Site icon Vistara News

ಹಿಂದು ಉತ್ತರಾಧಿಕಾರ ಕಾಯ್ದೆ ತಿದ್ದುಪಡಿ ಮಾಡಿ ಪರಿಶಿಷ್ಟ ಪಂಗಡದ ಮಹಿಳೆಯರನ್ನೂ ಸೇರಿಸಿ; ಕೇಂದ್ರಕ್ಕೆ ಸುಪ್ರೀಂಕೋರ್ಟ್ ಮಹತ್ವದ​ ಸೂಚನೆ

Supreme Court

ನವ ದೆಹಲಿ: ಹಿಂದು ಉತ್ತರಾಧಿಕಾರ ಕಾಯ್ದೆಯ ಪರಿಚ್ಛೇದ 2(2)ನ್ನು ತಿದ್ದುಪಡಿ ಮಾಡಿ, ಈ ಕಾಯ್ದೆಯಡಿ ಪರಿಶಿಷ್ಟ ಪಂಗಡದ ಹೆಣ್ಣುಮಕ್ಕಳನ್ನೂ ಸೇರ್ಪಡೆಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಆಗ್ರಹಿಸಿದೆ. ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಪ್ರಕಾರ ಮದುವೆಯಾದ ಹೆಣ್ಣುಮಕ್ಕಳೂ, ತಂದೆಯ ಆಸ್ತಿಯಲ್ಲಿ ಸಮಪಾಲು ಕೇಳಬಹುದು. ಈ ಕಾಯ್ದೆಯ ನಿಯಮಗಳು ಹಿಂದೂಗಳ ಜತೆ, ಬೌದ್ಧ, ಜೈನ, ಸಿಖ್ಖರಿಗೂ ಅನ್ವಯ ಆಗುತ್ತದೆ. ಆದರೆ ಪರಿಶಿಷ್ಟ ಪಂಗಡದ ಮಹಿಳೆಯರು ಕಾಯ್ದೆಯ ಪ್ರಯೋಜನಗಳಿಂದ ದೂರವಿದ್ದಾರೆ.

ಒಡಿಶಾದ ಪ್ರಕರಣವೊಂದರ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್​​ನ ನ್ಯಾಯಮೂರ್ತಿಗಳಾದ ಎಂ.ಆರ್​.ಶಾ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ ಒಂದು ಮಹತ್ವದ ಸಂದೇಶವನ್ನು ಕೇಂದ್ರಕ್ಕೆ ಕೊಟ್ಟಿದೆ. ಒಡಿಶಾದಲ್ಲಿ ನಾಗರಿಕರೊಬ್ಬರ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು. ಅದರ ಪರಿಹಾರವನ್ನು ಮಾಲೀಕರಿಗೆ ನೀಡಿತ್ತು. ಆದರೆ ಆ ಪರಿಹಾರ ಹಣ ಹಂಚಿಕೆ ವಿಚಾರದಲ್ಲಿ ಆ ಮಾಲೀಕನ ಪುತ್ರರು/ಪುತ್ರಿಯ ನಡುವೆ ಸಂಘರ್ಷ ಉಂಟಾಗಿ, ಪ್ರಕರಣ ಕೋರ್ಟ್​ ಮೆಟ್ಟಿಲೇರಿತ್ತು. ಪ್ರಾರಂಭದಲ್ಲಿ ಸೆಷನ್ಸ್​ ಕೋರ್ಟ್​ನಲ್ಲಿ ವಿಚಾರಣೆ ನಡೆಯಿತು. ಆಗ ಇದೇ ಹಿಂದೂ ಉತ್ತರಾಧಿಕಾರ ಕಾಯ್ದೆಯ ಪರಿಚ್ಛೇದ 2(2)ನ್ನು ಉಲ್ಲೇಖ ಮಾಡಿದ್ದ ಅಲ್ಲಿನ ನ್ಯಾಯಾಧೀಶರು, ‘ಪರಿಶಿಷ್ಟ ಪಂಗಡದಲ್ಲಿ ಮದುವೆಯಾದ ಮಹಿಳೆಯರಿಗೆ ತಂದೆಯ ಆಸ್ತಿಯಲ್ಲಿ ಪಾಲು ಇಲ್ಲ’ ಎಂದು ಆದೇಶ ನೀಡಿದ್ದರು. ಬಳಿಕ ಆ ಮಹಿಳೆ ಒರಿಸ್ಸಾ ಹೈಕೋರ್ಟ್​ಗೆ ಹೋದರೂ ಇದೇ ತೀರ್ಪು ಅನುಮೋದನೆಗೊಂಡಿತು. ಬಳಿಕ ಅವರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.

‘ಉಳಿದೆಲ್ಲ ಸಮುದಾಯದ ಹೆಣ್ಣುಮಕ್ಕಳಿಗೂ ಅವರ ತಂದೆಯ ಆಸ್ತಿಯಲ್ಲಿ ಸಮಾನ ಪಾಲು ಇದೆ ಎಂದಾದ ಮೇಲೆ, ಪರಿಶಿಷ್ಟ ಪಂಗಡ (ಬುಡಕಟ್ಟು ಸಮುದಾಯ)ದ ಹೆಣ್ಣುಮಕ್ಕಳನ್ನು ಯಾಕೆ ಈ ಕಾಯ್ದೆಯಿಂದ ವಂಚಿತರನ್ನಾಗಿ ಮಾಡಬೇಕು. ಈ ತಾರತಮ್ಯಕ್ಕೆ ಕಾರಣವಾದರೂ ಏನಿದೆ?. ಬುಡಕಟ್ಟು ಜನಾಂಗದ ಪುರುಷರಿಗೆ ಅವರ ತಂದೆ ಆಸ್ತಿ ಮೇಲೆ ಎಷ್ಟು ಹಕ್ಕು ಇದೆಯೋ, ಅಷ್ಟೇ ಹಕ್ಕನ್ನು ಆ ಸಮುದಾಯದ ಮಹಿಳೆಯರಿಗೂ ಸಮಾನವಾಗಿ ಕೊಡಬೇಕು’ ಎಂದು ಸುಪ್ರೀಂಕೋರ್ಟ್​ ತನ್ನ ತೀರ್ಪಿನಲ್ಲಿ ಹೇಳಿದೆ. ಪರಿಶಿಷ್ಟ ಪಂಗಡ ಮಹಿಳೆಯರನ್ನೂ ಹಿಂದೂ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ಸೇರ್ಪಡೆ ಮಾಡುವ ಜವಾಬ್ದಾರಿಯನ್ನು ಕೇಂದ್ರಸರ್ಕಾರಕ್ಕೆ ವಹಿಸಿದೆ.

ಸಂವಿಧಾನ ರಚನೆಯಾಗಿ 70 ವರ್ಷಗಳಾದವು. ಇಷ್ಟುವರ್ಷಗಳಾದರೂ ಪರಿಶಿಷ್ಟ ಪಂಗಡದ ಹೆಣ್ಣುಮಕ್ಕಳಿಗೆ ಸಮಾನ ನ್ಯಾಯ ಸಿಕ್ಕಿಲ್ಲ. ಹಿಂದು ಉತ್ತರಾಧಿಕಾರ ಕಾಯ್ದೆಯ ಪರಿಚ್ಛೇದವನ್ನು ತಿದ್ದುಪಡಿ ಮಾಡಲು ಇದು ಸಕಾಲ. ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳುತ್ತದೆ. ಸಮರ್ಪಕ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ನಂಬಿಕೆ ನಮಗೆ ಇದೆ. ಭಾರತದ ಸಂವಿಧಾನದ ಆರ್ಟಿಕಲ್​ 14ರಡಿ ಸಮಾನತೆಯ ಮತ್ತು ಆರ್ಟಿಕಲ್​ 21ರಡಿ ಜೀವಿಸುವ ಹಕ್ಕನ್ನು ನೀಡಲಾಗಿದೆ. ಈ ಮೂಲಭೂತ ಹಕ್ಕುಗಳನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರ ಉತ್ತರಾಧಿಕಾರ ಕಾಯ್ದೆ ತಿದ್ದುಪಡಿ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಎಂ.ಆರ್​.ಶಾ ಮತ್ತು ಕೃಷ್ಣ ಮುರಾರಿ ಹೇಳಿದ್ದಾರೆ.

ಭಾರತದಲ್ಲಿ 1956ಕ್ಕೂ ಮೊದಲು ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಪಾಲು ಎಂಬ ಪರಿಕಲ್ಪನೆ ಇರಲಿಲ್ಲ. 1956ರಲ್ಲಿ ಅನುಷ್ಠಾನಗೊಂಡ ಹಿಂದು ಉತ್ತರಾಧಿಕಾರ ಕಾಯ್ದೆಯಲ್ಲಿ, ‘ಅವಿವಾಹಿತ ಹೆಣ್ಣುಮಕ್ಕಳು ತಂದೆಯ ಆಸ್ತಿಗೆ ಸಮಾನ ಪಾಲುದಾರರು’ ಎಂಬ ಅಂಶ ಹೇಳಲಾಯಿತು. ಅವರು ಅವಿವಾಹಿತರಾಗಿ ಇರುವವರೆಗೆ ಮಾತ್ರ ತಂದೆ ಆಸ್ತಿಗೆ ಪಾಲುದಾರರು ಆಗಿರುತ್ತಾರೆ. ಮದುವೆ ಮಾಡಿಕೊಂಡು ಪತಿ ಮನೆಗೆ ಹೋದ ಮೇಲೆ ಅವರಿಗೆ ತಂದೆ ಆಸ್ತಿ ಮೇಲೆ ಯಾವುದೇ ಅಧಿಕಾರ ಉಳಿಯುವುದಿಲ್ಲ ಎಂಬುದು ಈ ಕಾಯ್ದೆಯ ಸಾರಾಂಶ. ಬಳಿಕ 2005ರಲ್ಲಿ ಈ ಹಿಂದು ಉತ್ತರಾಧಿಕಾರಿ ಕಾಯ್ದೆಗೆ ತಿದ್ದುಪಡಿ ತಂದು ‘ವಿವಾಹವಾಗಿ ಹೋದ ಹೆಣ್ಣುಮಕ್ಕಳೂ ಕೂಡ ತಂದೆಯ ಆಸ್ತಿಯಲ್ಲಿ ಸಮಾನ ಪಾಲು ಕೇಳಬಹುದು’ ಎಂಬ ನಿಯಮ ಸೇರಿಸಲಾಯಿತು. ಆಗ ತವರು ಮನೆ ಆಸ್ತಿ ಬೇಕು ಎಂಬ ವಿಚಾರವಾಗಿ ಹಲವು ಮಹಿಳೆಯರು ಆಗ್ರಹಿಸಲು ಶುರು ಮಾಡಿದರು. ಇದೇ ವಿಚಾರವಾಗಿ ಹಲವರು ಮಹಿಳೆಯರು/ ಅವರ ತವರು ಮನೆಯವರು ಕೋರ್ಟ್​ ಮೆಟ್ಟಿಲೇರಲು ಪ್ರಾರಂಭ ಮಾಡಿದರು. ಹಾಗೇ, 2018ರಲ್ಲಿ ಇಂಥದ್ದೇ ಒಂದು ಕೇಸ್​ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​ ‘ತಂದೆ ಮೃತಪಡುವಾಗ ತನ್ನೆಲ್ಲ ಆಸ್ತಿಯನ್ನು ಗಂಡುಮಕ್ಕಳಿಗೆ ಬರೆದಿದ್ದರೂ, ನಂತರ ಹೆಣ್ಣುಮಕ್ಕಳು ಸಹೋದರರ ಬಳಿ ಆಸ್ತಿಯಲ್ಲಿ ಸಮಾನ ಪಾಲು ಕೇಳಬಹುದು’ ಎಂದು ತೀರ್ಪು ನೀಡಿದೆ. ಸದ್ಯದ ಮಟ್ಟಿಗೆ ಈ ಕಾಯ್ದೆ-ತೀರ್ಪುಗಳೆಲ್ಲ ಮಹಿಳೆಯರ ಪರವಾಗಿಯೇ ಇದ್ದರೂ, ಪರಿಶಿಷ್ಟ ಪಂಗಡದ ಮಹಿಳೆಯರು ಮಾತ್ರ ವಂಚಿತರಾಗಿದ್ದಾರೆ. ಅದನ್ನು ಸರಿಪಡಿಸುವಂತೆ ಸುಪ್ರೀಂಕೋರ್ಟ್​ ಕೇಂದ್ರಕ್ಕೆ ಹೇಳಿದೆ.

ಇದನ್ನೂ ಓದಿ: SCST ಮೀಸಲು | ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಬೇಡಿಕೆ ಇದೆ: ಎಂಟಿಬಿ ನಾಗರಾಜ್‌

Exit mobile version