ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಮರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗುವಂತೆ ಸೇನೆ ಒತ್ತಾಯಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ (Mehbooba Mufti) ಆರೋಪಿಸಿದ್ದಾರೆ. “ಕಣಿವೆಯಲ್ಲಿ ಶಾಂತಿ ಕದಡಲು, ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಇಂತಹ ಕೃತ್ಯ ಎಸಗಲಾಗುತ್ತಿದೆ” ಎಂದೂ ಅವರು ದೂರಿದ್ದಾರೆ. ಪ್ರಕರಣವೀಗ ಗಂಭೀರ ಸ್ವರೂಪ ಪಡೆದಿದ್ದು, ಚರ್ಚೆಗೆ ಗ್ರಾಸವಾಗಿದೆ.
“ಪುಲ್ವಾಮದಲ್ಲಿ 50 ರಾಷ್ಟ್ರೀಯ ರೈಫಲ್ಸ್ ಯೋಧರು ಮಸೀದಿಗಳಿಗೆ ನುಗ್ಗಿ, ಮುಸ್ಲಿಮರು ಜೈ ಶ್ರೀರಾಮ್ ಎಂಬುದಾಗಿ ಘೋಷಣೆ ಕೂಗುವಂತೆ ಒತ್ತಾಯಿಸಿದ ಸುದ್ದಿ ಕೇಳಿ ಶಾಕ್ ಆಗಿದೆ. ಅಮಿತ್ ಶಾ ಅವರು ಕಾಶ್ಮೀರದಲ್ಲಿರುವಾಗ ಹಾಗೂ ಅಮರನಾಥ ಯಾತ್ರೆಗೆ ಕೆಲವೇ ದಿನಗಳು ಬಾಕಿ ಇರುವಾಗ ಇಂತಹ ಪ್ರಚೋದನೆಗಳು ಅಚ್ಚರಿ ತಂದಿವೆ. ಪ್ರಕರಣದ ಕುರಿತು ತನಿಖೆಯಾಗಬೇಕು” ಎಂದು ಮುಫ್ತಿ ಒತ್ತಾಯಿಸಿದ್ದಾರೆ.
ಮೆಹಬೂಬಾ ಮುಫ್ತಿ ಟ್ವೀಟ್
Shocked to hear about army troops from 50 RR storming into a mosque at Pulwama & forcing muslims inside to chant ‘Jai Shree Ram’. Such a move when @AmitShah is here & that too ahead of yatra is simply an act of provocation. Request @RgGhai to immediately set up a probe.
— Mehbooba Mufti (@MehboobaMufti) June 24, 2023
ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕೂಡ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸೈನಿಕರು ಮಸೀದಿಗೆ ನುಗ್ಗಿ, ಜೈ ಶ್ರೀರಾಮ್ ಎಂದು ಘೋಷಣೆ ಕೂಗಬೇಕು ಎಂಬುದಾಗಿ ಒತ್ತಾಯಿಸಿರುವ ಸಂಗತಿಯು ಮಾಧ್ಯಮಗಳಲ್ಲಿ ವರದಿಯಾಗಿದೆ. ಸ್ಥಳೀಯರು ಕೂಡ ಇದನ್ನೇ ಹೇಳಿದ್ದಾರೆ. ಇಂತಹ ಘಟನೆಗಳು ಕಳವಳಕಾರಿಯಾಗಿವೆ. ಕೇಂದ್ರ ಗೃಹ ಸಚಿವ ಅಮಿತ್ ಅವರು ಈ ಕುರಿತು ಕ್ರಮ ತೆಗೆದುಕೊಳ್ಳುವ ಭರವಸೆ ಇದೆ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Karnataka CM: ಕರ್ನಾಟಕ ಜನರ ತೀರ್ಪು ದೇಶಕ್ಕೇ ಹೊಸ ಆಶಾಕಿರಣ; ಬೆಂಗಳೂರಿನಲ್ಲಿ ಮೆಹಬೂಬಾ ಮುಫ್ತಿ ಹೇಳಿಕೆ
ಅಮಿತ್ ಶಾ ಅವರು ಎರಡು ದಿನಗಳ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಾಗಲೇ ಇಂತಹ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಮಾಧ್ಯಮಗಳು ಕೂಡ ಈ ಕುರಿತು ವರದಿ ಮಾಡಿವೆ. ಆದಾಗ್ಯೂ, ಮೆಹಬೂಬಾ ಮುಫ್ತಿ ಹಾಗೂ ಒಮರ್ ಅಬ್ದುಲ್ಲಾ ಆರೋಪಕ್ಕೆ ಇದುವರೆಗೆ ಸೇನೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೂ ಕೆಲವರು, ಮುಫ್ತಿ ಆರೋಪಕ್ಕೆ ಏನು ಸಾಕ್ಷಿ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.