ಅಸ್ಸಾಂನ ದಿಬ್ರುಗಢ್ ಜೈಲಿನಲ್ಲಿರುವ ಖಲಿಸ್ತಾನಿ ನಾಯಕನ ಅಮೃತ್‌ಪಾಲ್ ಸಿಂಗ್(Amritpal Singh)ನನ್ನು ಪೊಲೀಸರು ನಿರಂತರವಾಗಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಹಾಗಿದ್ದಾಗ್ಯೂ ಅವನು ತನ್ನ ಹಣಕಾಸಿನ ಮೂಲದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ತನ್ನನ್ನು ಜೈಲಿನಿಂದ ಬಿಟ್ಟರೆ, ಇನ್ಮುಂದೆ ಯಾವಾಗಲೂ ಅಪರಾಧದ ಗಡಿ ದಾಟುವುದಿಲ್ಲ. ಅಂದರೆ ತಪ್ಪು ಕೆಲಸ ಮಾಡುವುದಿಲ್ಲ. ಅಷ್ಟೇ ಅಲ್ಲ ಪಂಜಾಬ್ ಮತ್ತು ಇತರ ಭಾಗಗಳಲ್ಲಿರುವ ಡ್ರಗ್ಸ್ಸಮಸ್ಯೆ ವಿರುದ್ಧ ಹೋರಾಡಲು ಪೊಲೀಸರಿಗೆ ಸಹಾಯ ಮಾಡುತ್ತೇನೆ ಎಂದು ವಿಚಾರಣೆ ವೇಳೆ ಹೇಳಿದ್ದಾಗಿ ಮಾಹಿತಿ ಸಿಕ್ಕಿದೆ ಎಂದು ನ್ಯೂಸ್ 18 ಮಾಧ್ಯಮ ವರದಿ ಮಾಡಿದೆ.
ಪಂಜಾಬ್ ವಾರಿಸ್ ದೆ ಸಂಘಟನೆ ಮುಖ್ಯಸ್ಥನಾದ ಅಮೃತ್‌ಪಾಲ್ ಸಿಂಗ್ ಈಗ ಡ್ರಗ್ಸ್ ಮತ್ತು ಕ್ರಿಶ್ಚಿಯನ್ನರು ಮಾಡುವ ಮತಾಂತರದ ವಿರುದ್ಧ ಹೋರಾಡುತ್ತೇನೆ. ಇನ್ನು ಅಪರಾಧ ಮಾಡುವುದಿಲ್ಲ ಎಂದು ಹೇಳುತ್ತಾನೆ. ಆದರೆ ಅವನು ಜೈಲಿನಿಂದ ಬಿಟ್ಟ ತಕ್ಷಣ ಇಂಥ ಹೋರಾಟದ ನೆಪದಲ್ಲಿ, ಮೌನದಲ್ಲಿ/ತೆರೆಮರೆಯಲ್ಲೇ ಇದ್ದುಕೊಂಡು ಬೆಂಬಲಿಗರನ್ನು ಒಗ್ಗೂಡಿಸುತ್ತ, ಖಲಿಸ್ತಾನಿ ಹೋರಾಟವನ್ನು ನಡೆಸುತ್ತ ಹೋದರೆ, ಅದು ದೇಶಕ್ಕೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಆತ ಸುದೀರ್ಘ ಸಮಯದವರೆಗೆ ಖಲಿಸ್ತಾನಿ ಪರ ಹೋರಾಟ ನಡೆಸಲು ಸಜ್ಜಾಗಿದ್ದಾನೆ. ಹೀಗಾಗಿ ಇದು ದೇಶಕ್ಕೆ ಮಾರಕ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Amritpal Singh : ಪಾಕಿಸ್ತಾನದ ಐಎಸ್‌ಐ ಜತೆ ಅಮೃತ್‌ಪಾಲ್ ಸಿಂಗ್ ಲಿಂಕ್ ಬಗ್ಗೆ ತನಿಖೆ ಚುರುಕು
ಖಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್ ಮತ್ತು ಆತನ ಸಂಘಟನೆಯ ವಾರಿಸ್ ಪಂಜಾಬ್ ದೆಯ ಇನ್ನಿತರ 9 ಕಾರ್ಯಕರ್ತರನ್ನು ಪಂಜಾಬ್ ಪೊಲೀಸರು ಬಂಧಿಸಿ ಅಸ್ಸಾಂನ ದಿಬ್ರುಗಢ್ ಜೈಲಲ್ಲಿ ಇಟ್ಟಿದ್ದಾರೆ. ಮಾರ್ಚ್ 18ರಂದು ಅಮೃತ್‌ಪಾಲ್ ಸಿಂಗ್ ಜಲಂಧರ್ ಬಳಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಆಗಿನಿಂದಲೂ ಅವನಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಬಳಿಕ ಏಪ್ರಿಲ್ 23ರಂದು ಅವನನನ್ನು ಮೊಗಾ ಜಿಲ್ಲೆಯ ರೊಡೆ ಗ್ರಾಮದಲ್ಲಿರುವ ಗುರುದ್ವಾರದಲ್ಲಿ ಲಾಕ್ ಮಾಡಿ, ಅವನಾಗೇ ಬಂದು ಪೊಲೀಸರ ಎದುರು ಶರಣಾಗುವಂತೆ ಸಂದರ್ಭ ಸೃಷ್ಟಿಸಲಾಗಿತ್ತು. ಅಮೃತ್ ಪಾಲ್ ಬಂಧನಕ್ಕೂ ಮೊದಲೇ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದ ಪಂಜಾಬ್ ಪೊಲೀಸರು ಅವನ ಪತ್ನಿ ಕಿರೆಣ್ ಕೌರ್ ಮತ್ತು ಇತರ 9 ಸಹಚರರನ್ನು ವಶಕ್ಕೆ ಪಡೆದಿದ್ದಾರೆ.