ಮುಂಬಯಿ: ಎನ್ಸಿಪಿ ಪಕ್ಷದಲ್ಲಿ ಅಜಿತ್ ಪವಾರ್ಗೆ ಸ್ಥಾನವೇ ಇಲ್ಲವೇ?-ಈಗಾಗಲೇ ಎನ್ಸಿಪಿಯಲ್ಲಿ ಅಜಿತ್ ಪವಾರ್ (Ajit Pawar) ಬಂಡಾಯದ ಹೊಗೆ ಎದ್ದಿದೆ. ಇತ್ತೀಚೆಗೆ ಶರದ್ ಪವಾರ್ (Sharad Pawar) ಅವರು ಎನ್ಸಿಪಿ ಕಾರ್ಯಾಧ್ಯಕ್ಷರನ್ನಾಗಿ (NCP Working President) ತಮ್ಮ ಪುತ್ರಿ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರನ್ನು ನೇಮಕ ಮಾಡಿದ್ದರು. ಆದರೆ ಅಜಿತ್ ಪವಾರ್ಗೆ ಯಾವುದೇ ಸಂಘಟನಾತ್ಮಕ ಹುದ್ದೆಯನ್ನೂ ಕೊಟ್ಟಿರಲಿಲ್ಲ. ಆಗಲೇ ಹಲವು ಬಗೆಯ ಚರ್ಚೆಗಳು ಎದ್ದಿದ್ದವು. ಅದಕ್ಕೀಗ ಮತ್ತಷ್ಟು ತುಪ್ಪ ಸುರಿಯುವಂತೆ ಇನ್ನೊಂದು ಘಟನೆಯಾಗಿದೆ. ಇಂದು ದೆಹಲಿಯಲ್ಲಿ ನಡೆದ ಎನ್ಸಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (NCP National Executive)ಯಲ್ಲಿ ಹಾಕಲಾಗಿದ್ದ ಪೋಸ್ಟರ್ನಲ್ಲಿ ಪಕ್ಷದ ಅಧ್ಯಕ್ಷ ಶರದ್ ಪವಾರ್, ಕಾರ್ಯಾಧ್ಯಕ್ಷರಾದ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಫೋಟೋ ಮಾತ್ರ ಇತ್ತು. ಪಕ್ಷದ ಪ್ರಮುಖರಾದ ಅಜಿತ್ ಪವಾರ್ ಫೋಟೋ ಇರಲಿಲ್ಲ. ಈ ವಿಷಯವೂ ಈಗ ಮುನ್ನೆಲೆಗೆ ಬಂದಿದೆ.
ಎನ್ಸಿಪಿ ನಾಯಕ ಅಜಿತ್ ಪವಾರ್ ಅವರು ಶರದ್ ಪವಾರ್ ಸೋದರಳಿಯನೇ ಆಗಬೇಕು. ಕಳೆದ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಸರ್ಕಾರ ರಚನೆ ಮಾಡಲು ಯತ್ನಿಸುತ್ತಿದ್ದರೆ, ಇತ್ತ ಅಜಿತ್ ಪವಾರ್ ಮೌನವಾಗಿ, ಒಬ್ಬಂಟಿಯಾಗಿ ಹೋಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದರು. ರಾತ್ರಿ ಬೆಳಗು ಆಗುವುದರೊಳಗೆ ಅಜಿತ್ ಪವಾರ್ ಉಪಮುಖ್ಯಮಂತ್ರಿ, ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿದ್ದರು. ಆದರೆ ಒಂದೇ ದಿನ ಈ ಮೈತ್ರಿ ಕಳಚಿಬಿದ್ದು, ಅಜಿತ್ ಪವಾರ್ ವಾಪಸ್ ಎನ್ಸಿಪಿ ಗೂಡು ಸೇರಿಕೊಂಡದ್ದರು. ಅಲ್ಲಿಂದ ಶುರುವಾದ ಗೊಂದಲ ಪದೇಪದೆ ಹೊಸಹೊಸ ಸ್ವೂರಪದಲ್ಲಿ ಹೊರಬೀಳುತ್ತಿದೆ.
ಇದನ್ನೂ ಓದಿ: Ajit Pawar: ಪಕ್ಷದ ಹುದ್ದೆಗೆ ಅಜಿತ್ ಪವಾರ್ ಪಟ್ಟು, ಇಲ್ಲದಿದ್ದರೆ ಎನ್‌ಸಿಪಿಗೆ ಪೆಟ್ಟು?
ಸದ್ಯ ಅಜಿತ್ ಪವಾರ್ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದಾರೆ. ಆದರೆ ಅವರು ತಮಗೆ ಈ ಪ್ರತಿಪಕ್ಷ ನಾಯಕನ ಸ್ಥಾನ ಬೇಡ ಎನ್ನುತ್ತಿದ್ದಾರೆ. ’ಈ ಪ್ರತಿಪಕ್ಷನ ನಾಯಕನ ಸ್ಥಾನದಿಂದ ನನ್ನನ್ನು ತೆರವುಗೊಳಿಸುವಂತೆ ಪಕ್ಷದ ನಾಯಕರ ಬಳಿ ಕೇಳಿದ್ದೇನೆ. ಇದರ ಹೊರತುಪಡಿಸಿ ಪಕ್ಷದಲ್ಲಿ ಯಾವುದೇ ಸಂಘಟನಾತ್ಮಕ ಹುದ್ದೆಯನ್ನು ನನಗೆ ಕೊಡಲಿ’ ಎಂದು ಇತ್ತೀಚೆಗಷ್ಟೇ ಹೇಳಿದ್ದರು. ಹೀಗೆಲ್ಲ ಇರುವಾಗ ಪೋಸ್ಟರ್ನಲ್ಲಿ ಕೂಡ ಅವರ ಫೋಟೋ ಕೈಬಿಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ.