ಕೋಲ್ಕತ್ತ: ಬಿಜೆಪಿ ನಾಯಕ, ಗೃಹ ಸಚಿವ ಅಮಿತ್ ಶಾ ಅವರನ್ನು ವ್ಯಂಗ್ಯ ಮಾಡುವ ಟಿ ಶರ್ಟ್ವೊಂದನ್ನು ತೃಣಮೂಲ ಕಾಂಗ್ರೆಸ್ ವಿನ್ಯಾಸಗೊಳಿಸಿದೆ. ಬಿಜೆಪಿ ಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪಪ್ಪು ಎನ್ನುತ್ತಿದ್ದರೆ, ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಗೃಹ ಸಚಿವ ಅಮಿತ್ ಶಾ ಅವರನ್ನು ಭಾರತದ ಅತಿದೊಡ್ಡ ಪಪ್ಪು (India’s Biggest Pappu) ಎಂದು ಕರೆದಿದ್ದಾರೆ.
ಬಿಜೆಪಿಯನ್ನು ಸದಾ ಟೀಕಿಸುವ ತೃಣಮೂಲ ಕಾಂಗ್ರೆಸ್ ವಿನ್ಯಾಸ ಗೊಳಿಸಿರುವ ಈ ಟಿ ಶರ್ಟ್ ಬಿಳಿ ಬಣ್ಣದಲ್ಲಿದೆ. ಅದರ ಮೇಲೆ ಅಮಿತ್ ಶಾ ಕಾರ್ಟೂನ್ ಚಿತ್ರವಿದ್ದು, ಕೆಂಪು ಬಣ್ಣದಲ್ಲಿ (India’s Biggest ಎಂದು ಬರೆಯಲಾಗಿದೆ. ಹಾಗೇ, ಪಪ್ಪು ಎಂಬ ಶಬ್ದವನ್ನು ಕಪ್ಪು ಬಣ್ಣದಲ್ಲಿ ಬರೆಯಲಾಗಿದೆ. ಅಕ್ಟೋಬರ್ ಮೊದಲವಾರದಲ್ಲಿ ಪ್ರಾರಂಭವಾಗುವ ದುರ್ಗಾಪೂಜೆ ಸಮಯದಲ್ಲಿ ಟಿಎಂಸಿ ಈ ಟಿ ಶರ್ಟ್ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ನಡೆಸಲು ಮುಂದಾಗಿದೆ.
ಅಮಿತ್ ಶಾ ಅವರ ಫೋಟೋ ಇರುವ ಈ ಟಿ ಶರ್ಟ್ ಧರಿಸಿರುವ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯನ್ ಅವರು ವಿಡಿಯೋವೊಂದನ್ನು ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಅಮಿತ್ ಶಾ ಅವರಿಗೆ ತಾವ್ಯಾಕೆ ಭಾರತದ ಅತಿದೊಡ್ಡ ಪಪ್ಪು ಎಂದು ಹೆಸರಿಟ್ಟಿದ್ದೇವೆ’ ಎಂಬುದಕ್ಕೆ ಐದಾರು ಕಾರಣಗಳನ್ನು ಕೊಟ್ಟಿದ್ದಾರೆ. ‘ಅಮಿತ್ ಶಾ ಅವರು India’s Biggest Pappu’ ಎಂಬ ಟೈಟಲ್ನ್ನು ಗಳಿಸಿದ್ದಾರೆ. ಗೃಹ ಇಲಾಖೆ ಅಡಿಯಲ್ಲಿ ಬರುವ ದೆಹಲಿ ಪೊಲೀಸ್ ವ್ಯವಸ್ಥೆ, ಸಿಆರ್ಪಿಎಫ್, ಬಿಎಸ್ಎಫ್ ಗಳು ಯಾವವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇವೆಲ್ಲವೂ ಅಮಿತ್ ಶಾ ವೈಫಲ್ಯ. ಅಷ್ಟೇ ಅಲ್ಲ, ಸಿಬಿಐ, ಇ ಡಿಗಳಂತ ತನಿಖಾ ಸಂಸ್ಥೆಗಳೆಲ್ಲ ಬಿಜೆಪಿ ಅಧಿಕಾರ ಇಲ್ಲದ ರಾಜ್ಯಗಳ ರಾಜಕಾರಣಿಗಳನ್ನು ಮಾತ್ರ ಟಾರ್ಗೆಟ್ ಮಾಡುತ್ತಿವೆ. ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡೆದಿರುವುದೇ ಗೃಹ ಇಲಾಖೆಯಲ್ಲಿ’ -ಇಂಥ ಹತ್ತು-ಹಲವು ಕಾರಣಗಳಿಗಾಗಿ ನಾವು ಗೃಹ ಸಚಿವರಿಗೆ ಈ ಹೆಸರು ಇಟ್ಟಿದ್ದೇವೆ ಎಂದು ಹೇಳಿದ್ದಾರೆ. ಅಂದಹಾಗೇ, ಅಮಿತ್ ಶಾ ಅವರಿಗೆ India’s Biggest Pappu ಎಂದು ನಾಮಕರಣ ಮಾಡಿದ್ದು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ. ಸೋಷಿಯಲ್ ಮೀಡಿಯಾದಲ್ಲಿ ಶುರುವಾದ ಟ್ರೆಂಡ್ ಈಗ ಟಿ-ಶರ್ಟ್ವರೆಗೆ ಬಂದು ನಿಂತಿದೆ.
ಪಶ್ಚಿಮ ಬಂಗಾಳ ಕಲ್ಲಿದ್ದಲು ಅಕ್ರಮ ಮಾರಾಟ ಹಗರಣದಡಿ ಇಡಿಯಿಂದ ವಿಚಾರಣೆಗೆ ಒಳಪಟ್ಟ ಬಳಿಕ ಸೆಪ್ಟೆಂಬರ್ 2ರಂದು ಮಾಧ್ಯಮಗಳ ಜತೆ ಮಾತನಾಡಿದ್ದ ಅಭಿಷೇಕ್ ಬ್ಯಾನರ್ಜಿ, ಅಮಿತ್ ಶಾ ಅವರು ಭಾರತದ ಬಹುದೊಡ್ಡ ಪಪ್ಪು ಎಂದಿದ್ದರು. ಅದಾದ ಮರುದಿನವೇ ಅಭಿಷೇಕ್ ಬ್ಯಾನರ್ಜಿಯ ಸೋದರ ಸಂಬಂಧಿಗಳಾದ ಆಕಾಶ್ ಬ್ಯಾನರ್ಜಿ ಮತ್ತು ಅದಿತಿ ಗಯೆನ್ ಅವರು ಅಮಿತ್ ಶಾ ಕಾರ್ಟೂನ್ ಮತ್ತು ಪಪ್ಪು ಎಂದು ಬರೆದಿದ್ದ ಟಿ ಶರ್ಟ್ ಧರಿಸಿ ಫೋಟೋ ತೆಗೆಸಿಕೊಂಡು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡಿದ್ದರು. ಮೊದಲಿಗೆ ಟಿ ಶರ್ಟ್ಗಳು ಆನ್ಲೈನ್ನಲ್ಲಿ ಮಾತ್ರ ಸಿಗುತ್ತಿದ್ದವು, ಈಗೀಗ ಮಾರುಕಟ್ಟೆಯಲ್ಲೂ ಸಿಗುತ್ತಿವೆ ಎನ್ನಲಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುವ ಫೋಟೋಗಳು ವೈರಲ್