ಲಖನೌ: 2005ರಲ್ಲಿ ಬಹುಜನ ಸಮಾಜ ಪಾರ್ಟಿಯ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ರನ್ನು 2006ರಲ್ಲಿ ಅಪರಹಣ ಮಾಡಿದ ಆರೋಪದಡಿ ಗ್ಯಾಂಗ್‌ಸ್ಟರ್, ರಾಜಕಾರಣಿ ಅತಿಕ್ ಅಹ್ಮದ್ (Atiq Ahmed)ಗೆ ಇಂದು ಪ್ರಯಾಗ್ರಾಜ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಅತಿಕ್ ಅಹ್ಮದ್ ಸಮಾಜವಾದಿ ಪಕ್ಷ (ಅಖಿಲೇಶ್ ಯಾದವ್ ಪಕ್ಷ)ದ ರಾಜಕಾರಣಿಯಾಗಿದ್ದ. ಫಲ್ಪುರ ಕ್ಷೇತ್ರದ ಸಂಸದನಾಗಿದ್ದ. ರಾಜು ಪಾಲ್ ಹತ್ಯೆಯಲ್ಲಿ ಈತನ ಕೈವಾಡ ಇದೆ ಮತ್ತು ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಅಪಹರಣ ಕೇಸ್ನಲ್ಲಿ ಕೂಡ ಭಾಗಿಯಾದ ಆರೋಪ ಹೊತ್ತ ಹಿನ್ನೆಲೆಯಲ್ಲಿ ಅವನನ್ನು 2009ರಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.
ಈ ಅತೀಕ್ ಅಂತಿಂಥಾ ಕ್ರಿಮಿನಲ್ ಅಲ್ಲ, ರಾಜಕಾರಣಿಯಾಗಿದ್ದರೂ, ಅದರಾಚೆಗೆ ಹಲವು ಸಮಾಜ ವಿರೋಧಿ ಕೃತ್ಯ ಎಸಗಿದ್ದಾನೆ. 1985ರಿಂದ ಅವರ ವಿರುದ್ಧ ಸುಮಾರು 100ಕೇಸ್ಗಳು ದಾಖಲಾಗಿದ್ದವು. ಅದರಲ್ಲಿ ಇನ್ನೂ 50 ಕ್ಕೂ ಹೆಚ್ಚು ಕೇಸ್ಗಳು ವಿಚಾರಣಾ ಹಂತದಲ್ಲೇ ಇದ್ದರೆ, 12 ಕೇಸ್ನಲ್ಲಿ ಖುಲಾಸೆಗೊಂಡಿದ್ದಾನೆ. ಎರಡು ಕೇಸ್ಗಳನ್ನು 2004ರಲ್ಲಿ ಅಂದರೆ ಅತೀಕ್ ಮೊದಲ ಬಾರಿ ಸಂಸದನಾದ ನಂತರ ಉತ್ತರ ಪ್ರದೇಶದಲ್ಲಿ ಅಂದು ಇದ್ದ ಸಮಾಜವಾದಿ ಪಕ್ಷದ ಸರ್ಕಾರ ವಾಪಸ್ ಪಡೆದಿತ್ತು. ಇನ್ನು ಇವನ ಸಹೋದರ ಆಶ್ರಫ್ ವಿರುದ್ಧ 53 ಕೇಸ್ಗಳಿದ್ದು, ಅದರಲ್ಲಿ ಇದುವರೆಗೆ ಒಂದು ಕೇಸ್ನಲ್ಲಿ ಖುಲಾಸೆ ಗೊಂಡಿದ್ದಾನೆ. ಉಳಿದೆಲ್ಲ ಕೇಸ್ಗಳೂ ವಿಚಾರಣೆ ಹಂತದಲ್ಲಿವೆ.
ಇದನ್ನೂ ಓದಿ: 2006ರ ಅಪಹರಣ ಪ್ರಕರಣ: ಗ್ಯಾಂಗ್‌ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ಗೆ ಜೀವಾವಧಿ ಶಿಕ್ಷೆ, ಸಹೋದರನ ಖುಲಾಸೆ
ಅತಿಕ್ನ ಒಬ್ಬ ಮಗನ ವಿರುದ್ಧ ಎಂಟು ಕೇಸ್ಗಳು ಇದ್ದು, ಅದರಲ್ಲಿ ಏಳು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಒಂದು ಕೇಸ್ ಬಗ್ಗೆ ತನಿಖೆ ನಡೆಯುತ್ತಿದೆ. ಹಾಗೇ ಇನ್ನೊಬ್ಬ ಪುತ್ರ ಉಮರ್ ಅಹ್ಮದ್ ವಿರುದ್ಧದ ಕೇಸ್ವೊಂದು ಸಿಬಿಐ ಕೋರ್ಟ್ನಲ್ಲಿ ಬಾಕಿ ಇದ್ದು, ಇನ್ನೊಂದು ಪ್ರಕರಣದ ತನಿಖೆ ಮುಂದುವರಿದಿದೆ. ಮತ್ತೂ ಒಬ್ಬ ಪುತ್ ಅಸಾದ್ ವಿರುದ್ಧ ಒಂದು ಕೇಸ್ ಇದೆ. ಪತ್ನಿ ಶೈಷ್ಟಾ ವಿರುದ್ಧವೂ ನಾಲ್ಕು ಕೇಸ್ಗಳಿದ್ದಾವೆ. ಒಟ್ಟಾರೆ ಇದು ಕ್ರಿಮಿನಲ್ ಕುಟುಂಬವೇ ಎನ್ನಿಸಿದೆ.
ಮರಣದಂಡನೆಗೆ ಆಗ್ರಹ
ಉಮೇಶ್ ಪಾಲ್ ಅಪಹರಣದಲ್ಲಿ ಅತೀಕ್ ಅಹ್ಮದ್ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಉಮೇಶ್ ಪಾಲ್ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಅತೀಕ್ಗೆ ಮರಣ ದಂಡನೆ ವಿಧಿಸಬೇಕು ಎಂದು ಕೇಳಿದ್ದಾರೆ. ಅಷ್ಟೆ ಅಲ್ಲ ನನಗೆ ಯೋಗಿ ಆದಿತ್ಯನಾಥ್ ಮೇಲೆ ನಂಬಿಕೆಯಿದೆ. ಖಂಡಿತವಾಗಿಯೂ ಅತೀಕ್ಗೆ ಮರಣ ದಂಡನೆ ವಿಧಿಸುತ್ತಾರೆ ಎಂದೂ ಹೇಳಿದ್ದಾರೆ. ಸದ್ಯ ಅತೀಕ್ನನ್ನು ವಾಪಸ್ ಶಬರಿಮತಿ ಜೈಲಿಗೆ ಕಳಿಸಲಾಗಿದೆ.