ಲಖನೌ: ಸಮಾಜವಾದಿ ಪಕ್ಷದ ರಾಜಕಾರಣಿಯಾಗಿದ್ದ, ಗ್ಯಾಂಗ್ಸ್ಟರ್ ಅತೀಕ್ ಅಹ್ಮದ್ ಮಗ ಅಸಾದ್ ಅಹ್ಮದ್ನನ್ನು ಎನ್ಕೌಂಟರ್ (Asad Encounter)ಮಾಡಿದ್ದಕ್ಕೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತೀವ್ರ ಕಿಡಿಕಾರಿದ್ದಾರೆ. ‘ಉತ್ತರ ಪ್ರದೇಶ ಸರ್ಕಾರ ಇಂಥ ನಕಲಿ ಎನ್ಕೌಂಟರ್ಗಳ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನ ಮಾಡುತ್ತಿದೆ ಎಂದಿದ್ದಾರೆ.
ರಾಜ್ಯದಲ್ಲಿ ಹಲವು ಸಮಸ್ಯೆಗಳು ಇವೆ. ಜನರ ಲಕ್ಷ್ಯವನ್ನು ಈ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಯುಪಿ ಸರ್ಕಾರ ಹುನ್ನಾರ ಮಾಡುತ್ತಿದೆ. ಬಿಜೆಪಿ ಸರ್ಕಾರಕ್ಕೆ ನ್ಯಾಯಾಲಯ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಕೂಡ ನಂಬಿಕೆ ಇಲ್ಲ. ಇವತ್ತಿನ ಮತ್ತು ಈ ಹಿಂದೆ ನಡೆದ ಎಲ್ಲ ಎನ್ಕೌಂಟರ್ಗಳನ್ನೂ ಸೂಕ್ತ ತನಿಖೆಗೆ ಒಳಪಡಿಸಬೇಕು. ಯಾವುದು ತಪ್ಪು, ಯಾವುದು ಸರಿ ಎಂದು ನಿರ್ಧರಿಸುವ ಅಧಿಕಾರ ಆಡಳಿತದಲ್ಲಿ ಇರುವವರಿಗೆ ಇರುವುದಿಲ್ಲ. ಬಿಜೆಪಿ ಸಾಮರಸ್ಯ ವಿರೋಧಿಯಾಗಿದೆ’ ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ. ಹಾಗೇ, ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಕೂಡ ಟ್ವೀಟ್ ಮಾಡಿ, ‘ಅತೀಕ್ ಅಹ್ಮದ್ ಎನ್ಕೌಂಟರ್ ಬಗ್ಗೆ ಹಲವು ರೀತಿಯ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಹೇಳಿದ್ದಾರೆ.
2005ರಲ್ಲಿ ಬಹುಜನ ಸಮಾಜ ಪಾರ್ಟಿ ಶಾಸಕ ರಾಜು ಪಾಲ್ ಹತ್ಯೆಯಾಗಿತ್ತು. ಈ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ, ವಕೀಲ ಉಮೇಶ್ ಪಾಲ್ರನ್ನು 2006ರಲ್ಲಿ ಅಪಹರಣ ಮಾಡಲಾಗಿತ್ತು. ಇದೆರಡೂ ಕೇಸ್ನಲ್ಲೂ ಅತೀಕ್ ಅಹ್ಮದ್ ಆರೋಪಿಯಾಗಿದ್ದಾನೆ. ಈ ಉಮೇಶ್ ಪಾಲ್ ಅವರನ್ನು 2023ರ ಫೆಬ್ರವರಿಯಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯಲ್ಲಿ ಅಸಾದ್ ಅಹ್ಮದ್ ಕೈವಾಡ ಕೂಡ ಇದೆ ಎಂದು ಹೇಳಲಾಗಿದೆ. ಕಳೆದ ಒಂದೂವರೆ ತಿಂಗಳಿಂದಲೂ ಇವನು ಮತ್ತು ಇನ್ನೊಬ್ಬ ಆರೋಪಿ ಗುಲಾಮ್ ಎಂಬಾತ ತಪ್ಪಿಸಿಕೊಂಡಿದ್ದರು. ಇಂದು ಝಾನ್ಸಿ ಬಳಿ ಸಿಕ್ಕಿಬಿದ್ದಿದ್ದಲ್ಲದೆ, ಪೊಲೀಸರ ಮೇಲೇ ಫೈರಿಂಗ್ ನಡೆಸಿದ್ದಾರೆ. ಹೀಗಾಗಿ ಪೊಲೀಸರು ಅವರ ಮೇಲೆ ಪ್ರತಿದಾಳಿ ನಡೆಸಿ ಹತ್ಯೆ ಮಾಡಿದ್ದಾರೆ.