ನವ ದೆಹಲಿ: ಭಾರತದ ವಾಯುಯಾನ ಕ್ಷೇತ್ರಕ್ಕೆ ಮೂರು ತಿಂಗಳ ಹಿಂದೆ ಪ್ರವೇಶ ಮಾಡಿರುವ ಆಕಾಸ ಏರ್ ಸಂಸ್ಥೆಯ ವಿಮಾನ ಪುಣೆ-ಬೆಂಗಳೂರು ಮಾರ್ಗದಲ್ಲಿ ಶನಿವಾರ (ನ.26)ದಿಂದ ಹಾರಾಟ ಶುರು ಮಾಡಿದೆ. ಈ ಎರಡೂ ನಗರಗಳ ನಡುವೆ ಪ್ರತಿದಿನ ಮೂರು ವಿಮಾಗಳು ಸಂಚರಿಸುವುದಾಗಿ ಆಕಾಸ ಏರ್ ಪ್ರಕಟಿಸಿದೆ.
ನವೆಂಬರ್ 26ರಂದು ಟ್ವೀಟ್ ಮಾಡಿರುವ ಆಕಾಸ ಏರ್ ಸಂಸ್ಥೆ, ಇದೇ ಮೊದಲ ಬಾರಿಗೆ ಪುಣೆಯಿಂದ ಆಕಾಸ ಏರ್ನ ವಿಮಾನ ಟೇಕ್ ಆಫ್ ಆಗಿ ಬೆಂಗಳೂರಿಗೆ ಹೊರಟಿದೆ. ಇದು ತುಂಬ ಅದ್ಭುತ ಎನ್ನಿಸುತ್ತದೆ. ಎರಡೂ ನಗರಗಳ ನಡುವೆ ಪ್ರತಿದಿನ ಮೂರು ವಿಮಾನಗಳು ಸಂಚಾರ ಮಾಡಲಿದ್ದು, ಆಕಾಸ ಏರ್ನ ವೆಬ್ಸೈಟ್ಗೆ ಭೇಟಿಕೊಟ್ಟು, ಅಲ್ಲಿಂದಲೇ ಟಿಕೆಟ್ ಬುಕ್ ಮಾಡಬಹುದು’ ಎಂದು ತಿಳಿಸಿದೆ.
ಆಕಾಸ ಏರ್ನಿಂದ ಈಗಾಗಲೇ ಬೆಂಗಳೂರು-ಮುಂಬಯಿ ನಡುವೆ ಐದು ವಿಮಾನಗಳು ಸಂಚಾರ ಮಾಡುತ್ತಿದ್ದವು. ನವೆಂಬರ್ 26ರಿಂದ ಈ ಮಾರ್ಗಕ್ಕೆ ಮತ್ತೆರಡು ವಿಮಾನಗಳು ಸೇರ್ಪಡೆಗೊಂಡಿವೆ. ಅಲ್ಲಿಗೆ ಆಕಾಸ ಏರ್ನ ಒಟ್ಟು ಐದು ವಿಮಾನಗಳು ಬೆಂಗಳೂರು-ಮುಂಬಯಿ ಮಾರ್ಗದಲ್ಲಿ ಸಂಚರಿಸಲು ಶುರು ಮಾಡಿವೆ. ಈಗ ಎರಡು ಐಟಿ ಸಿಟಿಗಳಾದ ಬೆಂಗಳೂರು-ಪುಣೆ ಮಧ್ಯೆಯೂ ವಿಮಾನ ಸಂಚಾರ ಪ್ರಾರಂಭವಾಗಿದ್ದು, ಇದು ಸಂಪರ್ಕವನ್ನು ಇನ್ನಷ್ಟು ವಿಸ್ತರಿಸಿಲಿದೆ ಎಂದು ಆಕಾಸ ಏರ್ ಸಹಸಂಸ್ಥಾಪಕ ಪ್ರವೀಣ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
ಆಕಾಸ ಏರ್ ಸಂಸ್ಥೆ ಕಾರ್ಯಾರಂಭ ಮಾಡಿದ್ದು ಆಗಸ್ಟ್ 7ರಂದು. ಅಂದು ಮೊದಲ ವಿಮಾನ ಮುಂಬಯಿ-ಅಹ್ಮದಾಬಾದ್ ಮಾರ್ಗದಲ್ಲಿ ಹಾರಾಟ ನಡೆಸಿದೆ. ಈಗ ಒಂದೊಂದೇ ಮಾರ್ಗಕ್ಕೆ ವಿಮಾನ ಹಾರಾಟವನ್ನು ಆಕಾಸ ಏರ್ ವಿಸ್ತರಿಸುತ್ತಿದೆ. ಡಿಸೆಂಬರ್ 10ರಂದು ಬೆಂಗಳೂರು-ವಿಶಾಖಪಟ್ಟಣ ಮಧ್ಯೆ ಮತ್ತು ಡಿಸೆಂಬರ್ 12ರಂದು ಬೆಂಗಳೂರು-ಅಹ್ಮದಾಬಾದ್ ನಡುವೆ ಆಕಾಸ ಏರ್ ಸಂಸ್ಥೆಯಿಂದ ವಿಮಾನ ಹಾರಾಟ ಶುರುವಾಗುವುದು.
ಇದನ್ನೂ ಓದಿ: Akasa Air | ಆಕಾಸ ಏರ್ ವಿಮಾನಕ್ಕೆ 1900 ಅಡಿ ಎತ್ತರದಲ್ಲಿ ಹಕ್ಕಿ ಡಿಕ್ಕಿ; ರೇಡೋಮ್ ಮೇಲೆ ರಕ್ತದ ಕಲೆ