ನವ ದೆಹಲಿ: ಭಾರತದ ಖ್ಯಾತ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಮಾಲೀಕತ್ವದ ಹೊಸ ಏರ್‌ಲೈನ್ಸ್ ಆಕಾಶ ಏರ್‌ನಿಂದ ಮೊದಲ ವಾಣಿಜ್ಯ ವಿಮಾನ ಆಗಸ್ಟ್ 7ರಂದು ಹಾರಾಡಲಿದೆ. ಅಂದು ಬೋಯಿಂಗ್ 737 ಮ್ಯಾಕ್ಸ್ ವಿಮಾನ ಮುಂಬೈನಿಂದ ಅಹ್ಮದಾಬಾದ್‌ಗೆ ತೆರಳುವ ಮೂಲಕ, ದೇಶದಲ್ಲಿ ಹೊಸದೊಂದು ಏರ್‌ಲೈನ್ಸ್ ಅಧಿಕೃತವಾಗಿ ಶುರುವಾಗಲಿದೆ. ಈ ಬಗ್ಗೆ ಇಂದು ಆಕಾಶ ಏರ್‌ಲೈನ್ಸ್ ಪ್ರಕಟಣೆ ಬಿಡುಗಡೆ ಮಾಡಿದ್ದು, ʼಆಗಸ್ಟ್ 7ರಿಂದ ಸಂಚಾರ ಪ್ರಾರಂಭಿಸಿ, ವಾರಕ್ಕೊಮ್ಮೆ ಹಾರಾಟ ನಡೆಸುವ ಮುಂಬೈ-ಅಹ್ಮದಾಬಾದ್ ಮಾರ್ಗದ 28ವಿಮಾನಗಳು ಮತ್ತು ಆಗಸ್ಟ್ 13ರಿಂದ ಸಂಚಾರ ಶುರು ಮಾಡಿ, ವಾರಕ್ಕೊಮ್ಮೆ ಹಾರಾಟ ನಡೆಸುವ ಬೆಂಗಳೂರು-ಕೊಚ್ಚಿ ಮಾರ್ಗದ 28ವಿಮಾನಗಳ ಟಿಕೆಟ್ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಿದ್ದೇವೆʼ ಎಂದು ತಿಳಿಸಿದೆ.
ಹೊಚ್ಚ ಹೊಸದಾದ ಬೋಯಿಂಗ್ 737 ಮ್ಯಾಕ್ಸ್ ವಿಮಾನವನ್ನು ಮುಂಬೈ – ಅಹ್ಮದಾಬಾದ್ ಮಾರ್ಗದಲ್ಲಿ ಹಾರಿಸುವ ಮೂಲಕ ನಾವು ನಮ್ಮ ಏರ್‌ಲೈನ್ಸ್‌ನ ವಿಮಾನ ಸಂಚಾರ ಕಾರ್ಯಾಚರಣೆ ಪ್ರಾರಂಭ ಮಾಡುತ್ತಿದ್ದೇವೆ ಎಂದು ಆಕಾಶ ಏರ್‌ನ ಸಹ ಸಂಸ್ಥಾಪಕ ಮತ್ತು ಮುಖ್ಯ ವಾಣಿಜ್ಯಾಧಿಕಾರಿ ಆಗಿರುವ ಪ್ರವೀಣ್ ಅಯ್ಯರ್ ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಏರೋಸ್ಪೇಸ್ ಕಂಪನಿ ಮತ್ತು ವಾಣಿಜ್ಯ ವಿಮಾನಗಳ ತಯಾರಕ ಕಂಪನಿ ಬೋಯಿಂಗ್‌ನ ಎರಡು ವಿಮಾನಗಳ ಮೂಲಕ ಸದ್ಯ ಆಕಾಶ ಏರ್ ಕಾರ್ಯನಿರ್ವಹಿಸಲಿದೆ. ಈಗಾಗಲೇ ಒಂದು ವಿಮಾನ ಕಂಪನಿಗೆ ಲಭ್ಯವಾಗಿದ್ದು, ಇನ್ನೊಂದು ವಿಮಾನ ಜುಲೈ ಅಂತ್ಯದ ವೇಳೆಗೆ ಸಿಗಲಿದೆ ಎಂದೂ ಆಕಾಶ್ ಏರ್ ಹೇಳಿಕೊಂಡಿದೆ.
ಆಕಾಶ್ ಏರ್‌ನ ಮಾಲೀಕ ರಾಕೇಶ್ ಜುಂಜುನ್‌ವಾಲಾ (62) ಖ್ಯಾತ ಹೂಡಿಕೆದಾರರಲ್ಲಿ ಒಬ್ಬರು. ಅವರೀಗ ಹೊಸದೊಂದು ಏರ್‌ಲೈನ್ಸ್ ಸ್ಥಾಪಿಸಿದ್ದಾರೆ. ಇವರಿಗೆ ವಿಮಾನಯಾನ ಸಂಸ್ಥೆ ಸ್ಥಾಪಿಸಲು ಭಾರತದ ವಿಮಾನಯಾನ ಮಹಾ ನಿರ್ದೇಶನಾಲಯ (DGCA)2021ರ ಆಗಸ್ಟ್‌ನಲ್ಲಿ ಅನುಮತಿ ನೀಡಿದ ಬಳಿಕ, ನವೆಂಬರ್‌ನಲ್ಲಿ ಬೋಯಿಂಗ್ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಅದರ ಅನ್ವಯ ಬೋಯಿಂಗ್ ಒಟ್ಟು 72 ಮ್ಯಾಕ್ಸ್ ವಿಮಾನಗಳನ್ನು ಆಕಾಶ ಏರ್‌ಗೆ ನೀಡಲಿದೆ. ಹಾಗೇ, ಈ ಸಂಸ್ಥೆಗೆ ಡಿಜಿಸಿಎ ಜುಲೈ 2ರಂದು ವಿಮಾನ ಹಾರಾಟಕ್ಕೆ ಸಂಬಂಧಪಟ್ಟು ಪ್ರಮಾಣಪತ್ರ ನೀಡಿ, ಕಾರ್ಯಾಚರಣೆಗೆ ಅನುಮೋದನೆ ನೀಡಿದೆ.
ಇದನ್ನೂ ಓದಿ: ವಿಸ್ತಾರ Explainer| ಭಾರತದ ಆಕಾಶದಲ್ಲಿ ಆಕಾಶ್ ಏರ್ ಕ್ರಾಂತಿಗೆ ದಿನಗಣನೆ ಶುರು!