ನವ ದೆಹಲಿ: ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡು, ಆ ಪಕ್ಷವನ್ನು ಬಿಟ್ಟು ಪಂಜಾಬ್ ಲೋಕ್ ಕಾಂಗ್ರೆಸ್ ಪಕ್ಷ ಕಟ್ಟಿದ್ದ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಮ್ಮ ಪಿಎಲ್ಸಿ ಪಕ್ಷವನ್ನೀಗ ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದಾರೆ. ಹಾಗೇ, ತಮ್ಮ ಪುತ್ರ ರಣೀಂದರ್ ಸಿಂಗ್, ಪುತ್ರಿ ಜೈ ಇಂದರ್ ಕೌರ್, ಮೊಮ್ಮಗ ನಿರ್ವಣ್ ಸಿಂಗ್ ಜತೆ ಬಿಜೆಪಿ ಸೇರ್ಪಡೆಯಾಗಿ, ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ. ಇಷ್ಟಾದ ಬಳಿಕ ಅಮರಿಂದರ್ ಸಿಂಗ್‌ಗೆ ಪ್ರಶ್ನೆಯೊಂದು ಎದುರಾಗಿದೆ. ‘ನೀವೆಲ್ಲರೂ ಬಿಜೆಪಿಗೆ ಬಂದರೂ ನಿಮ್ಮ ಪತ್ನಿ ಪ್ರಣೀತ್ ಕೌರ್ ಕಾಂಗ್ರೆಸ್ನಲ್ಲೇ ಉಳಿಯುತ್ತಾರಾ?’-ಈ ಪ್ರಶ್ನೆಯನ್ನು ಮಾಧ್ಯಮದವರು, ರಾಜಕೀಯ ವಲಯದಲ್ಲೇ ಹಲವರು ಅಮರಿಂದರ್ ಸಿಂಗ್‌ಗೆ ಕೇಳಿದ್ದಾರೆ. ಇದಕ್ಕೆ ಅಮರಿಂದರ್ ಸಿಂಗ್ ತುಸು ಕಟುವಾಗಿಯೇ ಉತ್ತರ ನೀಡಿದ್ದು, ‘ಪತಿ ಏನೆಲ್ಲ ಮಾಡುತ್ತಾನೋ ಅದನ್ನು ಹೆಂಡತಿಯೂ ಅನುಸರಿಸಲೇಬೇಕೆಂಬ ನಿಯಮ ಎಲ್ಲಿಯೂ ಇಲ್ಲ’ ಎಂದಿದ್ದಾರೆ.
ಪ್ರಣೀತ್ ಕೌರ್ ಸದ್ಯ ಪಟಿಯಾಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ. ಇವರು 2009ರಿಂದ 2014ರವರೆಗೆ ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಿರಿಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅಮರಿಂದರ್ ಸಿಂಗ್ ಕಾಂಗ್ರೆಸ್ ಬಿಟ್ಟಾಗಿನಿಂದಲೂ ಅವರ ಪತ್ನಿ ಪ್ರಣೀತ್ ಕೌರ್ ಮೇಲೆ ಒಂದು ಕಣ್ಣು ನೆಟ್ಟಿದೆ. ಅವರು ಪಕ್ಷ ಬಿಡುತ್ತಾರಾ? ಪತಿಯ ದಾರಿಯನ್ನೇ ತುಳಿಯುತ್ತಾರಾ? ಎಂಬ ಕುತೂಹಲ ಇದ್ದೇಇದೆ. ಈಗ ಅಮರಿಂದರ್ ಸಿಂಗ್ ಕುಟುಂಬವೇ ಬಿಜೆಪಿ ಸೇರ್ಪಡೆಯಾದ ಮೇಲೆ ಅನುಮಾನ ಇನ್ನಷ್ಟು ಹೆಚ್ಚಾಗಿದೆ. ಹಾಗಂತ ಪ್ರಣೀತ್ ಕೌರ್ ಕಾಂಗ್ರೆಸ್ಗೆ ರಾಜೀನಾಮೆ ನೀಡುವ ಯಾವ ಮಾತನ್ನೂ ಆಡಿಲ್ಲ.
ಕಾಂಗ್ರೆಸ್ ಬಿಟ್ಟು ಅದರ ರಾಜಕೀಯ ಸ್ಪರ್ಧಿ ಬಿಜೆಪಿ ಸೇರಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ರನ್ನು ಇತ್ತೀಚೆಗೆ ಕಾಂಗ್ರೆಸ್ ಹಿರಿಯ ನಾಯಕಿ ಮಾರ್ಗರೆಟ್ ಆಳ್ವಾ ಟೀಕಿಸಿದ್ದರು. ಕ್ಯಾಪ್ಟನ್ಗಿಂತ ಅವರ ಪತ್ರನಿ ಕೌರ್ ತುಂಬ ಸಂವೇದನೆ ಇರುವ ವ್ಯಕ್ತಿ ಎಂದು ಹೇಳಿದ್ದರು. ಮೊದಲು ಶಿರೋಮಣಿ ಅಕಾಲಿ ದಳದಲ್ಲಿದ್ದ ಅಮರಿಂದರ್ ಸಿಂಗ್ 1998ರಲ್ಲಿ ಕಾಂಗ್ರೆಸ್ ಸೇರಿದರು. ಅವರಿಗೆ ಪಂಜಾಬ್ ಸಿಎಂ ಪಟ್ಟವೂ ದೊರೆಯಿತು. ಅದಾದ ಮೇಲೆ ಅಲ್ಲಿನ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧುವಿನೊಂದಿಗಿನ ಮನಸ್ತಾಪ ದೊಡ್ಡದಾಗಿ ಇವರು ಕಾಂಗ್ರೆಸ್ನ್ನೇ ತೊರೆದರು.
ಇವರ ಬಿಜೆಪಿ ಸೇರ್ಪಡೆಗೆ ಕಾಂಗ್ರೆಸ್ಸಿಗರು ಬೇರೆಯದ್ದೇ ಆಯಾಮ ಕೊಟ್ಟಿದ್ದಾರೆ. ಅಮರಿಂದರ್ ಸಿಂಗ್ ಮತ್ತು ಅವರ ಕುಟುಂಬದ ವಿರುದ್ಧ ವಿವಿಧ ಕೇಸ್ಗಳು ಇವೆ. ಬಿಜೆಪಿ ಸೇರಿದರೆ ಅವುಗಳಿಂದ ಪಾರಾಗಬಹುದು. ಎಲ್ಲ ಪಾಪಗಳಿಂದಲೂ ಮುಕ್ತರಾಗಬಹುದು ಎಂಬ ಒಂದೇ ಕಾರಣಕ್ಕೆ ಕುಟುಂಬ ಸಮೇತ ಅವರು ಬಿಜೆಪಿ ಸೇರಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.
ಇದನ್ನೂ ಓದಿ: Amarinder Singh | ವಿಲೀನ ಅಮರಿಂದರ್ ಸಿಂಗ್‌ಗೆ ಅಸ್ತ್ರ, ಬಿಜೆಪಿಗೆ ಬ್ರಹ್ಮಾಸ್ತ್ರ?