ನವ ದೆಹಲಿ: ಅಮರನಾಥ ದೇಗುಲದ ಬಳಿ ಪ್ರವಾಹ ಪರಿಸ್ಥಿತಿ ಉಂಟಾಗಿ ಗುಡ್ಡದ ಮಣ್ಣು-ಕಲ್ಲು ಕುಸಿದು 16ಮಂದಿ ಮೃತಪಟ್ಟಿದ್ದಾರೆ. ಇನ್ನೂ 35-40ಜನ ನಾಪತ್ತೆಯಾಗಿದ್ದು, ಅವರನ್ನು ಹುಡುಕಿ ರಕ್ಷಣೆ ಮಾಡುವ ಕಾರ್ಯಾಚರಣೆ ಮುಂದುವರಿದಿದೆ. ಈ ಅವಘಡ ಉಂಟಾಗಿದ್ದು ಮೇಘಸ್ಫೋಟದಿಂದಲೇ ಎಂದು ಹೇಳಲಾಗಿತ್ತು. ಆದರೆ ಭಾರತೀಯ ಹವಾಮಾನ ಇಲಾಖೆ ಇದು ಮೇಘ ಸ್ಫೋಟವಲ್ಲ. ಸ್ಥಳೀಯವಾಗಿ, ನಿರಂತರವಾಗಿ-ಧಾರಾಕಾರವಾಗಿ ಸುರಿದ ಮಳೆಯಿಂದಲೇ ಪ್ರವಾಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದೆ.
ಏಕಾಏಕಿ ಪ್ರವಾಹ ಸ್ಥಿತಿ ಎದುರಾಗಲು ಭಾರಿ ಮಳೆಯೇ ಕಾರಣ. ಅಮರನಾಥ ದೇವಾಲಯದ ಗುಹೆಯ ಸಮೀಪ ಇರುವ ಪರ್ವತಗಳ ತಪ್ಪಲಲ್ಲಿ ವಿಪರೀತ ಎನ್ನುವಷ್ಟು ಮಳೆಯಾಗಿದೆ. ಶುಕ್ರವಾರ ಮಧ್ಯಾಹ್ನ 4.30ರಿಂದ 6.30ರವರೆಗೆ 31ಎಂಎಂ ಮಳೆ ಸುರಿದಿದೆ. ಇದನ್ನು ಭಾರಿ ಮಳೆ ಎಂದು ಪರಿಗಣಿಸಬಹುದೇ ಹೊರತು ಮೇಘ ಸ್ಫೋಟದಿಂದ ಆಗಿದ್ದು ಎಂದು ಹೇಳಲಾಗದು. ಮೇಘ ಸ್ಫೋಟ ಎಂದು ನಾವು ಪರಿಗಣಿಸಬೇಕು ಎಂದರೆ 60 ನಿಮಿಷ (ಒಂದು ತಾಸು)ದಲ್ಲಿ 100 ಎಂಎಂ ಮಳೆ ಸುರಿದಿರಬೇಕು ಎಂದು ಐಎಂಡಿ ಮಹಾ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರಾ ತಿಳಿಸಿದ್ದಾರೆ.
ಮೇಘ ಸ್ಫೋಟ ಎಂದರೇನು?
ಮೇಘ ಸ್ಫೋಟ ಆಗುವುದು ಎಂದರೆ ದೊಡ್ಡ ಗಾತ್ರದ ಮೋಡಗಳು ಒಮ್ಮೆಲೇ ಭೂಮಿಗೆ ನೀರು ಸುರಿಸುತ್ತವೆ. ಕೆಲವು ನಿಮಿಷಗಳಲ್ಲಿ ಭಾರಿ ಪ್ರಮಾಣದ ನೀರು ಭೂಮಿಗೆ ಮೋಡಗಳಿಂದ ಚೆಲ್ಲಲ್ಪಡುತ್ತದೆ ಮತ್ತು ಇದು ಪ್ರವಾಹ ಪರಿಸ್ಥಿತಿಯನ್ನು ಉಂಟು ಮಾಡುತ್ತದೆ. ಹೀಗೆ ಮೇಘಸ್ಫೋಟವಾದಾಗ ಕೆಲವೇ ನಿಮಿಷಗಳಲ್ಲಿ 20ಎಂಎಂ ಮಳೆಯಾಗುತ್ತದೆ ಮತ್ತು ಒಂದು ತಾಸಿನ ಅವಧಿಯಲ್ಲಿ 100 ಎಂಎಂ ಮಳೆ ಸುರಿಯುತ್ತದೆ. ಇದೊಂದು ಪ್ರಾಕೃತಿಕ ವಿಪತ್ತು ಎಂದೇ ಪರಿಗಣಿಸಲ್ಪಟ್ಟಿದೆ.
ಕ್ಯುಮುಲೊನಿಂಬಸ್ ಮೋಡಗಳು ಎಂದು ಕರೆಯಲ್ಪಡುವ, ಜಾಸ್ತಿ ನೀರು ತುಂಬಿ ಭಾರವಾಗಿ, ಕಪ್ಪಾದ ಮೋಡಗಳು ಎತ್ತರದ ಪರ್ವತ ಪ್ರದೇಶಗಳಲ್ಲಿ ಚಲಿಸುತ್ತಿರುವಾಗ ಸಹಜವಾಗಿಯೇ ಗುಡುಗು-ಮಿಂಚು ಉಂಟು ಮಾಡುತ್ತವೆ. ಗಾಳಿ ಚಲನೆಯನ್ನಾಧರಿಸಿ ಲಂಬಾಕೃತಿಯಲ್ಲಿ ರೂಪುಗೊಳ್ಳುವ ಹೊತ್ತಲ್ಲಿ ಹೀಗೆ ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ. ಆಗ ಆ ದಟ್ಟ ಮೋಡದೊಳಗಿನ ನೀರೆಲ್ಲ ಒಮ್ಮಿಂದೊಮ್ಮೆಲೇ ಭೂಮಿಗೆ ಬಿದ್ದು ಅನಾಹುತ ಸೃಷ್ಟಿಯಾಗುತ್ತದೆ.
ಇದನ್ನೂ ಓದಿ: ಅಮರನಾಥ ಯಾತ್ರೆಗೆ ತೆರಳಿದ್ದ ರಾಜ್ಯದ ಯಾತ್ರಿಕರು ಸೇಫ್; ಯಾತ್ರೆ ರದ್ದಾದ ಹಿನ್ನೆಲೆ ವಾಪಸ್