Site icon Vistara News

Amit Shah: ಪುಲ್ವಾಮಾ ದಾಳಿ ಬಗ್ಗೆ ಸತ್ಯಪಾಲ್ ಮಲಿಕ್​ ಹೇಳಿದ್ದು ನಿಜವೇ ಆಗಿದ್ದರೆ..; ಅಮಿತ್​ ಶಾ ಕೇಳಿದ ಪ್ರಶ್ನೆ ಏನು?

Amit Shah reacts over Pulwama Terror Attack Comments Made by Satyapal Malik

#image_title

ಬೆಂಗಳೂರು: 2019ರಲ್ಲಿ ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರದಾಳಿಯಾಗಿ, ಸಿಆರ್​ಪಿಎಫ್​​ (CRPF)ನ 40ಕ್ಕೂ ಹೆಚ್ಚು ಯೋಧರು ಮೃತರಾಗಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯದಿಂದ. ನಮ್ಮ ಭದ್ರತಾ ವೈಫಲ್ಯದಿಂದಲೇ ಉಗ್ರರು ಇಷ್ಟು ದೊಡ್ಡಮಟ್ಟದ ದಾಳಿ ನಡೆಸಲು ಸಾಧ್ಯವಾಯಿತು ಎಂದು ಹೇಳಿದ್ದ ಜಮ್ಮು-ಕಾಶ್ಮೀರ ಮಾಜಿ ಲೆಫ್ಟಿನೆಂಟ್​ ಗವರ್ನರ್​ ಸತ್ಯಪಾಲ್ ಮಲಿಕ್​ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿರುಗೇಟು ಕೊಟ್ಟಿದ್ದಾರೆ. ‘ಸತ್ಯಪಾಲ್ ಮಲಿಕ್​ (Satyapal Malik) ಹೇಳುತ್ತಿರುವುದು ಸತ್ಯವೇ ಆಗಿದ್ದರೆ, ಅವರ್ಯಾಕೆ ಇದನ್ನೆಲ್ಲ ತಾವು ಅಧಿಕಾರದಲ್ಲಿ ಇದ್ದಾಗ ಹೇಳಲಿಲ್ಲ?’ ಎಂದು ಪ್ರಶ್ನಿಸಿದ್ದಾರೆ.

2019ರಲ್ಲಿ ಪುಲ್ವಾಮಾ ದಾಳಿ ನಡೆಯುವ ಸಂದರ್ಭದಲ್ಲಿ ಸತ್ಯಪಾಲ ಮಲಿಕ್ ಅವರೇ ಲೆಫ್ಟಿನೆಂಟ್ ಗವರ್ನರ್ ಆಗಿದ್ದರು. ಇಷ್ಟು ವರ್ಷ ಸುಮ್ಮನಿದ್ದ ಸತ್ಯಪಾಲ್ ಮಲಿಕ್ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ, ‘ಪುಲ್ವಾಮಾದಲ್ಲಿ ದಾಳಿ ನಡೆದಿದ್ದಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಸಿಆರ್​ಪಿಎಫ್​ ಸಿಬ್ಬಂದಿಗೆ ಬೆದರಿಕೆಯಿದ್ದರೂ, ಅಂದು ಅವರಿಗೆ ವಿಮಾನ ನೀಡಲು ನಿರಾಕರಿಸಿ, ರಸ್ತೆ ಮಾರ್ಗದಲ್ಲೇ ಪ್ರಯಾಣಿಸುವಂತೆ ಮಾಡಲಾಗಿತ್ತು. ಹೀಗಾಗಿ ಉಗ್ರರು ಸುಲಭವಾಗಿ ದಾಳಿ ನಡೆಸಿದರು’ ಎಂದು ಹೇಳಿದ್ದರು.

ಇದನ್ನೂ ಓದಿ: Amit Shah: ಇಂದು ರಾಜ್ಯಕ್ಕೆ ಮತ್ತೆ ಅಮಿತ್‌ ಶಾ; ಮೈಸೂರು, ಚಾಮರಾಜನಗರದಲ್ಲಿ ರಣತಂತ್ರ

ಶನಿವಾರ ಬೆಂಗಳೂರಿನಲ್ಲಿ ಇಂಡಿಯಾ ಟುಡೆ ಕರ್ನಾಟಕ ರೌಂಡ್​ ಟೇಬಲ್​ 2023 ಸಮಾವೇಶದಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಸತ್ಯಪಾಲ್ ಮಲಿಕ್​ಗೆ ತಿರುಗೇಟು ಕೊಟ್ಟಿದ್ದಾರೆ. ‘ನೀವು ಅಧಿಕಾರದಲ್ಲಿ ಇದ್ದಾಗ ಯಾಕೆ ನಿಮ್ಮ ಆತ್ಮಸಾಕ್ಷಿ ಎಚ್ಚರಗೊಳ್ಳಲಿಲ್ಲ. ಪುಲ್ವಾಮಾ ದಾಳಿಗೆ ಸಂಬಂಧಪಟ್ಟಂತೆ ಸತ್ಯಪಾಲ್​ ಮಲಿಕ್ ಅವರು ಎತ್ತಿರುವ ಪ್ರಶ್ನೆಯ ವಿಶ್ವಾಸಾರ್ಹತೆಯನ್ನು ಪತ್ರಕರ್ತರು, ಸಾಮಾನ್ಯ ಜನರು ಪರಾಮರ್ಶಿಸಿ ನೋಡಬೇಕು. ಇವರು ಹೇಳಿದ್ದು ನಿಜವೇ ಆಗಿದ್ದರೆ, ಅಂದು ಗವರ್ನರ್​ ಆಗಿದ್ದಾಗಲೇ ಧ್ವನಿ ಎತ್ತಬಹುದಿತ್ತಲ್ಲ?’ ಎಂದು ಅಮಿತ್ ಶಾ ಪ್ರಶ್ನೆ ಮಾಡಿದ್ದಾರೆ. ‘ಇಂಥ ಸೂಕ್ಷ್ಮ ಸಂಗತಿಗಳನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲೇಬಾರದು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಗುಟ್ಟಾಗಿ ಏನೂ ಮಾಡುವುದಿಲ್ಲ. ನಮ್ಮೊಂದಿಗೆ ಇದ್ದು, ಅಧಿಕಾರ ಅನುಭವಿಸಿ ಬಿಟ್ಟು ಹೋದ ನಂತರ ವೈಯಕ್ತಿಕ, ರಾಜಕೀಯ ಹಿತಾಸಕ್ತಿಗಾಗಿ ಈ ಆರೋಪಗಳನ್ನು ಮಾಡಿದರೆ, ಅದನ್ನೆಲ್ಲ ಜನರು, ಮಾಧ್ಯಮಗಳು ಗಮನಿಸುತ್ತವೆ. ನಮ್ಮನ್ನು ಬಿಟ್ಟು ಹೋದ ಬಳಿಕ ಹೇಗೆ ಈ ವಿಷಯವೆಲ್ಲ ಅವರ ತಲೆಯಲ್ಲಿ ಬರುತ್ತದೆ’ ಎಂದಿದ್ದಾರೆ.

ರಿಲಯನ್ಸ್​ ಜನರಲ್​ ವಿಮಾ ಹಗರಣಕ್ಕೆ ಸಂಬಂಧಪಟ್ಟಂತೆ ಸತ್ಯಪಾಲ್ ಮಲಿಕ್​ಗೆ ಸಿಬಿಐ ಸಮನ್ಸ್ ನೀಡಿದ ಬಗ್ಗೆ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಅಮಿತ್ ಶಾ ‘ಅವರಿಗೆ ತನಿಖಾ ದಳ ಸಮನ್ಸ್ ನೀಡುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಇದು ಬಹುಶಃ ಮೂರನೇ ಬಾರಿ ಸಮನ್ಸ್ ನೀಡುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ಯಾರೇ ಮಾತನಾಡಿದರೂ ಅವರ ವಿರುದ್ಧ ತನಿಖಾ ದಳಗಳ ಅಸ್ತ್ರ ಪ್ರಯೋಗ ಮಾಡಲಾಗುತ್ತದೆ ಎಂಬ ಆರೋಪವನ್ನು ಪ್ರತಿಪಕ್ಷಗಳು ನಿರಂತರವಾಗಿ ಮಾಡುತ್ತಿವೆ. ಸತ್ಯಪಾಲ್ ಮಲಿಕ್​ ಅವರು ಪುಲ್ವಾಮಾ ದಾಳಿ ಬಗ್ಗೆ ಮಾತನಾಡುತ್ತಿದ್ದಂತೆ ಅವರಿಗೆ ಸಿಬಿಐ ಸಮನ್ಸ್​ ನೀಡಿತ್ತು. ಅದರ ಬೆನ್ನಲ್ಲೇ ಕಾಂಗ್ರೆಸ್ ಅಪಸ್ವರ ತೆಗೆದಿತ್ತು. ಪುಲ್ವಾಮಾ ದಾಳಿ ಬಗ್ಗೆ ಸತ್ಯ ನುಡಿದ ಸತ್ಯಪಾಲ್ ಮಲಿಕ್ ವಿರುದ್ಧ ಬಿಜೆಪಿ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್​ ನಾಯಕ ಪವನ್ ಖೇರಾ ಟೀಕಿಸಿದ್ದರು.

ಇದನ್ನೂ ಓದಿ: Satya Pal Malik: ರಿಲಯನ್ಸ್ ಜನರಲ್ ಇನ್ಶೂರೆನ್ಸ್ ಹಗರಣ; ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್‌ಗೆ ಸಿಬಿಐ ಸಮನ್ಸ್!

Exit mobile version