ಖಲಿಸ್ತಾನ ಬೇಕೆಂದು ಹೋರಾಟ ಮಾಡುವ ನೆಪದಲ್ಲಿ ಹಿಂಸಾಚಾರ ಪ್ರಚೋದಿಸುತ್ತ, ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐನ ಕೈಗೊಂಬೆಯಾಗಿ ಕುಣಿಯುತ್ತಿದ್ದ ಅಮೃತ್ಪಾಲ್ ಸಿಂಗ್ (Amritpal Singh) ಯಾವುದೇ ಕ್ಷಣದಲ್ಲಾದರೂ ಬಂಧಿತನಾಗಬಹುದು. ನಾಕೋಡರ್ ಬಳಿ ಅಮೃತ್ಪಾಲ್ ಪೊಲೀಸರಿಂದ ತಪ್ಪಿಸಿಕೊಂಡ ಬಳಿಕ ಆತನ 7 ಫೋಟೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಅವನ ಬಗ್ಗೆ ಹಲವು ಮಾಹಿತಿಗಳನ್ನೂ ಹಂಚಿಕೊಂಡಿದ್ದಾರೆ.
ಇನ್ನೊಂದೆಡೆ ಹಲವು ರಾಷ್ಟ್ರೀಯ ಮಾಧ್ಯಮಗಳು ಕೂಡ ಅಮೃತ್ಪಾಲ್ ಬಗ್ಗೆ ಮಹತ್ವದ ವರದಿ ಮಾಡಿವೆ.
ಒಂದೆಡೆ ಹಿಂಸಾಚಾರ ಪ್ರಚೋದನೆ ಮಾಡುತ್ತ, ಹೋರಾಟದ ಮಾತುಗಳನ್ನು ಆಡುತ್ತ, ಕೈಯಲ್ಲಿ ಮಾರಕಾಸ್ತ್ರ ಹಿಡಿದಿರುತ್ತಿದ್ದ ಅಮೃತ್ಪಾಲ್ ಖಾಸಗಿ ಜೀವನ ಹೇಗಿತ್ತು? ಆತನೊಬ್ಬ ಮಹಾನ್ ವಿಲಾಸಿಯಾಗಿದ್ದ. ಅವನು ಹಲವು ಯುವತಿಯರು/ಮಹಿಳೆಯರೊಂದಿಗೆ ವಾಟ್ಸ್ಆ್ಯಪ್, ಇನ್ಸ್ಟಾಗ್ರಾಂನಲ್ಲಿ ಅಶ್ಲೀಲ ಚಾಟ್ ಮಾಡುತ್ತಿದ್ದ. ವಿಡಿಯೊ ಕಾಲ್ ಮಾಡುತ್ತಿದ್ದ. ಅದರಲ್ಲಿ ಮಹಿಳೆಯರೊಟ್ಟಿಗೆ ಚುಂಬನ, ಅಶ್ಲೀಲ ಮಾತುಗಳು ನಡೆಯುತ್ತಿದ್ದವು. ಆತನಿಗೆ ಇದೇ ಫೆಬ್ರವರಿಯಲ್ಲಿ ಮದುವೆಯಾಗಿತ್ತು. ಆದರೆ ಅದರಾಚೆ ಹಲವು ಯುವತಿಯರು/ಮದುವೆಯಾದ ಮಹಿಳೆಯರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಅಷ್ಟೇ ಅಲ್ಲ, ತಾನು ಲೈಂಗಿಕ ಸಂಪರ್ಕ ಬೆಳೆಸಿದ ಮಹಿಳೆಯರ ಅಶ್ಲೀಲ ವಿಡಿಯೊ ಮಾಡಿಟ್ಟುಕೊಂಡು, ಅವರಿಗೆ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ಎಂದೂ ಹೇಳಿದೆ.
ಇದನ್ನೂ ಓದಿ: Amritpal Singh: ತ್ರಿಚಕ್ರ ವಾಹನದಲ್ಲಿ ಬೈಕ್ನೊಂದಿಗೆ ಕುಳಿತ ಅಮೃತ್ಪಾಲ್ ಸಿಂಗ್; ಇನ್ನೊಂದು ಫೋಟೋ ವೈರಲ್
ಅಮೃತ್ಪಾಲ್ ಮಹಿಳೆಯರಿಗೆ ಮಾಡಿದ ಮೆಸೇಜ್, ಕಳಿಸಿದ ಸುಮಾರು 12 ವೈಸ್ನೋಟ್ಗಳು ತಮಗೆ ಸಿಕ್ಕಿದ್ದಾಗಿ ಇಂಡಿಯಾ ಟುಡೆ ತಿಳಿಸಿದೆ. ‘ನಾನು ಯಾವುದೇ ಮಹಿಳೆಯೊಂದಿಗೆ ಗಂಭೀರವಾಗಿ ಸಂಬಂಧ ಬೆಳೆಸಲು ಇಷ್ಟಪಡುವುದಿಲ್ಲ. ಆಯಾ ಸಂದರ್ಭಕ್ಕಷ್ಟೇ ಸ್ನೇಹ ಬಯಸುತ್ತೇನೆ’ ಎಂದು ಅಮೃತ್ಪಾಲ್ ಹೇಳಿದ್ದನ್ನು ಒಂದು ವೈಸ್ ನೋಟ್ನಲ್ಲಿ ಕೇಳಬಹುದು. ಹಾಗೇ, ಇನ್ನೊಂದರಲ್ಲಿ ‘ಮಹಿಳೆಯೊಬ್ಬರು ನನ್ನ ಜತೆ ಅಫೇರ್ ಇಟ್ಟುಕೊಳ್ಳಲು ಬಯಸುತ್ತಿದ್ದಾರೆ. ಅವರಿಗೆ ಮದುವೆಯಾಗಿದೆ, ನನ್ನೊಂದಿಗೆ ಸಂಬಂಧ ಬೆಳೆಸಿದರೆ, ಅವರ ವಿವಾಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಆಕೆ ಹೇಳುತ್ತಿದ್ದಾಳೆ’ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ. ಇನ್ಸ್ಟಾಗ್ರಾಂನಲ್ಲಿ ಮಹಿಳೆಯೊಬ್ಬಳ ಜತೆ ಚಾಟ್ ಮಾಡುತ್ತ ‘ನಮ್ಮ ಸಂಬಂಧ ದೃಢಪಟ್ಟಿತಲ್ಲವಾ? ಅಂದರೆ, ನಮ್ಮ ಹನಿಮೂನ್ ದುಬೈನಲ್ಲಾ’ ಎಂದು ಈತ ಮೆಸೇಜ್ ಮಾಡಿದ್ದಾನೆ. ಅದಕ್ಕೆ ಮಹಿಳೆ ನಗುವಿನ ಇಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದಾಳೆ ಎನ್ನಲಾಗಿದೆ.
ಪಂಜಾಬ್ ಪೊಲೀಸರು ಸದ್ಯ ಅಮೃತ್ಪಾಲ್ ಬಂಧನಕ್ಕೆ ಬಲೆಬೀಸಿದ್ದಾರೆ. ಮಾರ್ಚ್ 18ರಂದು ಅವನನ್ನು ಅರೆಸ್ಟ್ ಮಾಡಲು, ಪೊಲೀಸರ ತಂಡ ಇನ್ನಿಲ್ಲದ ಪ್ರಯತ್ನ ಮಾಡಿತ್ತು. ಆದರೆ ಅವನು ಅಲ್ಲಿಂದ ಪರಾರಿಯಾಗಿದ್ದಾನೆ. ಪೊಲೀಸರು ಈಗಾಗಲೇ ಅಮೃತ್ಪಾಲ್ ಹುಟ್ಟೂರಿಗೆ ತೆರಳಿ ಅಲ್ಲಿದ್ದ ಅವನ ಪತ್ನಿ ಮತ್ತು ತಾಯಿಯನ್ನೂ ವಿಚಾರಣೆ ಮಾಡಿದ್ದಾರೆ. ಆದರೆ ಅವನ ಸುಳಿವು ಸಿಕ್ಕಿಲ್ಲ.