ್ಯಾಂಡ್ ಆಗುವ ಸಮಯದಲ್ಲಿ ಯಾವುದೇ ಅವಘಡ ಆಗದಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತು. ಅಗ್ನಿಶಾಮಕ ದಳ ಮತ್ತು ಇತರ ರಕ್ಷಣಾ ಸಿಬ್ಬಂದಿ ಏರ್ಪೋರ್ಟ್ನಲ್ಲಿ ಸನ್ನದ್ಧರಾಗಿ ನಿಂತಿದ್ದರು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ದ ಅಧಿಕಾರಿ ತಿಳಿಸಿದ್ದಾರೆ. ತೈಲ ಸೋರಿಕೆಯಾಗುತ್ತಿದ್ದ ಎಂಜಿನ್ನ್ನು ಕೂಡಲೇ ಬಂದ್ ಮಾಡಿ, ಇಡೀ ವಿಮಾನವನ್ನು ತಪಾಸಣೆ ಮಾಡಲಾಗಿದೆ.
ಈಗೆರಡು ದಿನಗಳ ಹಿಂದೆ ನ್ಯೂಯಾರ್ಕ್ನಿಂದ ದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ತೀವ್ರ ಅಸ್ವಸ್ಥರಾಗಿ ವೈದ್ಯಕೀಯ ತುರ್ತುಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಲಂಡನ್ಗೆ ಮಾರ್ಗ ಬದಲಿಸಿ, ಅಲ್ಲಿ ಲ್ಯಾಂಡ್ ಮಾಡಿಸಲಾಗಿತ್ತು. ಈ ವಿಮಾನ ನಿಗದಿತ ಸಮಯಕ್ಕಿಂತಲೂ ನಾಲ್ಕು ತಾಸು ತಡವಾಗಿ ದೆಹಲಿಗೆ ತಲುಪಿತ್ತು.