Site icon Vistara News

ಸದ್ಯ ಬಗೆಹರಿಯಲ್ಲ TAJ MAHAL ಮುಚ್ಚಿದ ಕೋಣೆಗಳ ರಹಸ್ಯ, ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

Tajmahal

ತಾಜ್‌ ಮಹಲ್‌ ಇತಿಹಾಸದ ಬಗ್ಗೆ ತನಿಖೆ ನಡೆಸಲು ಒಂದು ಸತ್ಯಶೋಧನಾ ಸಮಿತಿ ರಚಿಸಬೇಕು ಮತ್ತು ತಾಜ್‌ ಮಹಲ್‌ನಲ್ಲಿ (Taj Mahal) ಬಾಗಿಲು ಮುಚ್ಚಲಿರುವ 22 ಕೋಣೆಗಳನ್ನು ತೆರೆಸಬೇಕು ಎಂದು ಮನವಿ ಮಾಡಿ ಬಿಜೆಪಿ ನಾಯಕ ರಜನೀಶ್‌ ಸಿಂಗ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠ ವಜಾಗೊಳಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಮತ್ತು ಸುಭಾಷ್‌ ವಿದ್ಯಾರ್ಥಿ, ಇವತ್ತು ತಾಜ್‌ ಮಹಲ್‌ ಕೋಣೆಗಳನ್ನು ತೆಗೆಸಲು ಹೇಳುತ್ತೀರಿ. ನಾಳೆ ನಮ್ಮ ಬಳಿ ಬಂದು ನ್ಯಾಯಮೂರ್ತಿಗಳ ಚೇಂಬರ್‌ಗೆ ಪ್ರವೇಶಿಸಲು ಅನುಮತಿ ಕೊಡಿ ಎನ್ನುತ್ತೀರಿ. ದಯವಿಟ್ಟು ಹೀಗೆಲ್ಲ ಮನವಿ ಸಲ್ಲಿಸಬೇಡಿ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವ್ಯವಸ್ಥೆಯನ್ನು ಅಣಕಿಸಿ, ಕೀಳಾಗಿ ನೋಡಬೇಡಿ ಎಂದು ಹೇಳಿದ್ದಾರೆ.

ಈಗಿನ ತಾಜ್‌ ಮಹಲ್‌ ಸಾವಿರಾರು ವರ್ಷಗಳ ಹಿಂದೆ ಶಿವನ ದೇಗುಲವಾಗಿತ್ತು. ಅದಕ್ಕೆ ಪೂರಕ ದಾಖಲೆಗಳಿವೆ ಎಂಬುದನ್ನು ಕೆಲವು ಇತಿಹಾಸ ತಜ್ಞರು, ಹಿಂದೂ ಸಂಘಟನೆಗಳ ಪ್ರಮುಖರು ಪ್ರತಿಪಾದಿಸುತ್ತಿದ್ದಾರೆ. ಹಾಗೇ, ಪಿ.ಎನ್‌.ಓಕ್‌ ಎಂಬುವರು ಬರೆದು 1989ರ ದಶಕದಲ್ಲಿ ಬಿಡುಗಡೆಯಾದ ʼತಾಜ್‌ ಮಹಲ್‌: ದಿ ಟ್ರ್ಯೂ  ಸ್ಟೋರಿʼ ಎಂಬ ಪುಸ್ತಕದಲ್ಲೂ ಇದೇ ವಿಚಾರ ಹೇಳಲಾಗಿದೆ. ಈ ವಿಚಾರಗಳನ್ನೇ ಆಧರಿಸಿ ರಜನೀಶ್‌ ಸಿಂಗ್‌ ಅವರು ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು ಒಂದು ವಿಶೇಷ ಸತ್ಯಶೋಧನಾ ಸಮಿತಿ ರಚಿಸಿ, ತಾಜ್‌ ಮಹಲ್‌ನ ಮುಚ್ಚಿದ ಕೋಣೆಗಳ ರಹಸ್ಯ ಸಂಶೋಧನೆ ಮಾಡಬೇಕು. ಬಳಿಕ ಆ ವರದಿಯನ್ನು ಬಹಿರಂಗಪಡಿಸಬೇಕು ಎಂದು ಹೇಳಿದ್ದರು.   

ಇದನ್ನೂ ಓದಿ | ತಾಜ್‌ ಬಗ್ಗೆ ಟ್ವೀಟ್‌ ಮಾಡಿದ ಮಸ್ಕ್‌ ಭಾರತಕ್ಕೆ ಭೇಟಿ ನೀಡಲಿದ್ದಾರೆಯೇ?

ತಾಜ್‌ ಮಹಲ್‌ ಬಗ್ಗೆ ಅರಿಯಬೇಕಾದ ಸತ್ಯ ಸಾಕಷ್ಟಿದೆ. ಆ 22 ಕೋಣೆಗಳೇಕೆ ಮುಚ್ಚಲ್ಪಟ್ಟಿವೆ. ಅವುಗಳ ಇತಿಹಾಸವೇನು ಎಂಬುದನ್ನು ದೇಶದ ಪ್ರತಿ ನಾಗರಿಕನೂ ತಿಳಿಯಬೇಕು. ನಾನಂತೂ ಈ ಬಗ್ಗೆ ಹಲವು ಬಾರಿ ಆರ್‌ಟಿಐ ಗೂ ಅರ್ಜಿ ಸಲ್ಲಿಸಿದ್ದೇನೆ. ಆದರೆ ಸರಿಯಾದ ಉತ್ತರ ಸಿಕ್ಕಿಲ್ಲ. 2020ರಲ್ಲಿ ಆರ್‌ಟಿಐನಡಿ ಅರ್ಜಿ ಸಲ್ಲಿಸಿದಾಗ, ಭದ್ರತೆಯ ದೃಷ್ಟಿಯಿಂದ ಮಾತ್ರ ಆ ಕೋಣೆಗಳನ್ನು ಮುಚ್ಚಲಾಗಿದೆ ಎಂಬ ಉತ್ತರ ಸಿಕ್ಕಿತ್ತು. ಆದರೆ ನನಗೆ ಈ ಉತ್ತರದಿಂದ ತೃಪ್ತಿಯಿಲ್ಲ ಎಂದೂ ಅರ್ಜಿದಾರರು ಪಿಐಎಲ್‌ನಲ್ಲಿ ಉಲ್ಲೇಖಿಸಿದ್ದರು.

ಆದರೆ ಈ ಅರ್ಜಿಯ ಬಗ್ಗೆ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ʼ ನಿಮ್ಮ ಸಾರ್ವಜನಿಕ ಹಿತಾಸಕ್ತಿ ದಾವೆಯಲ್ಲಿ ಉಲ್ಲೇಖಿಸಲಾದ ಅಂಶಗಳು ಕೋರ್ಟ್‌ನಲ್ಲಿ ಚರ್ಚೆ ಮಾಡುವಂತದ್ದು ಎಂದು ನಿಮಗೆ ಅನ್ನಿಸುತ್ತದೆಯಾ? ಆರ್‌ಟಿಐ ಉತ್ತರದಲ್ಲಿ ತೃಪ್ತಿಯಿಲ್ಲ ಎಂದಾದರೆ ದಯವಿಟ್ಟು ಹೋಗಿ ನಿಮ್ಮ ಸ್ವಯಂ ಸಂಶೋಧನೆ ಮಾಡಿ. ನಂತರ ಕೋರ್ಟ್‌ಗೆ ಬನ್ನಿʼ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ವಿಚಾರದ ಚರ್ಚೆಯನ್ನು ನಾವೆಲ್ಲರೂ ಸೇರಿ ಒಂದು ಸಾಮಾನ್ಯವಾದ ಹಾಲ್‌ನಲ್ಲಿ ಕುಳಿತು ಮಾಡೋಣ, ಅದು ಬಿಟ್ಟು ಕೋರ್ಟ್‌ ಹಾಲ್‌ನಲ್ಲಿ ಸಾಧ್ಯವಿಲ್ಲ. ಇಂಥ ವಿಷಯಗಳನ್ನೆಲ್ಲ ಇತಿಹಾಸ ತಜ್ಞರಿಗೆ ಬಿಡಬೇಕು ಎಂದೂ ನ್ಯಾಯಾಧೀಶರು ಹೇಳಿದ್ದಾರೆ. ಹೈಕೋರ್ಟ್‌ ಅರ್ಜಿ ವಜಾಗೊಳಿಸಿದ ಬೆನ್ನಲ್ಲೇ ಅರ್ಜಿದಾರ ರಜನೀಶ್‌ ಸಿಂಗ್‌ ಪರ ವಕೀಲ ರುದ್ರ ವಿಕ್ರಮ್‌ ಸಿಂಗ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ತಾವು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದಿದ್ದಾರೆ. ಅದಕ್ಕೂ ಮೊದಲು ಭಾರತೀಯ ಪುರಾತತ್ವ ಇಲಾಖೆ ಮತ್ತು ಇತಿಹಾಸ ಇಲಾಖೆಯನ್ನು ಸಂಪರ್ಕಿಸುತ್ತೇವೆ ಎಂದೂ ಹೇಳಿದ್ದಾರೆ.

ತಾಜ್‌ ಮಹಲ್‌ನ್ನು ಮೊಘಲ್‌ ದೊರೆ ತನ್ನ ಪ್ರೀತಿಯ ರಾಣಿ ಮಮ್ತಾಜ್‌ಗೋಸ್ಕರ ಕಟ್ಟಿಸಿದ ಎಂಬುದನ್ನೇ ನಾವೆಲ್ಲ ಇತಿಹಾಸದ ಪಠ್ಯದಲ್ಲಿ ಓದಿದ್ದೇವೆ. ಹೀಗಾಗಿ ಪ್ರೇಮಿಗಳ ಪಾಲಿಗಂತೂ ತಾಜ್‌ ಮಹಲ್‌ ತುಂಬ ವಿಶೇಷ. ಆದರೆ ಅಲ್ಲಿದ್ದಿದ್ದು ಒಂದು ಶಿವನ ದೇವಾಲಯ ಎಂಬ ಪ್ರತಿಪಾದನೆ ದಟ್ಟವಾಗುತ್ತಿದೆ. ಸದ್ಯ ತಾಜ್ ಮಹಲ್‌-ತೇಜೋ ಮಹಾಲಯ ಎಂಬ ವಾದ-ಪ್ರತಿವಾದಗಳು ಹೆಚ್ಚಾಗಿವೆ.

ಇದನ್ನೂ ಓದಿ | TAJ MAHAL ರಹಸ್ಯ ಭೇದಿಸಲು PIL, ಆ 22 ಕೋಣೆಗಳ ಒಳಗೆ ನಿಜಕ್ಕೂ ಏನಿದೆ?

Exit mobile version