Site icon Vistara News

ಸಾವಿನ ವ್ಯಾಪಾರಿಯಿಂದ ರಾವಣನವರೆಗೆ; ಪ್ರಧಾನಿ ಮೋದಿಗೆ ಕಾಂಗ್ರೆಸ್​​ನಿಂದ ನಿರಂತರ ಅವಮಾನ ಎಂದ ಅಮಿತ್​ ಮಾಳವಿಯಾ

amit malviya Reacts to Mallikarjun Kharge Over Ravana Comment

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿಯನ್ನು ರಾವಣನಿಗೆ ಹೋಲಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಗೆ ಬಿಜೆಪಿ ನಾಯಕ, ಐಟಿ ಸೆಲ್​ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ತಿರುಗೇಟು ನೀಡಿದ್ದಾರೆ. ಇಂದು ಗುಜರಾತ್​ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದ ಮಲ್ಲಿಕಾರ್ಜುನ್​ ಖರ್ಗೆ, ‘ಯಾವುದೇ ರಾಜ್ಯದ, ಯಾವುದೇ ಚುನಾವಣೆ ಬರಲಿ, ಬಿಜೆಪಿಯವರು ಪ್ರಧಾನಿ ಮೋದಿ ಹೆಸರಲ್ಲಿ, ಅವರ ಮುಖ ತೋರಿಸಿ ಮತ ಕೇಳುತ್ತಾರೆ. ಮುನ್ಸಿಪಲ್ಟಿ ಚುನಾವಣೆಗಳಲ್ಲೂ ಅವರಿಗೆ ಮೋದಿಯವರೇ ಬೇಕು. ಹೀಗೆ ಎಲ್ಲ ಚುನಾವಣೆಯಲ್ಲೂ ಮೋದಿ ಹೆಸರು ಹೇಳುತ್ತಾರಲ್ಲ, ಪ್ರಧಾನಿ ಮೋದಿಯವರಿಗೇನು ರಾವಣನಂತೆ 100 ತಲೆಗಳಿವೆಯಾ? ಅವರೇನು ಎಲ್ಲ ಕಡೆ ಹೋಗಿ ಕೆಲಸ ಮಾಡುತ್ತಾರಾ? ಎಂದು ಪ್ರಶ್ನಿಸಿದ್ದರು.

ಮಲ್ಲಿಕಾರ್ಜುನ್​ ಖರ್ಗೆ ಮಾತುಗಳಿಗೆ ಬಿಜೆಪಿಯವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಗೇ, ಬಿಜೆಪಿ ನಾಯಕ ಅಮಿತ್ ಮಾಳವಿಯಾ ಟ್ವೀಟ್ ಮಾಡಿ ‘ಗುಜರಾತ್​ ವಿಧಾನಸಭೆ ಚುನಾವಣೆಯ ಬಿಸಿಯನ್ನು ತಡೆದುಕೊಳ್ಳಲು ಸಾಧ್ಯವಾಗದ ಮಲ್ಲಿಕಾರ್ಜುನ್​ ಖರ್ಗೆ ಕತ್ತಿಯ ಅಲಗಿನ ಮೇಲೆ ನಿಂತಿದ್ದಾರೆ. ಹೀಗಾಗಿ ಅವರು ತಮ್ಮ ಮಾತಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನೇ ರಾವಣ ಎಂದು ಕರೆದಿದ್ದಾರೆ. ನರೇಂದ್ರ ಮೋದಿಯನ್ನು ಕಾಂಗ್ರೆಸ್​ ಅಂದು ಸಾವಿನ ವ್ಯಾಪಾರಿ ಎಂದು ಕರೆದಿತ್ತು. ಈಗ ರಾವಣ ಎಂದು ಹೇಳಿದರು. ಹೀಗೆ ನಿರಂತರವಾಗಿ ಅವರು ಗುಜರಾತ್​ ಮತ್ತು ಅದರ ಪುತ್ರನಿಗೆ ಅವಮಾನ ಮಾಡುತ್ತಲೇ ಬಂದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

2007ರ ಗುಜರಾತ್​ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಅಂದು ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ನರೇಂದ್ರ ಮೋದಿಯವರನ್ನು ಮೌತ್​ ಕಾ ಸೌದಾಗರ್ (ಸಾವಿನ ವ್ಯಾಪಾರಿ)​ ಎಂದು ಕರೆದಿದ್ದರು. ಗುಜರಾತ್​​ನ ಗೋದ್ರಾ ಹತ್ಯಾಕಾಂಡದ ಬಗ್ಗೆ ಮಾತನಾಡುತ್ತ ಅವರು ನರೇಂದ್ರ ಮೋದಿಯವರಿಗೆ ಈ ಮಾತುಗಳನ್ನಾಡಿದ್ದರು. ಬಳಿಕ ನರೇಂದ್ರ ಮೋದಿ ಗುಜರಾತ್​ ಮುಖ್ಯಮಂತ್ರಿಯಾದ ಮೇಲೆ ಕೂಡ ಅವರನ್ನು ಒಬ್ಬ ಸುಳ್ಳುಗಾರ, ಅಪ್ರಾಮಾಣಿಕ ಎಂದೇ ಅವರು ಜರಿದಿದ್ದರು. ಅದನ್ನೇ ಅಮಿತ್​ ಮಾಳವಿಯಾ ಇಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Defection politics | ಜಿ.ಟಿ. ದೇವೇಗೌಡರ ಐವರು ಆಪ್ತ ನಾಯಕರು ಜೆಡಿಎಸ್‌ಗೆ ರಾಜೀನಾಮೆ, ಕಾಂಗ್ರೆಸ್‌ ಸೇರ್ಪಡೆ ಫಿಕ್ಸ್‌

Exit mobile version