ಅಲಿಗಢ್: ಇಂದು ಹೋಳಿ ಹುಣ್ಣಿಮೆ ಹಬ್ಬ ಇರುವ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶದ ಅಲಿಗಢ್ನಲ್ಲಿರುವ ‘ಅಬ್ದುಲ್ ಕರೀಂ’ ಮಸೀದಿಯನ್ನು ನಿನ್ನೆ (ಮಾ.6)ರಾತ್ರಿಯೇ ಟಾರ್ಪಾಲಿನ್ (ತಾಡಪಾಲು)ನಿಂದ ಮುಚ್ಚಿಡಲಾಗಿದೆ. ಅರೆ, ಹಿಂದುಗಳ ಹೋಳಿ ಹಬ್ಬಕ್ಕೂ, ಮುಸ್ಲಿಮರ ಮಸೀದಿಗೂ ಏನು ಸಂಬಂಧ? ಅವರ್ಯಾಕೆ ಮಸೀದಿ ಮುಚ್ಚಿದ್ದು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಮತ್ತೇನಕ್ಕೂ ಅಲ್ಲ, ಹೋಳಿ ಹಬ್ಬದ ದಿನ ಮಸೀದಿಗೆ ಯಾರೂ ಬಣ್ಣ ಬಳಿಯದೇ ಇರಲಿ ಎಂಬ ಕಾರಣಕ್ಕೆ ಈ ಮಸೀದಿಗೆ ಕಪ್ಪು ಬಣ್ಣದ, ದೊಡ್ಡದಾದ ತಾಡಪಾಲು ಹೊದಿಸಿಡಲಾಗಿದೆ.
ಹೋಳಿ ಹಬ್ಬದ ದಿನ ಶಾಂತಿ ಕಾಪಾಡಿಕೊಳ್ಳಬೇಕು. ಕಾನೂನು-ಸುವ್ಯವಸ್ಥೆಗೆ ಯಾರೇ ಧಕ್ಕೆ ತಂದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶ ಪೊಲೀಸ್ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಪ್ರತಿ ಜಿಲ್ಲೆಯಲ್ಲೂ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಅಲಿಗಢ್ನಲ್ಲಿ ಈ ಅಬ್ದುಲ್ ಕರೀಂ ಮಸೀದಿ ಇರುವ ಪ್ರದೇಶ ಸೂಕ್ಷ್ಮ ಪ್ರದೇಶ ಎನ್ನಿಸಿಕೊಂಡಿದೆ. ಇಲ್ಲಿ ಕೋಮುಗಲಾಟೆ, ಗಲಭೆಗಳು ನಡೆಯುತ್ತಲೇ ಇರುತ್ತವೆ. ಹೀಗಾಗಿ ಹೋಳಿ ಹಬ್ಬದ ದಿನ ಯಾವುದೇ ಸಮಸ್ಯೆ ಆಗದಿರಲಿ, ಮಸೀದಿಗೆ ಯಾರೂ ಬಣ್ಣ ಬಳಿಯದೆ ಇರಲಿ ಎಂಬ ಕಾರಣಕ್ಕೆ ಅಲ್ಲಿನ ಆಡಳಿತ ಹೀಗೊಂದು ತೀರ್ಮಾನ ತೆಗೆದುಕೊಂಡಿದೆ.
ಇದನ್ನೂ ಓದಿ: Holi 2023: ಹೋಳಿ ಹಬ್ಬ ಸಂಭ್ರಮಿಸಲು ಸುರಕ್ಷತೆಯ ಹತ್ತು ಸೂತ್ರಗಳು!
ಈ ಬಗ್ಗೆ ಮಸೀದಿ ಆಡಳಿತ ಮಂಡಳಿಯ ಹಾಜಿ ಮೊಹಮ್ಮದ್ ಇಕ್ಬಾಲ್ ಮಾತನಾಡಿ ‘ನಾವು ಕಳೆದ ಆರೇಳು ವರ್ಷಗಳಿಂದಲೂ ಹೋಳಿ ಹುಣ್ಣಿಮೆಯ ಮುನ್ನಾದಿನ ಮಸೀದಿಯನ್ನು ತಾಡಪಾಲಿನಿಂದ ಮುಚ್ಚಿಡುತ್ತಿದ್ದೇವೆ. ನಮಗೆ ಈ ನಿರ್ದೇಶನ ಕೊಟ್ಟಿದ್ದು ಸ್ಥಳೀಯ ಆಡಳಿತ. ಹೋಳಿ ಹಬ್ಬದ ದಿನ ಮಸೀದಿಗೆ ಬಣ್ಣ ಎರಚುವುದು, ಅದು ದೊಡ್ಡ ವಿಷಯವಾಗಿ ಕಾನೂನು ಸುವ್ಯವಸ್ಥೆ ಹದಗೆಡುವುದನ್ನು ತಪ್ಪಿಸಲು ಹೀಗೆ ಮಾಡಲಾಗುತ್ತಿದೆ’ ಎಂದಿದ್ದಾರೆ.