Site icon Vistara News

ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯಿಗೂ ಅಮೃತ್​ಪಾಲ್‌ಗೂ ಏಕೆ ದ್ವೇಷ?; ಪಾಲ್‌ ಸಹಚರ ಹೇಳಿದ್ದೇನು?

Amritpal Singh got Angry on Lawrence bishnoi after his interview

#image_title

ಪಂಜಾಬ್​ನಲ್ಲಿ ಗ್ಯಾಂಗ್​ವಾರ್​ ಹೊಸದಲ್ಲ. ಸದ್ಯ ಆ ರಾಜ್ಯದಲ್ಲಿ ಗ್ಯಾಂಗ್​ಸ್ಟರ್​ಗಳ ವಿರುದ್ಧದ ಕಾರ್ಯಾಚರಣೆ ಚುರುಕುಗೊಳ್ಳುತ್ತಿದೆ. ಈಗಂತೂ ಖಲಿಸ್ತಾನಿ ನಾಯಕ ಅಮೃತ್​ಪಾಲ್​ ಸಿಂಗ್(Amritpal singh)​ಗಾಗಿ ತೀವ್ರ ಶೋಧ ನಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಾವಕಾಶವಾಗಿ ಪಂಜಾಬ್​​ನಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದ ಅಮೃತ್​ಪಾಲ್​ ಸಿಂಗ್​ ಖಲಿಸ್ತಾನಿ ಗುಂಪಿನ ಹೀರೋನಂತೆ ಬೆಳೆಯುತ್ತಿದ್ದ. ಮಾ.18ರಂದು ಜಲಂಧರ್​​ನ ನಾಕೋಡರ್​ನಲ್ಲಿ ಅವನ ಬಂಧನವಾಯಿತು ಎಂದು ಹೇಳಲಾದರೂ, ಬಳಿಕ ಪೊಲೀಸರು ಹೇಳಿಕೆ ನೀಡಿ, ಆತ ತಪ್ಪಿಸಿಕೊಂಡಿದ್ದಾನೆ. ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇಷ್ಟೆಲ್ಲದರ ಮಧ್ಯೆ ಅಮೃತ್​ಪಾಲ್​ ಸಿಂಗ್​ ಸಹಚರನೊಬ್ಬ ‘ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ಅಮೃತ್​ಪಾಲ್​ ಬಂಧನವಾಗಿದೆ. ಆತನನ್ನು ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್​​ಗೆ ಹಸ್ತಾಂತರ ಮಾಡಲು ಪೊಲೀಸರೇ ಮುಂದಾಗಿದ್ದಾರೆ’ ಎಂದು ಹೇಳಿಕೆ ನೀಡಿದ್ದಾನೆ.

ಇನ್ನು 30 ವರ್ಷದ ಲಾರೆನ್ಸ್ ಬಿಷ್ಣೋಯಿ ಬಹುದೊಡ್ಡ ಗ್ಯಾಂಗ್​ಸ್ಟರ್​. ಪಂಜಾಬ್​ ಅಷ್ಟೇ ಅಲ್ಲ, ಇಡೀ ಉತ್ತರ ಭಾರತದಲ್ಲಿಯೇ ನಟೋರಿಯಸ್​ ಎನ್ನಿಸಿಕೊಂಡವ. ಇವನದು ಅತ್ಯಂತ ದೊಡ್ಡ ಗ್ಯಾಂಗ್. ಇವನ ಶೂಟರ್​​ಗಳು ದೇಶಾದ್ಯಂತ 700ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ ಎಂದೇ ಹೇಳಲಾಗಿದೆ. 20ಕ್ಕೂ ಹೆಚ್ಚು ಕೇಸ್​​ಗಳನ್ನು ಮೈಮೇಲೆ ಎಳೆದುಕೊಂಡು, ಸದ್ಯ ತಿಹಾರ್ ಜೈಲು ಸೇರಿರುವ ಲಾರೆನ್ಸ್ ಬಿಷ್ಣೋಯಿ, ಅಲ್ಲಿದ್ದುಕೊಂಡೇ ಕೆಲವು ಯೋಜನೆಗಳಿಗೆ ಮಾಸ್ಟರ್ ಮೈಂಡ್​ ಆಗಿದ್ದಾನೆ. ಕಳೆದ ವರ್ಷ ಹತ್ಯೆಗೀಡಾದ ಪಂಜಾಬ್​ ಗಾಯಕ ಸಿಧು ಮೂಸೆವಾಲಾ ಕೇಸ್​ನಲ್ಲಿ ಕೂಡ ಈತನ ಪಾಲಿದೆ ಎನ್ನಲಾಗಿದೆ.

ಲಾರೆನ್ಸ್​ಗೂ, ಅಮೃತ್​ಪಾಲ್​ಗೂ ವೈಷಮ್ಯ?
ಅಮೃತ್​ಪಾಲ್​ ಸಿಂಗ್​ ಮತ್ತು ಲಾರೆನ್ಸ್​ ಬಿಷ್ಣೋಯಿ ಮಧ್ಯೆ ವೈಯಕ್ತಿಕ ವೈಷಮ್ಯ ಇರುವ ಬಗ್ಗೆ, ಇವರಿಬ್ಬರ ಶತ್ರುತ್ವಕ್ಕೆ ಇತಿಹಾಸ ಇರುವ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಆದರೆ ಈ ಎರಡೂ ನಾಯಕರ ಗ್ಯಾಂಗ್​​ಗಳು ಪರಸ್ಪರರಿಗೆ ಆಗಿಬರುವುದಿಲ್ಲ. ಲಾರೆನ್ಸ್ ಬಿಷ್ಣೋಯಿ ಈ ಹಿಂದೆ ಹೇಳಿಕೆ ಕೊಟ್ಟಿದ್ದ. ತಾನಂತೂ ಖಲಿಸ್ತಾನ ಸ್ಥಾಪನೆಗೆ ಎಂದೆಂದಿಗೂ ಅವಕಾಶ ಕೊಡುವುದಿಲ್ಲ ಎಂದಿದ್ದ. ಖಲಿಸ್ತಾನ ಹೋರಾಟಗಾರರ ವಿರೋಧಿ ಈತ.

ಅಷ್ಟಲ್ಲದೆ ಲಾರೆನ್ಸ್ ಬಿಷ್ಣೋಯಿ ಮತ್ತು ಅವನ ಗ್ಯಾಂಗ್​​ನವರು ಸಿಖ್​ ವಿರೋಧಿಗಳು ಎಂದೇ ಬಿಂಬಿತರಾಗಿದ್ದಾರೆ. ʼʼತಮ್ಮನ್ನು ವಿರೋಧಿಸುವ ಲಾರೆನ್ಸ್ ಗ್ಯಾಂಗ್​​ನ್ನು ಸಹಜವಾಗಿಯೇ ಖಲಿಸ್ತಾನಿಗಳೂ ವಿರೋಧಿಸುತ್ತಿದ್ದಾರೆ. ಹೀಗಾಗಿ ಪಂಜಾಬ್​ ಪೊಲೀಸರು ಗ್ಯಾಂಗ್​ಸ್ಟರ್​ಗಳ ಮಧ್ಯೆಯ ವೈಷಮ್ಯವನ್ನು ತಮಗೆ ಲಾಭವಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಮೃತ್​ಪಾಲ್​​ನನ್ನು ಲಾರೆನ್ಸ್​ ಗ್ಯಾಂಗ್​​ಗೆ ಕೊಟ್ಟು ಕೊಲ್ಲುವ ಉದ್ದೇಶವೂ ಅವರದ್ದು ಆಗಿರಬಹುದು. ಅರೆಸ್ಟ್ ಆಗಿಲ್ಲ ಎಂದು ಸುಳ್ಳುಹೇಳಿ, ಸೈಲೆಂಟ್ ಆಗಿಯೇ ಕತೆ ಮುಗಿಸುವ ಹುನ್ನಾರ ಅವರದ್ದುʼʼ ಎಂಬರ್ಥದಲ್ಲಿ ಅಮೃತ್​ಪಾಲ್​ ಸಹಚರ ಆರೋಪ ಮಾತಾಡಿದ್ದಾನೆ.

ಅಮೃತ್​ಪಾಲ್ ಬಗ್ಗೆ ಮಾತಾಡಿದ್ದ ಬಿಷ್ಣೋಯಿ​!
ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯಿ ಜೈಲಿನಲ್ಲಿ ಇದ್ದುಕೊಂಡೇ ಎರಡು ದಿನಗಳ ಹಿಂದೆ ಮಾಧ್ಯಮವೊಂದಕ್ಕೆ ಸಂದರ್ಶನ ಕೊಟ್ಟಿದ್ದ. ಅದರಲ್ಲಿ ಈ ಖಲಿಸ್ತಾನಿ ನಾಯಕ ಅಮೃತ್​ಪಾಲ್​ ಬಗ್ಗೆ ಆತನನ್ನು ಪ್ರಶ್ನಿಸಿದ್ದಕ್ಕೆ ಉತ್ತರಿಸಿ, ‘ನಾನು ನನ್ನ ಕೆಲಸ ಮಾಡುತ್ತಿದ್ದೇನೆ. ಹಾಗೇ, ಅಮೃತ್​ಪಾಲ್​ ಅವನ ಕೆಲಸ ಮಾಡಿಕೊಂಡಿರಲಿ. ಆದರೆ ಆತ ಅನಗತ್ಯವಾಗಿ ಗೊಂದಲ-ಗಲಾಟೆ ಸೃಷ್ಟಿಸುತ್ತಿದ್ದಾನೆ’ ಎಂದು ಹೇಳಿದ್ದ.

ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದ ಅಮೃತ್​ಪಾಲ್​
ಇನ್ನು ಜೈಲಿನಲ್ಲಿ ಇದ್ದ ಗ್ಯಾಂಗ್​ಸ್ಟರ್​​ನನ್ನು ಸಂದರ್ಶಿಸಲು ಮಾಧ್ಯಮಕ್ಕೆ ಅವಕಾಶ ಕೊಟ್ಟ ಪಂಜಾಬ್​ ಸರ್ಕಾರವನ್ನು ಅಮೃತ್​ಪಾಲ್​ ಟೀಕಿಸಿದ್ದ. ಈ ಸರ್ಕಾರಕ್ಕೆ ಬಿಷ್ಣೋಯಿ ಮೇಲೆ ಅಷ್ಟು ಇಷ್ಟ-ನಂಬಿಕೆಯಿದ್ದರೆ ಅವನನ್ನು ಮಂತ್ರಿ ಮಾಡಲಿ’ ಎಂದು ಹೇಳಿದ್ದ.

ಇನ್ನೂ ಅನೇಕ ಸಿಖ್​ ಪ್ರಮುಖರು ಲಾರೆನ್ಸ್ ಬಿಷ್ಣೋಯಿ ಇಂಟರ್​ವ್ಯೂವ್​​ನ್ನು ವಿರೋಧಿಸುತ್ತಿದ್ದಾರೆ. ಖಲಿಸ್ತಾನಿಗಳ ಪರ ಸಹಾನುಭೂತಿ ಹೊಂದಿದ್ದ ಗಾಯಕ ಸಿಧು ಮೂಸೆವಾಲಾನನ್ನು ಲಾರೆನ್ಸ್​ ಬಿಷ್ಣೋಯಿ ಗ್ಯಾಂಗ್ ಹತ್ಯೆ ಮಾಡಿತ್ತು. ಅದನ್ನೀಗ ಎತ್ತಿ ಆಡುತ್ತಿದ್ದಾರೆ. ಹೀಗೆ ಲಾರೆನ್ಸ್​ ಬಿಷ್ಣೋಯಿ ಸಂದರ್ಶನದ ವಿವಾದ ಹೊತ್ತಿಕೊಂಡ ಬೆನ್ನಲ್ಲೇ ಪೊಲೀಸರು ಈಗ ಅಮೃತ್​ಪಾಲ್​ ಸಿಂಗ್ ಬೆನ್ನುಹತ್ತಿದ್ದಾರೆ. ಇನ್ನೊಂದೆಡೆ ಅವನನ್ನು ಅದಾಗಲೇ ಅರೆಸ್ಟ್ ಮಾಡಿದ್ದಾಗಿದೆ ಎಂದು ಸಹಚರನೊಬ್ಬ ಹೇಳುತ್ತಿದ್ದಾನೆ. ಪಂಜಾಬ್​​ನಲ್ಲಂತೂ ಸದ್ಯ ಉದ್ವಿಗ್ನ ಪರಿಸ್ಥಿತಿ ಇದ್ದು, ಇಂಟರ್​ನೆಟ್​ ಸೇವೆಗಳೆಲ್ಲ ಸ್ಥಗಿತಗೊಂಡಿವೆ.

Exit mobile version