ನವ ದೆಹಲಿ: ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಎ.ಕೆ.ಆ್ಯಂಟನಿ ಪುತ್ರ, ಕೇರಳದ ಕಾಂಗ್ರೆಸ್ ನಾಯಕರಾಗಿದ್ದ ಅನಿಲ್ ಆ್ಯಂಟನಿ ಅವರು ಬಿಜೆಪಿ ಸೇರಿದ ಮರುದಿನವೇ ಆಂಧ್ರಪ್ರದೇಶದಲ್ಲೂ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ, ಕಾಂಗ್ರೆಸ್ನ ಹಿರಿಯ ನಾಯಕ ಕಿರಣ್ ಕುಮಾರ್ ರೆಡ್ಡಿ (Kiran Kumar Reddy) ಅವರು ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ (Kiran Kumar Reddy Join BJP). ಮಾರ್ಚ್ ತಿಂಗಳಲ್ಲಿ ಕಿರಣ್ ಕುಮಾರ್ ಅವರು ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟಿದ್ದರು. ಪಕ್ಷದ ವರಿಷ್ಠರೊಂದಿಗಿನ ಭಿನ್ನಾಭಿಪ್ರಾಯ, ನಾಯಕತ್ವದ ಬಗೆಗಿನ ಅಸಮಾಧಾನವೇ ಅವರ ರಾಜೀನಾಮೆಗೆ ಕಾರಣವಾಗಿತ್ತು.
ಆಂಧ್ರಪ್ರದೇಶದಲ್ಲಿ ಬರುವ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಹಾಗೇ, 2024ರ ಲೋಕಸಭಾ ಚುನಾವಣೆ ದೃಷ್ಟಿಯಿಂದಲೂ ಇದು ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಹೀಗೆ ಸಾಲುಸಾಲು ನಾಯಕರು ಪಕ್ಷ ತೊರೆಯುತ್ತಿರುವುದರಿಂದ ಕೈ ಬಲ ಕುಸಿಯುತ್ತಿದೆ. ಆಂಧ್ರಪ್ರದೇಶದಲ್ಲಿ ಈಗಿರುವುದು ವೈಎಸ್ಆರ್ ಕಾಂಗ್ರೆಸ್ ಸರ್ಕಾರ. ಅಲ್ಲಿ ಮುಖ್ಯ ವಿರೋಧ ಪಕ್ಷ ಚಂದ್ರಬಾಬು ನಾಯ್ಡು ಅವರ ತೆಲುಗು ದೇಸಂ ಪಾರ್ಟಿ. ಈ ಎರಡು ಪಕ್ಷಗಳ ನಡುವೆ ಮೊದಲಿನಿಂದಲೂ ತೀವ್ರ ಪೈಪೋಟಿ ಇದ್ದೇ ಇದೆ. ಆಂಧ್ರಪ್ರದೇಶ, ಕೇರಳ, ತಮಿಳುನಾಡುಗಳೆಲ್ಲ ಬಿಜೆಪಿಗೆ ಬಲವಾದ ನೆಲೆಯಿಲ್ಲ. ಮುಂಬರುವ ಲೋಕಸಭಾ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳಿಗೂ ಪೂರ್ವ ಈ ರಾಜ್ಯಗಳಲ್ಲೆಲ್ಲ ಶಕ್ತಿ ಹೆಚ್ಚಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದಂತೆ ಪ್ರಯತ್ನ ಮಾಡುತ್ತಿದೆ. ಕೇರಳದಲ್ಲಿ ಅನಿಲ್ ಆ್ಯಂಟನಿ ಬಿಜೆಪಿ ಸೇರ್ಪಡೆಯಿಂದ ಅಲ್ಲಿ ಮತ್ತು ಆಂಧ್ರದಲ್ಲಿ ನಾಲ್ಕು ಅವಧಿಗೆ ಶಾಸಕರಾಗಿ ಅನುಭವ ಇರುವ ಕಿರಣ್ ಕುಮಾರ್ ರೆಡ್ಡಿ ಸೇರ್ಪಡೆಯಿಂದ ಇಲ್ಲಿ ಬಿಜೆಪಿಗೆ ಅನುಕೂಲವೇ ಆಗಲಿದೆ.
ಕಿರಣ್ ರೆಡ್ಡಿಯವರು ರಾಯಲ್ಸೀಮೆ ಪ್ರದೇಶದಲ್ಲಿ ಪ್ರಬಲ-ಪ್ರಭಾವಿ ನಾಯಕರಾಗಿದ್ದು, ಈ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕಾಪಟೆ ಬಲ ಸಿಗಲಿದೆ ಎನ್ನಲಾಗುತ್ತಿದೆ. ಇನ್ನು ಆಂಧ್ರಪ್ರದೇಶದಲ್ಲಿ ಮೂರನೇ ಪರ್ಯಾಯವಾಗಿ ಹೊರಹೊಮ್ಮುವ ಪ್ರಯತ್ನದಲ್ಲಿರುವ ಬಿಜೆಪಿ ಪಕ್ಷಕ್ಕೆ ಕಿರಣ್ ರೆಡ್ಡಿಯವರು ಸೂಕ್ತ ಮುಖ್ಯಮಂತ್ರಿ ಅಭ್ಯರ್ಥಿಯೂ ಆಗಲಿದ್ದಾರೆ.
ಇಂದು ನವದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಕಿರಣ್ ರೆಡ್ಡಿಯವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಉಪಸ್ಥಿತರಿದ್ದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿವೃದ್ಧಿ ಮತ್ತು ರಾಷ್ಟ್ರದ ಬದ್ಧತೆ ಬಗ್ಗೆ ಇರುವ ಆಸಕ್ತಿ-ಪ್ರೀತಿಯನ್ನು ನೋಡಿ, ಅವರೊಂದಿಗೆ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಬಿಜೆಪಿ ಸೇರಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Kiran Kumar Reddy: ಆಂಧ್ರ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಕಾಂಗ್ರೆಸ್‌ಗೆ ವಿದಾಯ, ಬಿಜೆಪಿ ಸೇರ್ಪಡೆ?
ಬಿಜೆಪಿ ಸೇರ್ಪಡೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿರಣ್ ರೆಡ್ಡಿ, ‘ನಾನು ಕಾಂಗ್ರೆಸ್ನ್ನು ತೊರೆಯಬೇಕು ಎಂದು ಎಂದಿಗೂ ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ ಇಷ್ಟು ದಿನಗಳ ಕಾಲ ಅಲ್ಲಿ ಇದ್ದಿದ್ದೇ ನನ್ನ ತಪ್ಪು ನಿರ್ಧಾರ. ಕಾಂಗ್ರೆಸ್ ಪರಿಸ್ಥಿತಿ ಹಾಳಾಗುತ್ತಿದೆ. ರಾಜ್ಯದಿಂದ ರಾಜ್ಯಕ್ಕೆ ಕಾಂಗ್ರೆಸ್ ಅವನತಿ ಆಗುತ್ತಿದೆ. ಆ ಪಕ್ಷದ ನಾಯಕರು ಜನರೊಂದಿಗೆ ಬೆರೆಯುವುದಿಲ್ಲ, ಮಾತುಕತೆ ನಡೆಸುವುದಿಲ್ಲ. ಕೆಳಹಂತದ ನಾಯಕರ ಮಾತುಗಳನ್ನು ವರಿಷ್ಠರು ಕೇಳುವುದಿಲ್ಲ. ಇದು ಒಂದು ರಾಜ್ಯದಲ್ಲಿ ಅಲ್ಲ, ಎಲ್ಲ ರಾಜ್ಯಗಳಲ್ಲೂ ಇದೇ ಕತೆ. ದೇಶಾದ್ಯಂತ ಪರಿಸ್ಥಿತಿ ಹೀಗೇ ಇದೆ’ ಎಂದು ಹೇಳಿದರು.. ‘ನನ್ನ ರಾಜ ಬುದ್ಧಿವಂತ. ಆದರೆ ಅವನಿಗೆ ಸ್ವಂತ ಯೋಚನಾ ಶಕ್ತಿ ಇಲ್ಲ, ಬೇರೆಯವರ ಮಾತು, ಸಲಹೆಯನ್ನು ಕೇಳುವುದೂ ಇಲ್ಲ’ ಎಂಬ ಒಂದು ಹಳೇ ಮಾತಿದೆ. ಕಾಂಗ್ರೆಸ್ ಕತೆಯೂ ಅದೇ’ ಎಂದು ವ್ಯಂಗ್ಯ ಮಾಡಿದರು.