ನವ ದೆಹಲಿ: ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ವಿರುದ್ಧ ಬೇರೆಬೇರೆ ರಾಜ್ಯಗಳ, ವಿವಿಧ ಠಾಣೆಗಳಲ್ಲಿ ದಾಖಲಾದ ಎಫ್ಐಆರ್ಗಳನ್ನೆಲ್ಲ ದೆಹಲಿಗೇ ವರ್ಗಾಯಿಸಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ನೂಪುರ್ ಶರ್ಮಾರಿಗೆ ಇರುವ ಜೀವ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ಆಕೆ ವಿಚಾರಣೆಗೆ ಬೇರೆ ರಾಜ್ಯಗಳಿಗೆ ಹೋಗುವುದು ಸೂಕ್ತವಲ್ಲ ಎಂದು ಪರಿಗಣಿಸಿ ಎಲ್ಲ ಎಫ್ಐಆರ್ಗಳನ್ನೂ ಒಂದೆಡೆಗೆ ವರ್ಗಾಯಿಸಲು ಅನುಮತಿ ಕೊಟ್ಟಿದ್ದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಜ್ಞಾನವಾಪಿ ಮಸೀದಿ ಕೇಸ್ ಬಗ್ಗೆ ಮಾತನಾಡಲು ಟಿವಿ ಚಾನಲ್ವೊಂದಕ್ಕೆ ಹೋಗಿದ್ದರು. ಅಲ್ಲಿ ಪ್ಯಾನಲ್ ಡಿಸ್ಕಶನ್ ವೇಳೆ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನ ಮಾಡಿ ಮಾತನಾಡಿದ್ದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಸ್ಲಿಮ್ ಸಮುದಾಯದವರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ, ಹಿಂಸಾಚಾರ ನಡೆಸಿದ್ದರು. ಗಲ್ಫ್ ರಾಷ್ಟ್ರಗಳೂ ಕೂಡ ಭಾರತದಿಂದ ಸ್ಪಷ್ಟನೆ ಕೇಳಿದ್ದವು. ಆದರೆ ಬಿಜೆಪಿ ಈ ಎಲ್ಲ ವಿವಾದಗಳಿಂದ ಅಂತರ ಕಾಯ್ದುಕೊಂಡಿತ್ತು. ನೂಪುರ್ ಶರ್ಮಾ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಅಮಾನತು ಮಾಡಿದೆ.
ಇದೆಲ್ಲದರ ಮಧ್ಯೆ ನೂಪುರ್ ಶರ್ಮಾರಿಗೆ ವಿಪರೀತ ಎನ್ನುವಷ್ಟು ಜೀವ ಬೆದರಿಕೆ ಇದೆ. ತನಗೆ ನಿರಂತರವಾಗಿ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಬರುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದರು. ಹಾಗೇ, ಪ್ರವಾದಿ ಮೊಹಮ್ಮದ್ರನ್ನು ಅವಹೇಳನ ಮಾಡಿದ್ದಕ್ಕಾಗಿ ವಿವಿಧ ಮುಸ್ಲಿಂ ಸಂಘಟನೆಗಳು, ಮುಸ್ಲಿಂ ಮುಖಂಡರು ನೂಪುರ್ ಶರ್ಮಾ ವಿರುದ್ಧ ಕೇಸ್ ದಾಖಲಿಸಿದ್ದರು. ಆಕೆ ವಿರುದ್ಧ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ತೆಲಂಗಾಣ, ದೆಹಲಿಯ ವಿವಿಧ ಠಾಣೆಗಳಲ್ಲಿ 9 ಎಫ್ಐಆರ್ಗಳು ದಾಖಲಾಗಿವೆ. ಅಸ್ಸಾಂ, ಕರ್ನಾಟಕ, ರಾಜಸ್ಥಾನ, ಆಂಧ್ರಪ್ರದೇಶ, ಉತ್ತರ ಪ್ರದೇಶಗಳಲ್ಲೂ ನೂಪುರ್ ವಿರುದ್ಧ ಕೇಸ್ ರಿಜಿಸ್ಟರ್ ದಾಖಲಾಗಿದೆ ಎಂದು ಹೇಳಲಾಗಿದೆಯಾದರೂ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
‘ಹೀಗೆ ನಾಲ್ಕೈದು ರಾಜ್ಯಗಳಲ್ಲಿ ಎಫ್ಐಆರ್ ದಾಖಲಾಗಿದ್ದು ನನಗೆ ಕಷ್ಟವಾಗಿದೆ. ಪ್ರಾಣ ಅಪಾಯದಲ್ಲಿ ಇರುವುದರಿಂದ ಈ ಹೊತ್ತಲ್ಲಿ ನಾನು ದೆಹಲಿ ಬಿಟ್ಟು ಹೊರಹೋಗುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಎಲ್ಲ ಎಫ್ಐಆರ್ಗಳನ್ನೂ ದೆಹಲಿಗೇ ವರ್ಗಾಯಿಸಿಕೊಡಬೇಕು’ ಎಂದು ನೂಪುರ್ ಶರ್ಮಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಮೊದಲು ಜುಲೈ 1ರಂದು ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟ್ ಪೀಠ, ನೂಪುರ್ ಶರ್ಮಾರಿಗೆ ಛೀಮಾರಿ ಹಾಕಿತ್ತು. ನೂಪುರ್ ಶರ್ಮಾ ಮಾಡಿದ್ದು ತಪ್ಪು, ಆಕೆ ಇಡೀ ದೇಶದ ಕ್ಷಮೆ ಯಾಚಿಸಬೇಕು ಎಂದೂ ಹೇಳಿತ್ತು. ಆದರೆ ಎಫ್ಐಆರ್ಗಳನ್ನು ಒಂದೇ ಕಡೆಗೆ ವರ್ಗಾಯಿಸುವ ಬಗ್ಗೆ ಏನೂ ಸೂಚನೆ ಕೊಟ್ಟಿರಲಿಲ್ಲ. ಅದಾದ ಮೇಲೆ ಜುಲೈ 19ರಂದು ಮತ್ತೆ ಈ ಅರ್ಜಿ ವಿಚಾರಣೆ ನಡೆಸಿ, ‘ನಾವು ಎಫ್ಐಆರ್ಗಳ ಬಗ್ಗೆ ಯಾವುದೇ ಆದೇಶ ಕೊಡುವವರೆಗೂ ನೂಪುರ್ ಅವರನ್ನು ಬಂಧಿಸುವಂತಿಲ್ಲ’ ಎಂದು ಹೇಳಿತ್ತು. ಮತ್ತು ಇಂದಿಗೆ (ಆಗಸ್ಟ್ 10) ವಿಚಾರಣೆ ಮುಂದೂಡಿತ್ತು.
ಇದನ್ನೂ ಓದಿ: ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್‌ನಿಂದ ರಿಲೀಫ್; ಆಗಸ್ಟ್ 10ರವರೆಗೆ ಇಲ್ಲ ಬಂಧನ ಭೀತಿ