ವಿಮಾನ ಪ್ರಯಾಣದ ಯೋಚನೆಯಲ್ಲಿದ್ದೀರಾ? ಹಾಗಿದ್ದರೆ ಗಮನಿಸಿ. ಏರ್ ಇಂಡಿಯಾವು (Air India) ದೇಶೀಯ ವಿಮಾನಗಳಲ್ಲಿ (domestic flights) ಲಗೇಜ್ ಭಾರವನ್ನು (check-in baggage) 20 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಕೆ ಮಾಡಿದೆ. ಇನ್ನು ಮುಂದೆ 15 ಕೆ.ಜಿ.ಗಿಂತ ಹೆಚ್ಚು ಸಾಮಗ್ರಿ ಒಯ್ಯುವುದಾದರೆ ಅದಕ್ಕೆ ಶುಲ್ಕ ಪಾವತಿ ಮಾಡಲೇಬೇಕು.
ದೇಶೀಯ ವಿಮಾನಗಳಲ್ಲಿ ಕಡಿಮೆ ಆರ್ಥಿಕ ದರದ ವಿಭಾಗದಲ್ಲಿ ಉಚಿತ ಚೆಕ್-ಇನ್ ಬ್ಯಾಗೇಜ್ ಭತ್ಯೆಯನ್ನು 20 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಕೆ ಮಾಡಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಟಾಟಾ ಗ್ರೂಪ್ (Tata Group) ಮಾಲೀಕತ್ವದ ಏರ್ ಇಂಡಿಯಾ ಪರಿಚಯಿಸಿದ ಮೆನು-ಆಧಾರಿತ ಬೆಲೆ ಮಾದರಿಯ ದರದ ಭಾಗವಾಗಿ ಈ ಬದಲಾವಣೆಗಳನ್ನು ಪರಿಚಯಿಸಲಾಗಿದೆ.
ಈ ಮೊದಲು ಏರ್ ಇಂಡಿಯಾದ ದೇಶೀಯ ವಿಮಾನಗಳಲ್ಲಿ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 25 ಕೆ.ಜಿ. ಚೆಕ್-ಇನ್ ಬ್ಯಾಗೇಜ್ ಅನ್ನು ಸಾಗಿಸಲು ಅನುಮತಿಸಲಾಗಿತ್ತು. ಆದರೆ ಇತರ ದೇಶೀಯ ವಾಹಕಗಳಾದ ಇಂಡಿಗೊ, ವಿಸ್ತಾರಾ ಮತ್ತು ಸ್ಪೈಸ್ ಜೆಟ್ 15 ಕೆ.ಜಿ. ಚೆಕ್-ಇನ್ ಬ್ಯಾಗೇಜ್ ಅನ್ನು ನೀಡುತ್ತವೆ. ಬಳಿಕ ಹೆಚ್ಚುವರಿ ಶುಲ್ಕ ವಿಧಿಸುತ್ತಿದೆ.
ಹೇಗಿದೆ?
ಚೆಕ್-ಇನ್ ಬ್ಯಾಗೇಜ್ ನಲ್ಲಿ ಮೂರು ದರದ ಗುಂಪುಗಳಿವೆ. ಒಂದು ಕಂಫರ್ಟ್, ಎರಡನೆದ್ದು ಕಂಫರ್ಟ್ ಪ್ಲಸ್ ಮತ್ತು ಮೂರನೆಯದ್ದು ಫ್ಲೆಕ್ಸ್ . ಈ ಮೂರು ವಿಭಾಗಳಿಗೆ ಪ್ರತ್ಯೇಕ ದರ ನಿಗದಿ ಪಡಿಸಿರುವುದಾಗಿ ಏರ್ ಇಂಡಿಯಾ ವಕ್ತಾರರು ಶನಿವಾರ ತಿಳಿಸಿದ್ದಾರೆ. ವಿವಿಧ ಬೆಲೆಗಳಲ್ಲಿ ವಿಭಿನ್ನ ಮಟ್ಟದ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದಾಗಿದೆ.
ಈಗಾಗಲೇ ಜಾರಿ
ಚೆಕ್-ಇನ್ ಬ್ಯಾಗೇಜ್ ಮಿತಿಯನ್ನು ಮೇ 2ರಿಂದ ಈ ಜಾರಿಗೆ ಬರುವಂತೆ ಕ್ರಮಕೈಗೊಳ್ಳಲಾಗಿದೆ. ಏರ್‌ಲೈನ್ಸ್ ಹೇಳಿಕೆಯ ಪ್ರಕಾರ, ಕಂಫರ್ಟ್ ಮತ್ತು ಕಂಫರ್ಟ್ ಪ್ಲಸ್ ವರ್ಗಗಳಿಗೆ ಉಚಿತ ಚೆಕ್-ಇನ್ ಬ್ಯಾಗೇಜ್ ಭತ್ಯೆಯನ್ನು ಕ್ರಮವಾಗಿ 20 ಮತ್ತು 25 ಕೆ.ಜಿ.ಯಿಂದ 15 ಕೆ.ಜಿ.ಗೆ ಇಳಿಸಲಾಗಿದೆ.
ಬದಲಾವಣೆ
ಎಕಾನಮಿ ಕ್ಲಾಸ್‌ನಲ್ಲಿ ದೇಶೀಯ ಮಾರ್ಗಗಳಲ್ಲಿ ಕಂಫರ್ಟ್ ಮತ್ತು ಕಂಫರ್ಟ್ ಪ್ಲಸ್ ದರಗಳು ಈಗ 15 ಕೆ.ಜಿ. ಲಗೇಜ್ ಭತ್ಯೆಯನ್ನು ನೀಡುತ್ತವೆ. ಆದರೆ ಫ್ಲೆಕ್ಸ್ 25 ಕೆ.ಜಿ.ವರೆಗೆ ಭತ್ಯೆಯನ್ನು ಒದಗಿಸುತ್ತದೆ. ದೇಶೀಯ ಮಾರ್ಗಗಳಲ್ಲಿ ವ್ಯಾಪಾರ ವರ್ಗದ ಬ್ಯಾಗೇಜ್ ಭತ್ಯೆ 25 ಕೆ.ಜಿ.ಯಿಂದ 35 ಕೆ.ಜಿ. ವರೆಗೆ ಇರುತ್ತದೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಉಚಿತ ಲಗೇಜ್ ಭತ್ಯೆಯು ಮಾರುಕಟ್ಟೆಯಿಂದ ಮಾರುಕಟ್ಟೆಗೆ ಬದಲಾಗುತ್ತದೆ ಎಂದು ಏರ್‌ಲೈನ್ ವಕ್ತಾರರು ತಿಳಿಸಿದ್ದಾರೆ.
ಪ್ರಯಾಣಿಕರ ವೈವಿಧ್ಯಮಯ ಆದ್ಯತೆಗಳನ್ನು ಪರಿಗಣಿಸಿ,ಅವಶ್ಯಕತೆಗಳಿಗೆ ಸೂಕ್ತವಾದ ದರ ಮತ್ತು ಸೇವೆಗಳನ್ನು ಆಯ್ಕೆ ಮಾಡಲು ಪ್ರಯಾಣಿಕರಿಗೆ ಅವಕಾಶ ನೀಡಲು ಶುಲ್ಕದಲ್ಲಿ ವ್ಯತ್ಯಾಸಗಳನ್ನು ಮಾಡಲಾಗಿದೆ ಎಂದು ಏರ್ ಲೈನ್ಸ್ ತಿಳಿಸಿದೆ.
ಹೇಗಿದೆ ದರ?
ಕಂಫರ್ಟ್ ಪ್ಲಸ್ ಮತ್ತು ಫ್ಲೆಕ್ಸ್ ದರಗಳ ನಡುವಿನ ಬೆಲೆ ವ್ಯತ್ಯಾಸವು ದೆಹಲಿ- ಮುಂಬಯಿನಂತಹ ದೇಶೀಯ ವಲಯದಲ್ಲಿ ಸಾಮಾನ್ಯವಾಗಿ 1,000 ರೂ. ಆಗಿರುತ್ತದೆ. 10 ಕೆ.ಜಿ. ಹೆಚ್ಚುವರಿ ಬ್ಯಾಗೇಜ್ ಮತ್ತು ಶೂನ್ಯ ಬದಲಾವಣೆ ಅಥವಾ ರದ್ದತಿ ಶುಲ್ಕ ಸೇರಿದಂತೆ 9,000 ರೂ.ವರೆಗೆ ಇರುತ್ತದೆ. ಗ್ರಾಹಕರ ಅಭಿಪ್ರಾಯವನ್ನು ಪಡೆದೇ ಈ ದರವನ್ನು ನಿಗದಿ ಪಡಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.