ಹಾಲಿನ ಉತ್ಪನ್ನಗಳ ಖ್ಯಾತ, ದೊಡ್ಡ ಕಂಪನಿಯಾದ ಅಮುಲ್ ಹಾಲಿನ ದರದಲ್ಲಿ ಹೆಚ್ಚಳ (Amul Milk Price Hike) ಮಾಡಿದೆ. ಅಮುಲ್ ಪೂರ್ಣ ಕೆನೆಭರಿತ ಹಾಲು ಮತ್ತು ಎಮ್ಮೆಯ ಹಾಲಿನ ಬೆಲೆ ಲೀಟರ್ಗೆ 2 ರೂಪಾಯಿ ಹೆಚ್ಚಳವಾಗಿದೆ. ಅಂದರೆ ಇಷ್ಟು ದಿನ ಅಮುಲ್ ಪೂರ್ಣ ಕೆನೆ ಭರಿತ ಹಾಲಿನ ಬೆಲೆ ಲೀಟರ್ಗೆ 61 ರೂಪಾಯಿ ಇತ್ತು. ಅದೀಗ 63 ರೂ.ಗೆ ಹೆಚ್ಚಳವಾಗಿದೆ. ಹಾಗಂತ ಹಾಲಿನ ದರ ಹೆಚ್ಚಳದ ಬಗ್ಗೆ ಅಮುಲ್ ಅಧಿಕೃತ ಪ್ರಕಟಣೆಯನ್ನೇನೂ ಇನ್ನೂ ಬಿಡುಗಡೆ ಮಾಡಿಲ್ಲ.
ದೀಪಾವಳಿ ಹತ್ತಿರ ಬರುತ್ತಿರುವ ಹೊತ್ತಲ್ಲೇ ಅಮುಲ್ ತನ್ನ ಗ್ರಾಹಕರಿಗೆ ಹಾಲಿನ ದರದ ಭಾರ ಹೆಚ್ಚಿಸಿದೆ. ಗುಜರಾತ್ ಮೂಲದ ಸಹಕಾರಿ ಹಾಲು ಮಾರಾಟ ಒಕ್ಕೂಟವಾದ ಅಮುಲ್ ಈಗ ಗುಜರಾತ್ ಬಿಟ್ಟು ಉಳಿದೆಲ್ಲ ರಾಜ್ಯಗಳಲ್ಲೂ ಹಾಲಿನ ದರ ಏರಿಕೆ ಮಾಡಿದೆ.
ಅಮುಲ್ ಈ ವರ್ಷದಲ್ಲಿ ಇದು ಮೂರನೇ ಬಾರಿಗೆ ಹಾಲಿನ ದರ ಹೆಚ್ಚಿಸುತ್ತಿದೆ. ಮಾರ್ಚ್ ಮತ್ತು ಆಗಸ್ಟ್ ತಿಂಗಳಲ್ಲಿ ಕೂಡ ಲೀಟರ್ಗೆ 2 ರೂಪಾಯಿ ಏರಿಕೆ ಮಾಡಿತ್ತು. ಹಾಲು ನಿತ್ಯ ಬಳಕೆಯ ಅತ್ಯಗತ್ಯ ವಸ್ತುವಾಗಿದ್ದರಿಂದ ಅದರ ಬೆಲೆ ಹೆಚ್ಚಿಸಿದರೆ ಗ್ರಾಹಕರಿಗೆ ಹೊರೆ ಆಗುವುದರಲ್ಲಿ ಅನುಮಾನವಿಲ್ಲ. ಅಮುಲ್ ಹಾಲಿನ ಬೆಲೆಯಂತೂ ಈಗಲೇ ಭರ್ಜರಿಯಾಗಿದೆ. ಅಮುಲ್ ಶಕ್ತಿ ಲೀಟರ್ಗೆ 50 ರೂ., ಅಮುಲ್ ಗೋಲ್ಡ್ ಲೀಟರ್ಗೆ 62 ರೂ. ಮತ್ತು ಅಮುಲ್ ತಾಜ್ ಲೀಟರ್ಗೆ 56 ರೂ.ಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: Amul price hike| ಅಮುಲ್, ಮದರ್ ಡೇರಿ ಹಾಲಿನ ದರದಲ್ಲಿ 2 ರೂ. ಏರಿಕೆ