ನವ ದೆಹಲಿ: ಪೊಲೀಸರ ಕಣ್ತಪ್ಪಿಸಿ, ನಾಪತ್ತೆಯಾಗಿರುವ ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ (Amritpal Singh)ಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಜತೆ ಸಂಪರ್ಕವಿತ್ತು ಎಂಬುದನ್ನು ಈಗಾಗಲೇ ಭಾರತದ ಗುಪ್ತಚರ ದಳ ತಿಳಿಸಿದೆ. ಅದರೊಂದಿಗೆ ಈಗ ಇನ್ನೊಂದು ಮಹತ್ವದ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ‘ಅಮೃತ್ಪಾಲ್ ಸಿಂಗ್ನ ಸಂಘಟನೆಯಲ್ಲಿ ಹಣಕಾಸು ವಿಭಾಗ ನೋಡಿಕೊಳ್ಳುತ್ತಿದ್ದ, ಅವನ ಆಪ್ತನಲ್ಲಿ ಒಬ್ಬನಾಗಿರುವ ದಲ್ಜಿತ್ ಖಲ್ಸಿ ಮತ್ತು ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಖಾಮರ್ ಜಾವೇದ್ ಬಜ್ವಾನ ಪುತ್ರ ಇಬ್ಬರೂ ಪರಮಾಪ್ತರು ಎಂದು ಹೇಳಿದ್ದಾರೆ.
ದುಬೈನಲ್ಲಿರುವ ಸಾದ್ ಬಾಜ್ವಾ ಕಂಪನಿಗಾಗಿ ದಲ್ಜಿತ್ ಖಲ್ಸಿ ಕೆಲಸ ಮಾಡುತ್ತಿದ್ದ. ಈತ ಪದೇಪದೆ ದುಬೈಗೆ ಹೋಗುತ್ತಿದ್ದ. ಹೀಗೆ ದುಬೈಗೆ ಹೋದಾಗಲೆಲ್ಲ ಅವನಿಗೆ ಅಲ್ಲಿ ಉಳಿಯುವ ವ್ಯವಸ್ಥೆಯನ್ನು ಮಾಡಿಕೊಡುತ್ತಿದ್ದುದು ಖಲಿಸ್ತಾನಿ ಉಗ್ರ ಲಂಡ ಹಾರಿಕೆ. ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥನ ಪುತ್ರನೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಿದ್ದ ದಲ್ಜಿತ್ ಖಲ್ಸಿ, ಪಾಕಿಸ್ತಾನದ ಐಎಸ್ಐ ಜತೆಯೂ ಕೈಜೋಡಿಸಿದ್ದಕ್ಕೆ ಸಾಕ್ಷಿ ಇದೆ ಎಂದೂ ಗುಪ್ತಚರ ಇಲಾಖೆ ತಿಳಿಸಿದೆ. ದಲ್ಜಿತ್ ಖಲ್ಸಿ ವ್ಯಾಪ್ತಿ ಇಷ್ಟೇ ಅಲ್ಲ, ಅವನು ಬಾಂಬಿಯಾ ಗ್ಯಾಂಗ್ನ ಗ್ಯಾಂಗ್ಸ್ಟರ್ಗಳೊಂದಿಗೂ ಆತ್ಮೀಯನಾಗಿಯೇ ಇದ್ದ ಎನ್ನಲಾಗಿದೆ. ಇದೂ ಕೂಡ ಪಂಜಾಬ್ನಲ್ಲಿ ಸಕ್ರಿಯವಾಗಿರುವ ಒಂದು ಗ್ಯಾಂಗ್ ಆಗಿದ್ದು, ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ವಿರೋಧಿಯಾಗಿದೆ.
ಅಮೃತ್ಪಾಲ್ ತಾನೊಬ್ಬ ಸಿಖ್ ಮೂಲಭೂತವಾದಿ ಎಂದು ಹೇಳಿಕೊಂಡಿದ್ದಾರೆ. ವಾರಿಸ್ ಪಂಜಾಬ್ ದೆ ಎಂಬ ಸಂಘಟನೆ ಮೂಲಕ ಖಲಿಸ್ತಾನಿ ಹೋರಾಟದ ಹೆಸರಲ್ಲಿ ಹಿಂಸಾಚಾರ ಪ್ರಚೋದನೆ ಮಾಡುತ್ತಿದ್ದ. ಮಾರ್ಚ್ 18ರಂದು ಪಂಜಾಬ್ನ ಜಲಂಧರ್ನ ನಾಕೋಡರ್ ಬಳಿ ಇವನನ್ನು ಅರೆಸ್ಟ್ ಮಾಡಲು ಪೊಲೀಸರು ಆಗಮಿಸಿದ್ದರು. ಆದರೆ ಆತ ತಪ್ಪಿಸಿಕೊಂಡಿದ್ದಾನೆ. ಅವನ ಆರು ಮಂದಿ ಸಹಚರರು ಅರೆಸ್ಟ್ ಆಗಿದ್ದರು. ಅಷ್ಟೇ ಅಲ್ಲ, ಆತನ ಸಂಘಟನೆಯ 150ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಮೃತ್ಪಾಲ್ ಸಿಂಗ್ ನೇಪಾಳ ದೇಶ ಪ್ರವೇಶ ಮಾಡಿರುವ ಸಾಧ್ಯತೆ ಇರುವುದಾಗಿ ಪೊಲೀಸರು ಅಂದಾಜಿಸಿದ್ದಾರೆ. ಅಷ್ಟೇ ಅಲ್ಲ, ಅಮೃತ್ಪಾಲ್ ಸಿಂಗ್ ಅಲ್ಲಿಂದ ಮತ್ತೊಂದು ರಾಷ್ಟ್ರಕ್ಕೆ ಪರಾರಿಯಾಗದಂತೆ ಕ್ರಮ ಕೈಗೊಳ್ಳುವಂತೆ ನೇಪಾಳ ಸರ್ಕಾರಕ್ಕೆ ಭಾರತದಿಂದ ಮನವಿಯನ್ನೂ ಮಾಡಲಾಗಿದೆ. ಇನ್ನೊಂದೆಡೆ ಅಮೃತ್ಪಾಲ್ ಸಿಂಗ್ ಯುಕೆ ನಾಗರಿಕತ್ವ ಪಡೆಯಲು ಹುನ್ನಾರ ನಡೆಸುತ್ತಿದ್ದಾನೆ ಎಂಬ ಬಗ್ಗೆಯೂ ವರದಿಯಾಗಿದೆ. ಆತನ ಪತ್ನಿ ಕಿರೆಣ್ ಕೌರ್ ಮೂಲತಃ ಯುಕೆಯವಳೇ ಆಗಿದ್ದು, ಅದರ ಆಧಾರದ ಮೇಲೆ ಅವನು ಅಲ್ಲಿನ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದಾನೆ. ಅವನೀಗ ಭಾರತದಿಂದ ಪರಾರಿಯಾಗಿದ್ದು, ಲಂಡನ್ಗೆ ಹೋಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.