ನವ ದೆಹಲಿ: ಜಮ್ಮು-ಕಾಶ್ಮೀರದ ಅಮರನಾಥ ಗುಹಾ ದೇವಾಲಯದ ಮೂಲ ಶಿಬಿರದ ಬಳಿ ನಡೆದ ಮಹಾ ಮೇಘಸ್ಫೋಟದಲ್ಲಿ ಮೃತಪಟ್ಟ ಯಾತ್ರಿಕರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಸುಮಾರು 40ಮಂದಿ ಗಾಯಗೊಂಡಿದ್ದಾರೆ. ಭಾರತೀಯ ಸೇನೆ ಯೋಧರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಮಾರು 30-35ಮಂದಿ ನಾಪತ್ತೆಯಾಗಿದ್ದು, ಐವರು ಮಾತ್ರ ಪತ್ತೆಯಾಗಿದದಾರೆ. ಅತಿಯಾದ ಮಳೆಯಿಂದಾಗಿ ಪರ್ವತ ಪ್ರದೇಶದಿಂದ ಒಂದೇ ಸಮ ನೀರು ಚಿಮ್ಮುತ್ತಿದೆ. ಇದರಿಂದಾಗಿ ಗುಡ್ಡಗಳು ಕುಸಿದು ಬೀಳುತ್ತಿದ್ದು, ಶಿಬಿರದಲ್ಲಿದ್ದ 25ಕ್ಕೂ ಹೆಚ್ಚು ಟೆಂಟ್ಗಳು, ಯಾತ್ರಿಕರಿಗೆ ಅಡುಗೆ ಮಾಡಲೆಂದು ನಿರ್ಮಿಸಲಾಗಿದ್ದ ಮೂರು ಟೆಂಟ್ಗಳೆಲ್ಲ ಕೊಚ್ಚಿಕೊಂಡು ಹೋಗಿವೆ.
ಏನೆಲ್ಲ ಆಯ್ತು?
ಶುಕ್ರವಾರ ಸಂಜೆ 5.30ರ ಹೊತ್ತಿಗೆ ಅಮರನಾಥ ಗುಹೆ ದೇಗುಲದ ಸಮೀಪದಲ್ಲಿಯೇ ಮೇಘಸ್ಫೋಟ ಉಂಟಾಗಿತ್ತು. ಗುಹೆಯ ಅಕ್ಕಪಕ್ಕದಿಂದ ನೀರು ಒಮ್ಮೆಲೇ ಜೋರಾಗಿ ಬರಲು ಶುರುವಾಯಿತು. ಈ ಅವಘಡ ಶುರುವಾಗುತ್ತಿದ್ದಂತೆ ಬಾಲ್ಟಾಲ್ ಮೂಲ ಶಿಬಿರದಲ್ಲಿರುವವರನ್ನೆಲ್ಲ ಸ್ಥಳಾಂತರ ಮಾಡಲಾಗಿದೆ. ನಿನ್ನೆ ಘಟನೆ ನಡೆದಾಗಿನಿಂದ ಇಲ್ಲಿಯವರೆಗೆ 16 ಮೃತದೇಹಗಳು ಪತ್ತೆಯಾಗಿವೆ. ಮೇಘಸ್ಫೋಟದಿಂದ ಸುರಿದ ಭಾರಿ ಮಳೆಯಿಂದಾಗಿ ಕಲ್ಲು, ಮಣ್ಣುಗಳೆಲ್ಲ ಕುಸಿದು ಬಿದ್ದಿವೆ. ಅದರಡಿಯಲ್ಲಿ ಮನುಷ್ಯರು ಸಿಕ್ಕಿಬಿದ್ದಿದ್ದಾರೆ. ಇವತ್ತಿನವರೆಗೆ 15ಸಾವಿರ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಗಾಯಗೊಂಡವರಿಗೆ ಚಿಕಿತ್ಸೆಯನ್ನೂ ಕೊಡಲಾಗುತ್ತಿದೆ.
ಭಾರತೀಯ ಸೇನೆಯ ಪ್ಯಾರಾಮಿಲಿಟರಿ ಪಡೆಯ ಸಿಬ್ಬಂದಿ, ಎನ್ಡಿಆರ್ಎಫ್ ತಂಡಗಳು ಸ್ಥಳದಲ್ಲಿ ಬೀಡು ಬಿಟ್ಟಿವೆ. ರಕ್ಷಣಾ ಕಾರ್ಯಾಚರಣೆಗಾಗಿ ಸಣ್ಣ ಹೆಲಿಕಾಪ್ಟರ್ಗಳನ್ನು ಬಳಕೆ ಮಾಡಲಾಗುತ್ತಿದೆ. ಮೇಘಸ್ಫೋಟದಿಂದ ಉಂಟಾದ ಅವಘಡದಲ್ಲಿ ನಾಪತ್ತೆಯಾದವರನ್ನು ಹುಡುಕಲು, ಮಣ್ಣು-ಕಲ್ಲಿನ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಇಂಡೊ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ನಮ್ಮ ಪರ್ವತ ರಕ್ಷಣಪಡೆಯವರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಐಟಿಬಿಪಿ ವಕ್ತಾರ ವಿವೇಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಇದನ್ನೂ ಓದಿ: ಪ್ರತಿಕೂಲ ಹವಾಮಾನ: ಅಮರನಾಥ ಯಾತ್ರೆಗೆ ತಾತ್ಕಾಲಿಕ ತಡೆ, 3000 ಮಂದಿ ಶಿಬಿರದಲ್ಲಿ
ಜಮ್ಮು-ಕಾಶ್ಮೀರ ಸರ್ಕಾರ ಮತ್ತು ಎನ್ಡಿಆರ್ಎಫ್ ಯಾತ್ರಾರ್ಥಿಗಳಿಗಾಗಿ ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿದೆ. ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಯಾತ್ರಿಕರು ತೆರಳಿದ್ದಾರೆ ಎಂದು ಕೆಎಸ್ಡಿಎಂಎ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ಯಾತ್ರಿಕರ ಸಂಬಂಧಿಕರಿಂದ ಈವರೆಗೆ 15 ಕರೆಗಳನ್ನು ಸ್ವೀಕರಿಸಿದೆ. ಸದ್ಯಕ್ಕೆ, ಎಸ್ಇಒಸಿಯಲ್ಲಿ ಕರ್ನಾಟಕದ ಸುಮಾರು 250 ಯಾತ್ರಿಗಳ ವಿವರಗಳನ್ನು ಎನ್ಡಿಆರ್ಎಫ್ ಕಂಟ್ರೋಲ್ ರೂಮ್, ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ನ ವಿಭಾಗೀಯ ಆಯುಕ್ತರ ಕಚೇರಿ, ಕಾಶ್ಮೀರ ಸರ್ಕಾರ ಮತ್ತು ಅಮರನಾಥ ದೇಗುಲ ಮಂಡಳಿಗಳಿಗೆ ಹಂಚಿಕೊಳ್ಳಲಾಗಿದೆ.
ಅಮರನಾಥ ಯಾತ್ರೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಯಾತ್ರಾರ್ಥಿಗಳು ಈ ಕೆಳಗಿನ ಸಹಾಯವಾಣಿಯನ್ನು ಸಂಪರ್ಕಿಸಿ ನೆರವು ಪಡೆಯಬಹುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್ಎನ್ಡಿಎಂಸಿ) ತಿಳಿಸಿದೆ. ಎನ್ಡಿಆರ್ಎಫ್- 011-23438252, 011-23438253, ಕಾಶ್ಮೀರ ವಿಭಾಗೀಯ ಸಹಾಯವಾಣಿ- 0194-2496240, ದೇಗುಲ ಮಂಡಳಿ ಸಹಾಯವಾಣಿ-0194-23131149, ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC)-080-1070, 22340676, ಇ-ಮೇಲ್-revenuedmkar@gmail.com, seockarnataka@gmail.com.
ಅಮರನಾಥ ಯಾತ್ರೆಗೆ ತೆರಳಿದ್ದವರಲ್ಲಿ ವಿಜಯಪುರ ಜಿಲ್ಲೆಯ ಯಾವುದೇ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿಲ್ಲ. ಇದುವರೆಗೂ ರಾಜ್ಯ ಕಚೇರಿಯ ಕಂಟ್ರೋಲ್ ರೂಂಗೆ ಒಟ್ಟು 16 ರೆಸ್ಕ್ಯೂ ಕರೆಗಳು ಬಂದಿವೆ. ಅದರಲ್ಲಿ ವಿಜಯಪುರ ಜಿಲ್ಲೆಯವರು ಯಾರೂ ಇಲ್ಲ. ಆದಾಗ್ಯೂ ಜಿಲ್ಲಾಡಳಿತ ಈ ಕುರಿತು ಮಾಹಿತಿ ಕಲೆಹಾಕುವಲ್ಲಿ ನಿರತವಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ್ ಮಾಹಿತಿ ನೀಡಿದ್ದಾರೆ.
ಅಮರನಾಥ ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭಿಸಲಾಗಿದೆ. NDRF, ITBP, ಭಾರತೀಯ ಸೇನೆ, CRPF, BSF, SDRF ಮತ್ತು ಜಮ್ಮು ಮತ್ತು ಕಾಶ್ಮೀರ ಪೋಲಿಸ್ ಜಂಟಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಸಂಕಷ್ಟದಲ್ಲಿ ಸಿಲುಕಿದವರಿಗೆ ಜಮ್ಮು ಕಾಶ್ಮೀರ ಸರ್ಕಾರವು ಸಹಾಯಹಸ್ತ ಚಾಚಿದೆ. ಶ್ರೀ ಅಮರನಾಥ ಗುಹೆಯ ಬಳಿ ಕರ್ನಾಟಕದ ಯಾವುದೇ ವ್ಯಕ್ತಿಯು ಸಿಕ್ಕಿಬಿದ್ದಲ್ಲಿ ಕೆಳಗಿನ ಸಂಖ್ಯೆಗೆ ಕರೆ ಮಾಡಿ ಸಂಪರ್ಕ ಮಾಡಿ. 080-1070, 22340676, ಇಮೇಲ್: incomedmkar@gmail.com