Site icon Vistara News

ಕಾಂಗ್ರೆಸ್‌ ಮಾಜಿ ನಾಯಕ ಕ್ಯಾ.ಅಮರಿಂದರ್‌ ಸಿಂಗ್‌ ಎನ್‌ಡಿಎ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ?

Amarinder Singh

ನವ ದೆಹಲಿ: ಕಾಂಗ್ರೆಸ್‌ ಮಾಜಿ ನಾಯಕ, ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ (Amarinder Singh) ಅವರು ಎನ್‌ಡಿಎ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಅವರ ಕಚೇರಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕಳೆದ ವರ್ಷ ಕಾಂಗ್ರೆಸ್‌ ಬಿಟ್ಟ ನಂತರ, ಪಂಜಾಬ್‌ ಲೋಕ್‌ ಕಾಂಗ್ರೆಸ್‌ ಪಾರ್ಟಿ ಕಟ್ಟಿರುವ ಅವರು, ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆಯನ್ನು ಬಿಜೆಪಿಯೊಂದಿಗೆ ಮೈತ್ರಿಮಾಡಿಕೊಂಡು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಪಟಿಯಾಲಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಅವರೀಗ ಲಂಡನ್‌ನಲ್ಲಿ, ಬೆನ್ನುನೋವಿನ ಸರ್ಜರಿಗೆ ಒಳಗಾಗಿದ್ದು, ಅಲ್ಲಿಂದ ವಾಪಸ್‌ ಬಂದ ತಕ್ಷಣ ಬಿಜೆಪಿ ಸೇರಲಿದ್ದಾರೆ. ತಮ್ಮ ಪಕ್ಷವನ್ನು ಅದರೊಂದಿಗೆ ವಿಲೀನ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಹಾಗೇ, ಉಪರಾಷ್ಟ್ರಪತಿ ಚುನಾವಣೆಯಲ್ಲಿ, ಅಮರಿಂದರ್‌ ಸಿಂಗ್‌ ಅವರೇ ಎನ್‌ಡಿಎ ಅಭ್ಯರ್ಥಿ ಎಂದೂ ಹೇಳಲಾಗುತ್ತಿದೆ.

ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಉಪರಾಷ್ಟ್ರಪತಿ ಹುದ್ದೆ ಅವಧಿ ಆಗಸ್ಟ್‌ 10ಕ್ಕೆ ಮುಕ್ತಾಯಗೊಳ್ಳಲಿದ್ದು, ಆಗಸ್ಟ್‌ ೬ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಹಾಗೇ, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜು.19 ಕೊನೇ ದಿನಾಂಕ. ಅದಕ್ಕೂ ಮೊದಲು ಜುಲೈ ೧೮ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಎನ್‌ಡಿಎ ಒಕ್ಕೂಟದ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆಯಾಗಿದ್ದಾರೆ. ಪ್ರತಿಪಕ್ಷಗಳು ಯಶವಂತ್‌ ಸಿನ್ಹಾರನ್ನು ಕಣಕ್ಕಿಳಿಸಿವೆ. ಈ ಅಮರಿಂದರ್‌ ಸಿಂಗ್‌ ಹೆಸರು ರಾಷ್ಟ್ರಪತಿ ಹುದ್ದೆ ರೇಸ್‌ನಲ್ಲಿಯೂ ಕೇಳಿಬಂದಿತ್ತು. ಆದರೆ ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಎನ್‌ಡಿಎ ಅವರನ್ನೇ ಆಯ್ಕೆ ಮಾಡುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.

‌ಭಾರತದಲ್ಲಿ ಉಪರಾಷ್ಟ್ರಪತಿ ಆಯ್ಕೆ ಚುನಾವಣೆಯೂ ರಾಷ್ಟ್ರಪತಿ ಚುನಾವಣೆಯ ಮಾದರಿಯಲ್ಲೇ ನಡೆಯುತ್ತದೆ. ಅಂದರೆ ಇಲ್ಲಿಯೂ ಜನಸಾಮಾನ್ಯರು ಮತ ಹಾಕುವುದಿಲ್ಲ. ಬದಲಿಗೆ ಲೋಕಸಭೆ-ರಾಜ್ಯಸಭೆ ಸದಸ್ಯರನ್ನು ಒಳಗೊಂಡ ಎಲೆಕ್ಟೋರಲ್‌ ಕಾಲೇಜಿನ ಸದಸ್ಯರು ಮತಚಲಾಯಿಸುತ್ತಾರೆ. ಒಂದು ಸಣ್ಣ ಬದಲಾವಣೆಯೆಂದರೆ ರಾಷ್ಟ್ರಪತಿ ಚುನಾವಣೆಯಲ್ಲಿ ಶಾಸಕರಿಗೂ ಮತಚಲಾಯಿಸುವ ಅಧಿಕಾರ ಇರುತ್ತದೆ, ಆದರೆ ಇಲ್ಲಿ, ಶಾಸಕರಿಗೆ ಹಕ್ಕಿಲ್ಲ.

ಇದನ್ನೂ ಓದಿ:ಲಂಡನ್‌ನಲ್ಲಿ ಸರ್ಜರಿಗೆ ಒಳಗಾದ ಕ್ಯಾ. ಅಮರಿಂದರ್‌ ಸಿಂಗ್‌; ವಾಪಸ್‌ ಬರುತ್ತಿದ್ದಂತೆ ಬಿಜೆಪಿ ಸೇರ್ಪಡೆ

Exit mobile version