ನೊಯ್ಡಾ: ಜೀ ನ್ಯೂಸ್‌ನ ಸುದ್ದಿ ನಿರೂಪಕ ರೋಹಿತ್ ರಂಜನ್ ಅವರ ಗಾಜಿಯಾಬಾದ್‌ನಲ್ಲಿರುವ ಮನೆಯ ಎದುರು ಇಂದು ಬೆಳ್ಳಂಬೆಳಗ್ಗೆ ಪೊಲೀಸರಿಂದ ದೊಡ್ಡ ಹೈಡ್ರಾಮಾವೇ ನಡೆದಿದೆ. ಮುಂಜಾನೆ 5.೩೦ಕ್ಕೇ ಅವರ ಮನೆಯ ಎದುರು ಪೊಲೀಸರು ನಿಂತಿದ್ದರು. ಅದೂ ಕೂಡ ಎರಡು ರಾಜ್ಯಗಳ ಪೊಲೀಸರು. ಛತ್ತೀಸ್‌ಗಢದಿಂದ ಒಂದು ಪೊಲೀಸ್ ತಂಡ ಬಂದಿದ್ದರೆ, ಇನ್ನೊಂದು ನೊಯ್ಡಾದಿಂದ ಬಂದಿತ್ತು. ಛತ್ತೀಸ್‌ಗಢ ಪೊಲೀಸರು ರೋಹಿತ್ ರಂಜನ್‌ರನ್ನು ವಶಕ್ಕೆ ಪಡೆದೂ ಆಗಿತ್ತು. ಅಷ್ಟರಲ್ಲಿ ನೊಯ್ಡಾ ಪೊಲೀಸರು ಅದಕ್ಕೆ ಅಡ್ಡಗಾಲು ಹಾಕಿ, ನಿರೂಪಕನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.
ಏನಿದು ಪ್ರಕರಣ?
ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿಡಿಯೋಕ್ಕೆ ಸಂಬಂಧಪಟ್ಟ ಪ್ರಕರಣ. ಇತ್ತೀಚೆಗೆ ಕೇರಳದ ವಯಾನಾಡ್‌ನಲ್ಲಿರುವ ರಾಹುಲ್ ಗಾಂಧಿ ಕಚೇರಿ ಮೇಲೆ ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ (SFI) ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿದ್ದರು. ಕಚೇರಿಯನ್ನು ಧ್ವಂಸ ಮಾಡಿ, ಅದರೊಳಗಿದ್ದ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿಗೊಳಿಸಿದ್ದರು. ಆಫೀಸ್‌ನಲ್ಲಿದ್ದ ಸಿಬ್ಬಂದಿ ಮೇಲೆ ಕೂಡ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಹುಲ್ ಗಾಂಧಿ ʼವಯಾನಾಡ್‌ನಲ್ಲಿ ನನ್ನ ಕಚೇರಿ ಮೇಲೆ ದಾಳಿ ಮಾಡಿದವರು ಇನ್ನೂ ಮಕ್ಕಳು. ಅವರ ಮೇಲೆ ನನಗೆ ಯಾವ ಕೋಪವೂ ಇಲ್ಲ. ಅವರನ್ನು ಹಾಗೇ ಬಿಟ್ಟುಬಿಡೋಣʼ ಎಂದು ಹೇಳಿದ್ದರು. ರಾಹುಲ್ ಗಾಂಧಿ ಈ ಮಾತುಗಳನ್ನಾಡಿದ ವಿಡಿಯೋ ಎಲ್ಲೆಡೆ ವೈರಲ್ ಕೂಡ ಆಗಿತ್ತು. ಆದರೆ ಜೀ ನ್ಯೂಸ್ ಒಂದು ಎಡವಟ್ಟು ಮಾಡಿಕೊಂಡಿತ್ತು.
ರೋಹಿತ್ ರಂಜನ್ ಶೋದಲ್ಲಿ ರಾಹುಲ್ ಗಾಂಧಿಯವರ ಈ ವಿಡಿಯೋವನ್ನು ಇತ್ತೀಚೆಗೆ ನಡೆದ ಉದಯಪುರ ಕೊಲೆ ಪ್ರಕರಣಕ್ಕೆ ತಳುಕು ಹಾಕಿ ಪ್ರಸಾರ ಮಾಡಲಾಗಿತ್ತು. ಅಂದರೆ ರಾಹುಲ್ ಗಾಂಧಿ ಉದಯಪುರ ಹಂತಕರನ್ನು ಮಕ್ಕಳು ಎಂದು ಹೇಳಿ, ಅವರನ್ನು ಬಿಟ್ಟುಬಿಡೋಣ ಎಂದಿದ್ದಾರೆ ಎಂಬರ್ಥದಲ್ಲಿ ಇಡೀ ಶೋ ನಡೆದಿತ್ತು. ವಯಾನಾಡ್‌ನಲ್ಲಿ ನಡೆದ ಘಟನೆ ಬಗ್ಗೆ ರಾಹುಲ್ ಮಾತನಾಡಿದ್ದನ್ನು ಉದಯಪುರ ಕೊಲೆ ಕೇಸ್‌ಗೆ ತಳುಕು ಹಾಕಿದ್ದ ರೋಹಿತ್ ರಂಜನ್ ಮತ್ತು ಜೀ ನ್ಯೂಸ್ ವಿರುದ್ಧ ದೂರು ದಾಖಲಾಗಿತ್ತು. ಇನ್ನು ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡಿದ್ದ ಚಾನೆಲ್ ಮತ್ತು ರೋಹಿತ್ ರಂಜನ್ ಮರುದಿನವೇ ಕ್ಷಮೆಯನ್ನೂ ಕೇಳಿದ್ದರು. ಆದರೆ ಅದಾಗಲೇ ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶದ ನೊಯ್ಡಾದ ಠಾಣೆಗಳಲ್ಲಿ ರೋಹಿತ್ ರಂಜನ್ ವಿರುದ್ಧ ಕೇಸ್ ದಾಖಲಾಗಿತ್ತು.
ರೋಹಿತ್ ರಂಜನ್ ಟ್ವೀಟ್
ಮುಂಜಾನೆಯೇ ತಮ್ಮ ಮನೆಯ ಎದುರು ಛತ್ತೀಸ್‌ಗಢ ಪೊಲೀಸರನ್ನು ನೋಡಿದ ರೋಹಿತ್ ರಂಜನ್ ಟ್ವೀಟ್ ಕೂಡ ಮಾಡಿದ್ದರು. ʼನನ್ನನ್ನು ಬಂಧಿಸಲು ಛತ್ತೀಸ್‌ಗಢದಿಂದ ಪೊಲೀಸರು ಬಂದಿದ್ದಾರೆ. ಈ ಬಗ್ಗೆ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನೂ ನೀಡಲಿಲ್ಲ. ಇದು ಕಾನೂನು ಬದ್ಧವೇ?ʼ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಛತ್ತೀಸ್‌ಗಢ್‌ನ ರಾಯ್ಪುರ ಪೊಲೀಸ್, ʼನಮ್ಮಲ್ಲಿ ಕೇಸ್ ದಾಖಲಾಗಿದೆ. ಅದನ್ನು ಸ್ಥಳೀಯ ಪೊಲೀಸರಿಗೆ ತಿಳಿಸಿಯೇ ನಿಮ್ಮನ್ನು ಕರೆದುಕೊಂಡು ಹೋಗಬೇಕು ಎಂಬ ನಿಯಮ ಎಲ್ಲೂ ಇಲ್ಲ. ನಮ್ಮ ಪೊಲೀಸರು ಕೋರ್ಟ್ ವಾರೆಂಟ್ ತಂದಿದ್ದಾರೆ. ನೀವು ನಮಗೆ ಸಹಕರಿಸಲೇಬೇಕು. ನಿಮ್ಮ ವಾದವೇನಿದೆಯೋ ಅದನ್ನು ಕೋರ್ಟ್‌ನಲ್ಲಿ ಮಾಡಿʼ ಎಂದು ಹೇಳಿದ್ದರು.
ಛತ್ತೀಸ್‌ಗಢ ಪೊಲೀಸ್ ಹೇಳಿದ್ದು ಹೀಗೆ
ರೋಹಿತ್ ರಂಜನ್ ವಿರುದ್ಧ ರಾಯ್ಪುರದ ಸಿವಿಲ್ ಲೈನ್ ಪೊಲೀಸ್ ಸ್ಟೇಶನ್‌ನಲ್ಲಿ ದೇವೇಂದ್ರ ಯಾದವ್ ಎಂಬುವರು ದೂರು ನೀಡಿದ್ದಾರೆ. ಅದರ ಆಧಾರದ ಮೇಲೆ ವಿವಿಧ ವಿಭಾಗದಡಿ ಪ್ರಕರಣ ದಾಖಲು ಮಾಡಲಾಗಿದೆ. ಹೀಗಾಗಿ ರೋಹಿತ್ ರಂಜನ್‌ರನ್ನು ಬಂಧಿಸಿ ಕರೆದುಕೊಂಡು ಬರಲು ಒಂದು ತಂಡವನ್ನು ರಚಿಸಲಾಗಿತ್ತು. ಇವರು ಕೋರ್ಟ್ ವಾರೆಂಟ್‌ನೊಂದಿಗೆ ಗಾಜಿಯಾಬಾದ್‌ನಲ್ಲಿರುವ ರೋಹಿತ್ ರಂಜನ್ ಮನೆಗೆ ಹೋಗಿದ್ದರು. ರೋಹಿತ್ ರಂಜನ್‌ರನ್ನು ವಶಕ್ಕೆ ಪಡೆದು, ಕೆಲವು ಕಾನೂನು ಪ್ರಕ್ರಿಯೆಗಳನ್ನು ನಡೆಸುವ ಹೊತ್ತಿಗೆ ನೊಯ್ಡಾ ಪೊಲೀಸರು ಬಂದು ಅದನ್ನು ತಡೆದರು. ನಮ್ಮ ಕಸ್ಟಡಿಯಲ್ಲಿದ್ದ ರೋಹಿತ್‌ರನ್ನು ಕರೆದುಕೊಂಡು ಹೋಗೇಬಿಟ್ಟರು ಎಂದು ರಾಯ್ಪುರ ಎಸ್‌ಪಿ ಪ್ರಶಾಂತ್ ಅಗರ್‌ವಾಲ್ ತಿಳಿಸಿದ್ದಾರೆ.
ನೊಯ್ಡಾ ಪೊಲೀಸ್ ಹೇಳೋದೇ ಬೇರೆ !
ರಾಹುಲ್ ಗಾಂಧಿ ವಿಡಿಯೋವನ್ನು ತಪ್ಪಾಗಿ ಪ್ರಸಾರ ಮಾಡಿದ್ದಕ್ಕೆ ಸಂಬಂಧಪಟ್ಟಂತೆ ನೊಯ್ಡಾದ ಸೆಕ್ಟರ್ 20 ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹಾಗಂತ ಇದರಲ್ಲಿ ರೋಹಿತ್ ರಂಜನ್ ಹೆಸರು ಇಲ್ಲ. ಆದರೆ ಪ್ರಕರಣಕ್ಕೆ ಸಂಬಂಧಪಟ್ಟು ಅವರನ್ನು ವಿಚಾರಣೆ ಮಾಡಲೇಬೇಕಾಗಿದೆ. ಹಾಗಾಗಿ ಅವರನ್ನು ಕರೆತಂದಿದ್ದೇವೆ ಹೊರತು ಬಂಧಿಸಿಲ್ಲ ಎಂದು ನೊಯ್ಡಾ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: Rajasthan Murder | ಧರ್ಮದ ಹೆಸರಲ್ಲಿ ಹಿಂಸೆ ಸಹಿಸಲಾಗದು ಎಂದ ರಾಹುಲ್ ಗಾಂಧಿ, ಓವೈಸಿ