Site icon Vistara News

ಎನ್​ಎಸ್​ಎ ಅಜಿತ್​ ದೋವಲ್​ಗೆ ಭದ್ರತೆ ನೀಡುತ್ತಿದ್ದ ಮೂವರು ಕಮಾಂಡೋಗಳು ವಜಾ

Ajit Doval

ನವ ದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ಗೆ (NSA Ajit Doval) ಭದ್ರತೆ ಒದಗಿಸುತ್ತಿದ್ದ ಮೂವರು ಸಿಐಎಸ್​ಎಫ್​​ (Central Industrial Security Force)ಕಮಾಂಡೋಗಳನ್ನು ವಜಾಗೊಳಿಸಲಾಗಿದ್ದು, ಒಬ್ಬನನ್ನು ವರ್ಗಾವಣೆ ಮಾಡಿದ್ದಾಗಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಆಗಿದ್ದ ಭದ್ರತಾ ಉಲ್ಲಂಘನೆಗೆ ಸಂಬಂಧಪಟ್ಟಂತೆ ಈ ಕ್ರಮ ಕೈಗೊಂಡಿದ್ದಾಗಿ ವರದಿಯಾಗಿದೆ. 2022ರ ಫೆಬ್ರವರಿಯಲ್ಲಿ ವ್ಯಕ್ತಿಯೊಬ್ಬರ ಅಜಿತ್​ ದೋವಲ್​ ಮನೆಗೆ ನುಗ್ಗಲು ಪ್ರಯತ್ನಿಸಿದ್ದ. ಮನೆಯ ಆವರಣಕ್ಕೂ ಪ್ರವೇಶಿಸಿಬಿಟ್ಟದ್ದ. ಅವನನ್ನು ಮನೆಯೊಳಕ್ಕೆ ಹೋಗದಂತೆ ತಡೆಯಲಾಗಿತ್ತು ಮತ್ತು ನಂತರ ದೆಹಲಿ ಪೊಲೀಸರು ಬಂಧಿಸಿದ್ದರು. ಅಂದಿನ ಭದ್ರತಾ ಲೋಪದ ಕಾರಣಕ್ಕೆ ಈಗ ಮೂವರು ಕಮಾಂಡೋಗಳನ್ನು ಕೆಲಸದಿಂದ ತೆಗೆಯಲಾಗಿದೆ.

ಅಂದು ಅಜಿತ್ ದೋವಲ್​ ಮನೆಗೆ ನುಗ್ಗಲು ಯತ್ನಿಸಿದ ವ್ಯಕ್ತಿ ತುಂಬ ನಿಗೂಢವಾಗಿ ಮಾತನಾಡಿದ್ದ. ನನ್ನ ತಲೆಯಲ್ಲಿ ಒಂದು ಚಿಪ್​ ಇದೆ. ನನ್ನನ್ನು ಬಾಹ್ಯವಾಗಿ ಯಾರೋ ನಿಯಂತ್ರಿಸುತ್ತಿದ್ದಾರೆ. ಅವರು ಸೂಚನೆಕೊಟ್ಟಂತೆ ನಾನು ಕೆಲಸ ಮಾಡುತ್ತೇನೆ ಎಂದಿದ್ದ. ಬಳಿಕ ಅವನನ್ನು ಎಂಆರ್​ಐ ಸ್ಕ್ಯಾನ್​ಗೆ ಒಳಪಡಿಸಲಾಗಿತ್ತು. ಆದರೆ ಅಂಥ ಯಾವುದೇ ಚಿಪ್​ ಕಂಡುಬಂದಿರಲಿಲ್ಲ. ಈತ ಅಜಿತ್ ದೋವಲ್ ಮನೆಗೆ ಬರುವಾಗ ಕೆಂಪು ಬಣ್ಣದ ಎಸ್​ಯುವಿಯನ್ನು ಚಾಲನೆ ಮಾಡಿಕೊಂಡು ಬಂದಿದ್ದ. ದೋವಲ್ ಮನೆ ಸುತ್ತ ಬಿಗಿ ಭದ್ರತೆಯಿದ್ದಾಗ್ಯೂ ಗೇಟ್​ ದಾಟಿದ್ದ.

ಆ ವ್ಯಕ್ತಿಯನ್ನು ಶಂತನು ರೆಡ್ಡಿ ಎಂದು ಗುರುತಿಸಲಾಗಿದ್ದು, ಅಂದು ಆತ ದೋವಲ್​ ನಿವಾಸಕ್ಕೆ ನುಗ್ಗಲು ಪ್ರಯತ್ನಿಸಿದಾಗ ಅಜಿತ್​ ದೋವಲ್​ ಮನೆಯಲ್ಲೇ ಇದ್ದರು. ಆಮೇಲೆ ಅವನನ್ನು ಸಂಪೂರ್ಣವಾಗಿ ವಿಚಾರಿಸಿದಾಗ ಗೊತ್ತಾಗಿದ್ದು, ಆತನೊಬ್ಬ ಮಾನಸಿಕ ರೋಗಿ ಎಂದು ಗೊತ್ತಾಗಿತ್ತು. ಕಾರನ್ನು ನೊಯ್ಡಾದಿಂದ ತಂದಿದ್ದಾಗಿಯೂ ಅವನು ಹೇಳಿಕೊಂಡಿದ್ದ. ಆದರೆ Z ಪ್ಲಸ್​ ಭದ್ರತೆ ಇದ್ದೂ ಅಂದು ಭದ್ರತೆಯಲ್ಲಿ ಲೋಪ ಆಗಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ ಎಂದೂ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಅಜಿತ್‌ ದೋವಲ್‌ರಿಂದ ಎಚ್ಚರಿಕೆಯ ಮಾತು; ಪಿಎಫ್‌ಐ ನಿಷೇಧಿಸಲು ಮುಸ್ಲಿಂ ಪ್ರಮುಖರ ಆಗ್ರಹ

Exit mobile version