ಕೋಲ್ಕೊತಾ: ಆಂಬ್ಯುಲೆನ್ಸ್ ಸಿಗದೆ ಜನರು ಪರದಾಡಿದ್ದನ್ನು ನಾವು ಕೊರೊನಾ ಸಮಯದಲ್ಲಿ ನೋಡಿದ್ದೇವೆ. ಆದರೆ ಆಂಬ್ಯುಲೆನ್ಸ್ (Ambulance) ಇದ್ದರೂ ಅವರು ಕೇಳುವಷ್ಟು ಹಣ ಕೊಡಲಾಗದೆ ವ್ಯಕ್ತಿಯೊಬ್ಬ ತನ್ನ ತಾಯಿಯ ಶವವನ್ನು ಹೆಗಲ ಮೇಲೆಯೇ ಹೊತ್ತು ಹೋದ ಘಟನೆ ಇದೀಗ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಇದನ್ನೂ ಓದಿ: ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಆಂಬುಲೆನ್ಸ್; ಏಳು ಮಂದಿ ದುರ್ಮರಣ
ಜಲ್ಪೈಗುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯಿಂದ ಸುಮಾರು 40 ಕಿ.ಮೀ. ದೂರದ ಹಳ್ಳಿಯ ವ್ಯಕ್ತಿಯೊಬ್ಬ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ತನ್ನ ತಾಯಿಯನ್ನು ಬುಧವಾರದಂದು ಆಸ್ಪತ್ರೆಗೆ ಕರೆತಂದಿದ್ದ. ಗುರುವಾರ ತಾಯಿ ಕೊನೆಯುಸಿರೆಳೆದಿದ್ದಾಳೆ. ಆಕೆಯ ದೇಹವನ್ನು ಊರಿಗೆ ವಾಪಸು ತೆಗೆದುಕೊಂಡು ಹೋಗಲು ಆಂಬ್ಯುಲೆನ್ಸ್ ಕೇಳಿದ್ದಾರೆ. ಆದರೆ ಅವರು ೩೦೦೦ ರೂ. ಕೊಡುವುದಾದರೆ ಮಾತ್ರವೇ ಬರುವುದಾಗಿ ತಿಳಿಸಿದ್ದಾರೆ. ಊರಿನಿಂದ ಆಸ್ಪತ್ರೆಗೆ ಬರುವಾಗ ಆಂಬ್ಯುಲೆನ್ಸ್‌ಗೆ 900 ರೂ. ಕೊಟ್ಟಿದ್ದ ವ್ಯಕ್ತಿ ವಾಪಸು ಹೋಗುವುದಕ್ಕೆ ಅಷ್ಟೊಂದು ಹಣ ಕೊಡಲಾಗದೆ ಒದ್ದಾಡಿದ್ದಾನೆ. ನಂತರ ಬೆಡ್‌ಶೀಟ್‌ನಲ್ಲಿ ತಾಯಿಯ ದೇಹವನ್ನು ಸುತ್ತಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ಹೊರಟಿದ್ದಾನೆ. ಆತನಿಗೆ ಆತನ ತಂದೆಯೂ ಸಾಥ್ ನೀಡಿದ್ದಾರೆ.
ಈ ರೀತಿ ಆತ ತಾಯಿಯ ದೇಹವನ್ನು ಹೊತ್ತೊಯ್ಯುತ್ತಿರುವ ವಿಡಿಯೋವನ್ನು ಬಿಜೆಪಿಯ ನಾಯಕ ಅಮಿತ್ ಮಾಳ್ವಿಯಾ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಮಮತಾ ಬ್ಯಾನರ್ಜಿ ಅವರ ನಾಡಿನಲ್ಲಿ ಎಲ್ಲದ್ದಕ್ಕೂ ದುಡ್ಡೇ ಮುಖ್ಯ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ವಂದೇ ಭಾರತ್ ರೈಲಿಗೆ ಚಾಲನೆ ವೇಳೆ ಜೈ ಶ್ರೀರಾಮ್ ಘೋಷಣೆ; ವೇದಿಕೆ ಏರದೆ ಮೌನವಾಗಿ ಕುಳಿತ ಮಮತಾ ಬ್ಯಾನರ್ಜಿ
ಈ ಘಟನೆಯ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. “ಈ ರೀತಿ ದೇಹಗಳನ್ನು ಊರುಗಳಿಗೆ ಕಳುಹಿಸಿಕೊಡುವುದಕ್ಕೆಂದೇ ನಮ್ಮ ಬಳಿ ಪ್ರತ್ಯೇಕ ವಾಹನಗಳಿವೆ. ಆ ಕುಟುಂಬ ನಮ್ಮನ್ನು ಸಂಪರ್ಕಿಸಿದ್ದರೆ ನಾವು ಅದರ ವ್ಯವಸ್ಥೆ ಮಾಡುತ್ತಿದ್ದೆವು. ಆದರೆ ಅವರಿಗಾದ ಅನ್ಯಾಯದ ಬಗ್ಗೆ ಬೇಸರವಿದೆ” ಎಂದಿದ್ದಾರೆ.