ಖಲಿಸ್ತಾನಿ ಯುವ ನಾಯಕ, ದೇಶ ವಿರೋಧಿ ಅಮೃತ್ ಪಾಲ್ ಸಿಂಗ್ (Amritpal Singh)ಗೆ ಪಾಕಿಸ್ತಾನದೊಂದಿಗೆ ನಂಟು ಇರುವುದು ಪಕ್ಕಾ ಆಗಿದೆ. ಭಯೋತ್ಪಾದಕರನ್ನು ಪೋಷಿಸುತ್ತ, ಭಾರತದ ವಿರುದ್ಧವೂ ಸದಾ ಉಗ್ರರನ್ನು ಛೂ ಬಿಡುತ್ತಿರುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಂಸ್ಥೆಯೊಂದಿಗೆ ಈತನಿಗೆ ಲಿಂಕ್ ಇದೆ. ಪಾಕಿಸ್ತಾನದ ಐಎಸ್ಐ ಸಂಸ್ಥೆಯ ಭಾರತದ ಏಜೆಂಟ್ನಂತೆ ಇವನು ಕೆಲಸ ಮಾಡುತ್ತಿದ್ದ ಎಂದು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಮೃತ್ಪಾಲ್ ಸಿಂಗ್ ದುಬೈನಲ್ಲಿ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆಗಲೇ ಅವನು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಸಂಪರ್ಕಕ್ಕೆ ಬಂದಿದ್ದಾನೆ. ಬಳಿಕ ಭಾರತಕ್ಕೆ ಬಂದ. ಸಿಖ್ ಸಮುದಾಯದ ಯುವಕರನ್ನು, ಧರ್ಮದ ಹೆಸರಿನಲ್ಲಿ ಖಲಿಸ್ತಾನಿ ಚಳುವಳಿಗೆ ಸೆಳೆಯುತ್ತಿದ್ದ. ಆತನಿಗೆ ಇದಕ್ಕಾಗಿ ಐಎಸ್ಐನಿಂದಲೂ ಭರ್ಜರಿ ಹಣ ಸಂದಾಯ ಆಗುತ್ತಿತ್ತು ಎಂದು ಕೇಂದ್ರ ಗುಪ್ತಚರ ಇಲಾಖೆಯ, ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ‘ಅಷ್ಟೇ ಅಲ್ಲ, ಲಂಡನ್ ಮೂಲದ ಖಲಿಸ್ತಾನಿ ನಾಯಕ, ಸಿಖ್ ಪ್ರತ್ಯೇಕತಾವಾದಿ ಅವತಾರ್ ಸಿಂಗ್ ಖಂಡಾನೊಂದಿಗೂ ಇವನಿಗೆ ಸಂಪರ್ಕ ಇತ್ತು. ಅವತಾರ್ ಸಿಂಗ್ ಶಿರೋಮಣಿ ಅಕಾಲಿ ದಳ್ (ಮನ್) ಉಪಾಧ್ಯಕ್ಷನಾಗಿದ್ದವನು, ಬಳಿಕ ಖಲಿಸ್ತಾನಿ ಭಯೋತ್ಪಾದಕ ಜಗ್ತಾರ್ ಸಿಂಗ್ ತಾರಾ ಎಂಬಾತನ ಆಪ್ತ ಸಹಾಯಕನಾದ. ಲಂಡನ್ಗೆ ಹೋಗಿ ನೆಲೆಸಿದ್ದಾನೆ ಎಂದೂ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Amritpal Singh: ಪಂಜಾಬ್ ಪೊಲೀಸರೇ ಸುಳ್ಳು ಹೇಳ್ತಿದ್ದಾರೆ, ಅಮೃತ್ಪಾಲ್ ಸಿಂಗ್ ಬಂಧನವಾಗಿದೆ ಎಂದ ಸಹಚರ
ಅಮೃತ್ಪಾಲ್ ಸಿಂಗ್ ಮತ್ತು ಇನ್ನಿತರ ಪಾಕಿಸ್ತಾನಿ ಮೂಲದ ಖಲಿಸ್ತಾನಿ ನಾಯಕರು ಸೇರಿಕೊಂಡು ಭಾರತದಲ್ಲಿ ಪ್ರಮುಖ ರಾಜಕೀಯ ನಾಯಕರ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ. ಅಷ್ಟೇ ಅಲ್ಲ, ಧರ್ಮದ ಹೆಸರಿನಲ್ಲಿ ವಿಷಬೀಜ ಬಿತ್ತಿ, ಕೋಮುಗಲಭೆಗೆ ಸಂಚು ಮಾಡಿದ್ದಾರೆ. ನಿಷೇಧಿತ ಅಂತಾರಾಷ್ಟ್ರೀಯ ಸಿಖ್ ಯುತ್ ಫೆಡರೇಶನ್ ಮುಖ್ಯಸ್ಥ ಲಕ್ಬೀರ್ ಸಿಂಗ್ ರೋಡೆ ಕೂಡ ಇದಕ್ಕೆ ಸಹಕಾರ ನೀಡುತ್ತಿದ್ದಾನೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪಂಜಾಬ್ನಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ಗುಪ್ತಚರ ಇಲಾಖೆ ಅಧಿಕಾರಿ ಹೇಳಿದ್ದಾರೆ.
ಇತ್ತೀಚೆಗೆ ಸಿಖ್ ಪ್ರತ್ಯೇಕತಾವಾದಿಗಳ ಭಯೋತ್ಪಾದಕತೆ ಇತ್ತೀಚೆಗೆ ಕ್ಷಿಪ್ರವಾಗಿ ಬೆಳೆಯುತ್ತಿದೆ. ಯುವಕರನ್ನು ಸೆಳೆಯುವುದು, ಹಿಂಸಾಚಾರವನ್ನು ಸೃಷ್ಟಿಸುವುದೇ ಅವರ ಕೆಲಸ. ಅದರಲ್ಲೂ ಅಮೃತ್ಪಾಲ್ ಸಿಂಗ್ ಮತ್ತು ಆತನ ಸಹಚರರು ಪಾಕ್ ಐಎಸ್ಐ ನೆರವಿನಿಂದ ದೇಶವಿರೋಧ ಕೃತ್ಯಕ್ಕೆ ಪ್ಲ್ಯಾನ್ ಮಾಡುತ್ತಿದ್ದರು. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳ ನಡುವೆ ಚರ್ಚೆ ನಡೆದು, ಪೊಲೀಸ್ ಕಾರ್ಯಾಚರಣೆ ಕಾರ್ಯಗತಗೊಂಡಿದೆ ಎಂದು ಹೇಳಲಾಗಿದೆ.