ಖಲಿಸ್ತಾನಿ ನಾಯಕ, ದೇಶಭ್ರಷ್ಟ ಅಮೃತ್ಪಾಲ್ ಸಿಂಗ್ (Amritpal Singh) ಇಂದು ಅರೆಸ್ಟ್ ಆಗಿದ್ದಾನೆ. ಪಂಜಾಬ್ನ ಮೊಗಾ ಜಿಲ್ಲೆಯ ರೊಡಿ ಎಂಬ ಹಳ್ಳಿಯಲ್ಲಿ ಆತ ಪೊಲೀಸರಿಗೆ ಶರಣಾಗಿದ್ದಾನೆ. ಬಳಿಕ ಅವನನ್ನು ಬಂಧಿಸಲಾಗಿದೆ (Amritpal Singh Arrested )ಎಂದು ಹೇಳಲಾಗಿತ್ತು. ಆದರೆ ಇದೀಗ ಪೊಲೀಸರು ಸುದ್ದಿಗೋಷ್ಠಿ ನಡೆಸಿ, ‘ಅಮೃತ್ಪಾಲ್ ಸಿಂಗ್ ಆತನಾಗಿಯೇ ಬಂದು ಶರಣಾಗಿಲ್ಲ. ಬದಲಾಗಿ ನಾವೇ ಅವನನ್ನು ಬಂಧಿಸಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಂಜಾಬ್ ಐಜಿಪಿ ಸುಖ್ಚೇನ್ ಸಿಂಗ್ ಗಿಲ್ ಅವರು ‘ ಅಮೃತ್ಪಾಲ್ ಸಿಂಗ್ ರೊಡೆ ಹಳ್ಳಿಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿಯನ್ನು ಪಂಜಾಬ್ ಪೊಲೀಸ್ನ ಗುಪ್ತಚರ ವಿಭಾಗ ನೀಡಿತ್ತು. ಅಮೃತ್ಸರ್ ಪೊಲೀಸರು ಮತ್ತು ಗುಪ್ತಚರ ದಳದ ವಿಭಾಗದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇಂದು ಮುಂಜಾನೆ 6.45ರ ಹೊತ್ತಿಗೆ ಅಮೃತ್ಪಾಲ್ ಸಿಂಗ್ನನ್ನು ಬಂಧಿಸಿದ್ದಾರೆ. ಆತ ಅಲ್ಲಿನ ರೊಡೆವಾಲ್ ಗುರುದ್ವಾರ್ನಲ್ಲಿಯೇ ಇದ್ದ. ಅವನು ಅಲ್ಲಿಂದ ಹೊರಬರುವಂತೆ ಸನ್ನಿವೇಶ ಸೃಷ್ಟಿಸಲಾಗಿತ್ತು. ನಾವು ಪಾವಿತ್ರ್ಯತೆ ದೃಷ್ಟಿಯಿಂದ ಗುರುದ್ವಾರವನ್ನು ಪ್ರವೇಶ ಮಾಡಲಿಲ್ಲ. ಅಮೃತ್ಪಾಲ್ ಸಿಂಗ್ ಅವನಾಗೇ ಬಂದು ಶರಣಾಗಿಲ್ಲ. ಅವನು ಇದ್ದ ಜಾಗವನ್ನು ತಿಳಿದುಕೊಂಡು, ನಾವೇ ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Amritpal Singh: ಇದು ಅಂತ್ಯವಲ್ಲ ಎನ್ನುತ್ತ ಪೊಲೀಸರ ಎದುರು ಬಂದ ಅಮೃತ್ಪಾಲ್ ಸಿಂಗ್; ಆತ ಶರಣಾಗಿದ್ದು ಯಾರ ಹುಟ್ಟೂರಲ್ಲಿ?
‘ರೊಡೆ ಹಳ್ಳಿಯಲ್ಲಿ ಅಮೃತ್ಪಾಲ್ ಸಿಂಗ್ ಇರುವ ಬಗ್ಗೆ ಗುಪ್ತಚರ ಇಲಾಖೆ ವಿಶೇಷ ಮಾಹಿತಿ ಸಿಗುತ್ತಿದ್ದಂತೆ ಇಡೀ ಹಳ್ಳಿಯನ್ನು ಪೊಲೀಸರು ಸುತ್ತುವರಿದಿದ್ದರು. ಅವನು ಅದೇನು ಮಾಡಿದರೂ ಅಲ್ಲಿಂದ ಹೊರಹೋಗಲು ಸಾಧ್ಯವೇ ಆಗುತ್ತಿರಲಿಲ್ಲ. ಶರಣಾಗದೆ ಬೇರೆ ದಾರಿ ಅವನಿಗೆ ಇರಲಿಲ್ಲ. ಅಮೃತ್ಪಾಲ್ ಅಡಗಿದ್ದ ಜಾಗ ಗುಪ್ತಚರ ಇಲಾಖೆಗೆ ಹೇಗೆ ತಿಳಿಯಿತು ಎಂಬುದನ್ನು ಬಹಿರಂಗ ಪಡಿಸಲು ಸಾಧ್ಯವೇ ಇಲ್ಲ. ಕಳೆದ ಹಲವು ತಿಂಗಳಿಂದಲೂ ಪಂಜಾಬ್ ಪೊಲೀಸ್ನ ವಿವಿಧ ಘಟಕಗಳು ಪರಸ್ಪರ ಸಹಕಾರದಲ್ಲಿ ಅಮೃತ್ಪಾಲ್ ಪತ್ತೆ ಕಾರ್ಯ ನಡೆಸುತ್ತಿದ್ದರು. ಕೊನೆಗೂ ನಮ್ಮ ಕಾರ್ಯಾಚರಣೆ ಯಶಸ್ವಿಯಾಗಿದೆ’ ಎಂದು ಐಜಿಪಿ ಸುಖ್ಚೇನ್ ಸಿಂಗ್ ಗಿಲ್ ಹೇಳಿದ್ದಾರೆ.
ಅಸ್ಸಾಂ ಜೈಲಿಗೆ ಕರೆದೊಯ್ದಿದ್ದೇಕೆ?
ಅಮೃತ್ಪಾಲ್ ಸಿಂಗ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಅಸ್ಸಾಂನ ದಿಬ್ರುಗರ್ ಜೈಲಿಗೆ ಕರೆದೊಯ್ಯಲಾಗಿದೆ. ಈಗಾಗಲೇ ಬಂಧಿತರಾಗಿರುವ ಅಮೃತ್ಪಾಲ್ ಸಿಂಗ್ನ ಸಹಾಯಕರಾದ ದಲ್ಜಿತ್ ಸಿಂಗ್ ಕಲ್ಸಿ, ಪಾಪಲ್ಪ್ರೀತ್ ಸಿಂಗ್, ಕುಲವಂತ್ ಸಿಂಗ್ ಧಲಿವಾಲ್, ವರೀಂದರ್ ಸಿಂಗ್ ಜೋಹಾಲ್, ಗುರ್ಮೀತ್ ಸಿಂಗ್ ಬುಕ್ಕನ್ವಾಲಾ, ಹರ್ಜಿತ್ ಸಿಂಗ್, ಭಗವಂತ್ ಸಿಂಗ್, ಬಸಂತ್ ಸಿಂಗ್ ಮತ್ತು ಗುರಿಂದರ್ಪಾಲ್ ಸಿಂಗ್ ಔಜ್ಲಾರನ್ನೂ ಕೂಡ ದಿಬ್ರುಗಢ್ ಜೈಲಿನಲ್ಲಿಯೇ ಇಡಲಾಗಿದೆ.
ಅಮೃತ್ಪಾಲ್ ಸಿಂಗ್ ಮತ್ತು ಆತನ ಆಪ್ತರನ್ನು ಅಸ್ಸಾಂನ ದಿಭ್ರುಗಢ್ ಜೈಲಿಗೆ ಸಾಗಿಸಿದ್ದೇಕೆ ಎಂಬ ಬಗ್ಗೆ ನಿಖರ ವಿವರವನ್ನು ಪೊಲೀಸರು ಕೊಟ್ಟಿಲ್ಲ. ಆದರೆ ದಿಭ್ರುಗಢ್ನ ಜೈಲು ಅತ್ಯಂತ ಭದ್ರವಾಗಿದೆ. ಅಸ್ಸಾಂನಲ್ಲಿ 1990ರ ದಶಕದಲ್ಲಿ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ULFA)ಭಯೋತ್ಪಾದಕರ ಹಾವಳಿ ಜಾಸ್ತಿಯಿದ್ದ ಸಂದರ್ಭದಲ್ಲಿ ಆ ಸಂಘಟನೆಯ ಉನ್ನತ ಮಟ್ಟದ ಉಗ್ರರನ್ನು ಇದೇ ಜೈಲಿನಲ್ಲಿಯೇ ಇಡಲಾಗುತ್ತಿತ್ತು. ಉಗ್ರರನ್ನು ಇಡುವ ಜೈಲಾಗಿದ್ದರಿಂದ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಉತ್ತರ ಭಾರತದಲ್ಲೇ ಅತ್ಯಂತ ಹಳೆಯ ಮತ್ತು ಸುರಕ್ಷಿತವಾದ ಜೈಲು ಇದು. ಹೀಗಾಗಿ ಅಮೃತ್ಪಾಲ್ ಸಿಂಗ್ ಮತ್ತು ಇತರ ಖಲಿಸ್ತಾನಿ ಹೋರಾಟಗಾರರನ್ನು ಇಲ್ಲಿಯೇ ಇಡಲಾಗಿದೆ ಎಂದು ಹೇಳಲಾಗಿದೆ.