ಮುಂಬಯಿ: ಕಟ್ಟಡಕ್ಕೆ ಸ್ಲ್ಯಾಬ್ ಹಾಕಲು ಬಳಸುವ ಕಬ್ಬಿಣದ ಪೈಪ್ ಆಟೊ ರಿಕ್ಷಾವೊಂದರ ಮೇಲೆ ಬಿದ್ದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ತಾಯಿ ಹಾಗೂ ಮಗಳು ಮೃತಪಟ್ಟ ಘಟನೆ (Mumbai Accident) ಮುಂಬಯಿಯ ಜೋಗೇಶ್ವರಿಯಲ್ಲಿ ನಡೆದಿದೆ. ಮಗಳನ್ನು ಸಂಜೆಯ ವೇಳೆ ಶಾಲೆಯಿಂದ ಕರೆದುಕೊಂಡು ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರನ್ನು 28 ವರ್ಷದ ಶಮಾ ಬಾನೊ ಆಸಿಫ್ ಶೇಖ್ ಹಾಗೂ ಅಯಾತ್ ಎಂದು ಗುರುತಿಸಲಾಗಿದೆ.
ಸ್ಥಳೀಯ ಪೊಲೀಸರ ಪ್ರಕಾರ ಸಂಜೆ 4.15ಕ್ಕೆ ಘಟನೆ ನಡೆದಿದೆ. ಶಮಾ ಬಾನೊ ಅವರು ಫಾರೂಕ್ ಹೈಸ್ಕೂಲ್ನಲ್ಲಿ ಕಲಿಯುತ್ತಿರುವ ತಮ್ಮ ಪುತ್ರಿ ಆಯಾತ್ಳನ್ನು ಕರೆದುಕೊಂಡು ಬರುತ್ತಿದ್ದ ವೇಳೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಐದನೇ ಮಹಡಿಯಿಂದ ಕಬ್ಬಿಣದ ಪೈಪ್ ಬಿದ್ದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರಿಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ಶಮಾ ಮಾರ್ಗಮಧ್ಯೆಯೇ ಮೃತಪಟ್ಟಿದ್ದರು. ಆಯಾತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ದಿಗ್ವಿಜಯ್ ಸಿಂಗ್ ಪ್ರಯಾಣಿಸುತ್ತಿದ್ದ ಕಾರ್ ಅಪಘಾತ, ಬೈಕರ್ಗೆ ಚಿಕಿತ್ಸೆ ಕೊಡಿಸಿದ ಮಾಜಿ ಸಿಎಂ
ಮಹಿಳೆಯ ಪತಿಯು ಜೋಗೇಶ್ವರಿ ಪೂರ್ವದಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದರು. ಸ್ಲಮ್ ಪುನರ್ವಸತಿ ಪ್ರಾಧಿಕಾರದಿಂದ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಘಟನೆಗೆ ಯಾರು ಜವಾಬ್ದಾರರು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.