ಜಲಂಧರ್: ಪೊಲೀಸರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿರುವ ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ (Amritpal Singh) ಬಗ್ಗೆ ಒಂದೊಂದೇ ಮಾಹಿತಿಗಳು ಬಹಿರಂಗವಾಗುತ್ತಿವೆ. ಅವನ ಖಾಸಗಿ ಬದುಕಿನ ಬಗೆಗಿನ ವಿಷಯಗಳೂ ಸುದ್ದಿಯಾಗುತ್ತಿವೆ. ಆತ ಐಷಾರಾಮಿ, ವಿಲಾಸಿ ಜೀವನ ನಡೆಸುತ್ತಿದ್ದ. ಹಲವು ಮಹಿಳೆಯರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮದುವೆಯಾಗಿದ್ದರೂ ಬೇರೆ ಯುವತಿಯರು/ಮಹಿಳೆಯರೊಟ್ಟಿಗೆ ರಿಲೇಶನ್ಶಿಪ್ ಇತ್ತು, ವಿಡಿಯೊ ಕಾಲ್ನಲ್ಲಿ ಮಾತನಾಡುತ್ತಿದ್ದ, ಅಶ್ಲೀಲ ಚಾಟ್ಗಳನ್ನು ಮಾಡುತ್ತಿದ್ದ ಎಂಬಿತ್ಯಾದಿ ವಿವರಗಳು ಈಗಾಗಲೇ ಲಭ್ಯವಾಗಿವೆ. ಈಗ ಅಮೃತ್ಪಾಲ್ ಬಗ್ಗೆ ಇನ್ನೊಂದು ವಿಚಾರ ಗುಪ್ತಚರ ದಳಗಳ ಕಡೆಯಿಂದ ಹೊರಬಿದ್ದಿದೆ.
ಇದೇ ವರ್ಷ ಫೆಬ್ರವರಿಯಲ್ಲಿ ಯುಕೆ ಮೂಲದ ಕಿರೆಣ್ದೀಪ್ ಕೌರ್ ಎಂಬಾಕೆಯೊಂದಿಗೆ ವಿವಾಹವಾಗಿದ್ದ ಅಮೃತ್ಪಾಲ್ ಸಿಂಗ್ ತನ್ನ ಪತ್ನಿಗೆ ಸಿಕ್ಕಾಪಟೆ ಹೊಡೆಯುತ್ತಿದ್ದ. ಅವಳನ್ನು ಸೆರೆಯಾಳಾಗಿ ಇಟ್ಟಿದ್ದ. ಪತ್ನಿಯನ್ನು ಹೀಗೆ ಸೆರೆಯಲ್ಲಿಟ್ಟು, ಆಕೆಗೆ ಥಳಿಸುತ್ತಿದ್ದ ಅಮೃತ್ಪಾಲ್ ದುಬೈ ಮತ್ತು ಥೈಲ್ಯಾಂಡ್ ದೇಶಗಳಿಗೆ ಪದೇಪದೆ ತೆರಳುತ್ತಿದ್ದ. ಅಲ್ಲಿನ ಅನೇಕ ಮಹಿಳೆಯರೊಟ್ಟಿಗೆ ಅವನು ಸಂಬಂಧ ಹೊಂದಿದ್ದ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಆತ ಸಿಖ್ ಧಾರ್ಮಿಕ ಪದ್ಧತಿಗಳನ್ನು ಯಾವುದನ್ನೂ ಅನುಸರಿಸುತ್ತಿರಲಿಲ್ಲ. ತನ್ನನ್ನು ತಾನು ಮೂಲಭೂತವಾದಿ ಎಂದು ಬಾಯ್ಮಾತಲ್ಲಿ ಹೇಳಿಕೊಳ್ಳುತ್ತಿದ್ದ. ಆದರೆ ಅತ್ಯಂತ ಅದ್ಧೂರಿ ಜೀವನ ನಡೆಸುತ್ತಿದ್ದ ಎಂದು ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ಮತ್ತು ಇತರ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Amritpal Singh: ಹೇಡಿಯಂತೆ ಓಡಬೇಡ, ಶೂರನಂತೆ ಶರಣಾಗು; ಅಮೃತ್‌ಪಾಲ್‌ಗೆ ಆಪ್ತನಿಂದಲೇ ಛೀಮಾರಿ
ಮಾ.18ರಂದು ಅಮೃತ್ಪಾಲ್ ಸಿಂಗ್ ಪಂಜಾಬ್ನ ನಾಕೋಡರ್ ಬಳಿ ಇನ್ನೇನು ಪೊಲೀಸರ ಕೈಗೆ ಸಿಕ್ಕಿಬಿದ್ದ ಎನ್ನುವಷ್ಟರಲ್ಲಿ ಪರಾರಿಯಾಗಿದ್ದಾನೆ. ಅವನ ಹುಡುಕಾಟ ಮುಂದುವರಿದೆ. ಅವನೊಂದಿಗೆ ಆಪ್ತವಾಗಿದ್ದವರನ್ನೆಲ್ಲ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪತ್ನಿ ಕಿರೆಣ್ಳನ್ನೂ ಕೂಡ ವಿಚಾರಣೆ ಮಾಡಿದ್ದಾರೆ. ಕಿರೆಣ್ದೀಪ್ ಕೌರ್ ಯುಕೆದಲ್ಲಿಯೇ ಇದ್ದಳು. ಆದರೆ ಅಮೃತ್ಪಾಲ್ ಸಿಂಗ್ನನ್ನು ಮದುವೆಯಾದ ಬಳಿಕ ಪಂಜಾಬ್ಗೆ ಬಂದು ನೆಲೆಸಿದ್ದಳು. ಕೌರ್ ಕೂಡ ಏನೂ ಕಡಿಮೆಯಿಲ್ಲ. ಆಕೆಯೂ ಖಲಿಸ್ತಾನಿ ಹೋರಾಟದಲ್ಲಿ ಸಕ್ರಿಯಳಾಗಿದ್ದಳು. ಯುಕೆಯಲ್ಲಿರುವ ಖಲಿಸ್ತಾನಿ ಬೆಂಬಲಿಗರಿಗೂ ಮತ್ತು ಅಮೃತ್ಪಾಲ್ಗೂ ಮಧ್ಯೆ ಸಂಪರ್ಕದ ಕೊಂಡಿಯಂತೆ ಇದ್ದಳು ಎನ್ನಲಾಗಿದೆ. ಈಗ ಅಮೃತ್ಪಾಲ್ನ ವಿದೇಶಿ ಲಿಂಕ್, ಅಲ್ಲೆಲ್ಲ ಯಾವೆಲ್ಲ ಮಹಿಳೆಯರೊಟ್ಟಿಗೆ ಸಂಪರ್ಕ ಇತ್ತು ಎಂಬಿತ್ಯಾದಿ ವಿಷಯಗಳನ್ನೂ ಪೊಲೀಸರು ತನಿಖೆಗೆ ಕೈಗೆತ್ತಿಕೊಂಡಿದ್ದಾರೆ.