ಸಂಸತ್ ಮುಂಗಾರು ಅಧಿವೇಶನ (Parliament Monsoon Session) ಜುಲೈ 20 (ನಾಳೆ)ರಿಂದ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಸರ್ಕಾರ ಸರ್ವಪಕ್ಷಗಳ ಸಭೆಯನ್ನು (All Party Meet) ಕರೆದಿದೆ. ನಾಳೆಯಿಂದ ಶುರುವಾಗುವ ಸಂಸತ್ ಮುಂಗಾರು ಅಧಿವೇಶನಕ್ಕೆ (Parliament Session) ಸಂಬಂಧಪಟ್ಟಂತೆ ಹಲವು ವಿಷಯಗಳ ಬಗ್ಗೆ ಪ್ರತಿಪಕ್ಷಗಳೊಂದಿಗೆ ಚರ್ಚೆ ನಡೆಸಲು ಈ ಸಭೆ ಕರೆಯಲಾಗಿದೆ. ಅಂದಹಾಗೇ, ಇದು ವಾಡಿಕೆ ಸಭೆ. ಪ್ರತಿಬಾರಿಯೂ ಸಂಸತ್ ಅಧಿವೇಶನಕ್ಕೂ ಮುನ್ನ, ಆಡಳಿತದಲ್ಲಿರುವ ಸರ್ಕಾರ ಸರ್ವಪಕ್ಷಗಳ ಸಭೆಯನ್ನು ಕರೆಯುತ್ತದೆ. ಇದರಲ್ಲಿ ಹಿರಿಯ ಸಚಿವರು, ಎಲ್ಲ ಪಕ್ಷಗಳ ಹಿರಿಯ ನಾಯಕರು ಪಾಲ್ಗೊಳ್ಳುತ್ತಾರೆ. ಈ ಹಿಂದಿನ ಕೆಲವು ಸಭೆಗಳಲ್ಲಿ ಪ್ರಧಾನಿ ಮೋದಿಯವರೂ ಪಾಲ್ಗೊಂಡಿದ್ದರು. ಈ ಸಲವೂ ಭಾಗವಹಿಸುವ ನಿರೀಕ್ಷೆಯಿದೆ.
ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳ ಕಲಾಪ ಜುಲೈ 20ರಿಂದ ಪ್ರಾರಂಭವಾಗಲಿದೆ. ರಾಜ್ಯಸಭೆಗೆ ಸಂಬಂಧಪಟ್ಟು ಮಂಗಳವಾರ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಆದರೆ ಹಲವು ಪಕ್ಷಗಳ ನಾಯಕರು ಗೈರಾದ ಕಾರಣ ಅಧ್ಯಕ್ಷ ಜಗದೀಪ್ ಧನಕರ್ ಅವರು ಸಭೆಯನ್ನು ಮುಂದೂಡಿದ್ದಾರೆ. ಸದ್ಯ ವಿಪಕ್ಷಗಳೆಲ್ಲ 2024ರ ಲೋಕಸಭೆ ಚುನಾವಣೆ ಸಲುವಾಗಿ ಒಕ್ಕೂಟವನ್ನು ರಚಿಸಿಕೊಂಡಿದ್ದು, ಅದರ ಸಭೆ-ಚರ್ಚೆಯಲ್ಲೇ ತೊಡಗಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಜುಲೈ 17-18ರಂದು ಮೈತ್ರಿಕೂಟದ ಸಭೆ ನಡೆದಿತ್ತು. ಒಟ್ಟು 26 ಪ್ರತಿಪಕ್ಷಗಳ ಈ ಒಕ್ಕೂಟಕ್ಕೆ INDIA ಎಂದು ನಾಮಕರಣವನ್ನೂ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Monsoon session 2023: ಜುಲೈ 20ರಿಂದ ಸಂಸತ್ ಅಧಿವೇಶನ; ಸಿದ್ಧತೆ ಆರಂಭಿಸಿದ ಸರ್ಕಾರ, ಸಚಿವ ಜೋಶಿ ಭರ್ಜರಿ ಸಭೆ
ಇಂದು ಸರ್ವಪಕ್ಷಗಳ ಸಭೆಗೂ ಪೂರ್ವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಪುಟದ ಇತರ ಸಹೋದ್ಯೋಗಿ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಇದರಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ ಮತ್ತು ರಾಜ್ಯ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಪಿಯುಷ್ ಗೋಯೆಲ್ ಭಾಗವಹಿಸಿದ್ದರು. ಈ ಸಂಸತ್ ಅಧಿವೇಶನದ ಪೂರ್ವಭಾವಿಯಾಗಿ ಜುಲೈ 4ರಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ವಿವಿಧ ಸಚಿವಾಲಯಗಳ ಹಾಗೂ ಇಲಾಖೆಗಳ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ್ದರು. ಈ ವೇಳೆ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ಮತ್ತು ವಿ.ಮುರಳೀಧರನ್ ಹಾಜರಿದ್ದರು.