ನವ ದೆಹಲಿ: 2002ರ ಗುಜರಾತ್ ದಂಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಪ್ಪಿತಸ್ಥರು ಎಂಬಂತೆ ಬಿಂಬಿಸಿ ಬಿಬಿಸಿ ಚಿತ್ರಿಸಿದ್ದ ಸಾಕ್ಷ್ಯಚಿತ್ರವನ್ನು ಬಲವಾಗಿ ವಿರೋಧಿಸಿ, ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದ ಕೇರಳದ ಕಾಂಗ್ರೆಸ್ ನಾಯಕ ಅನಿಲ್ ಆ್ಯಂಟನಿ, ಜನವರಿಯಲ್ಲಿ ಪಕ್ಷವನ್ನು ತೊರೆದಿದ್ದರು. ಅದಾದ ಮೇಲೆ ಅವರು ಏಪ್ರಿಲ್ 6ರಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅನಿಲ್ ಆ್ಯಂಟನಿ ಅವರು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಎ.ಕೆ.ಆ್ಯಂಟನಿಯವರ ಪುತ್ರ. ಅನಿಲ್ ಆ್ಯಂಟನಿ ಬಿಜೆಪಿ ಸೇರ್ಪಡೆಯನ್ನು ಸ್ವತಃ ಅವರ ತಂದೆ ಎ.ಕೆ. ಆ್ಯಂಟನಿಯವರೇ ವಿರೋಧಿಸಿದ್ದಾರೆ. ‘ನನ್ನ ಪುತ್ರ ಬಿಜೆಪಿಗೆ ಸೇರಿದ್ದು ತೀವ್ರ ನೋವು ತಂದಿದೆ. ಅದು ಆತನ ತಪ್ಪು ನಿರ್ಧಾರ. ನಾನಂತೂ ನನ್ನ ಕೊನೇ ಉಸಿರು ಇರುವವರೆಗೂ ಕಾಂಗ್ರೆಸ್ಗಾಗಿಯೇ ದುಡಿಯುತ್ತೇನೆ’ ಎಂದು ಎ.ಕೆ.ಆ್ಯಂಟನಿ ಹೇಳಿದ್ದರು. ಕಾಂಗ್ರೆಸ್ನ ಹಲವು ನಾಯಕರು ಅನಿಲ್ ಆ್ಯಂಟನಿ ನಿರ್ಧಾರವನ್ನು ಟೀಕಿಸುತ್ತಿದ್ದಾರೆ.
ಅದರ ಬೆನ್ನಲ್ಲೇ ಅನಿಲ್ ಆ್ಯಂಟನಿ ಅವರು ತಮ್ಮ ಬಿಜೆಪಿ ಸೇರ್ಪಡೆಯ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ನಾನು ಕಾಂಗ್ರೆಸ್ ಬಗ್ಗೆಯಾಗಲೀ, ಅಲ್ಲಿರುವ ನಾಯಕರ ಬಗ್ಗೆ ಯಾವುದೇ ವೈಯಕ್ತಿಕ ದ್ವೇಷ ಹೊಂದಿಲ್ಲ. ಆದರೆ ನನ್ನ ವೈಯಕ್ತಿಕ ವಿಚಾರಗಳಿಗೆ ಬೆಲೆ ಕೊಟ್ಟು ಬಿಜೆಪಿಗೆ ಹೋಗುತ್ತಿದ್ದೇನೆ. ಕಾಂಗ್ರೆಸ್ಗೆ ದೇಶದ ಹಿತಾಸಕ್ತಿಗಿಂತಲೂ, ಒಂದಿಬ್ಬರು ವ್ಯಕ್ತಿಗಳ ಹಿತಾಸಕ್ತಿಯೇ ಮುಖ್ಯ. ಕಾಂಗ್ರೆಸ್ನ ವ್ಯಕ್ತಿಗತ ಹಿತಾಸಕ್ತಿಗಿಂತಲೂ, ಭಾರತವನ್ನು ಅಭಿವೃದ್ಧಿ ರಾಷ್ಟ್ರ ಮಾಡಬೇಕು ಎಂಬ ದೂರದೃಷ್ಟಿ ಹೊಂದಿ, ದೇಶದ ಹಿತಾಸಕ್ತಿಯನ್ನೇ ಆದ್ಯತೆಯನ್ನಾಗಿ ಇಟ್ಟುಕೊಂಡಿರುವ ಬಿಜೆಪಿಯಲ್ಲಿ ಕೆಲಸ ಮಾಡುವುದೇ ಉತ್ತಮ ಎನ್ನಿಸಿತು’ ಎಂದು ತಿಳಿಸಿದ್ದಾರೆ.
ಅಪ್ಪ ಎ.ಕೆ.ಆ್ಯಂಟನಿ ಅವರ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಅವರು ‘ನನ್ನ ತಂದೆಯವರ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ ರಾಜಕೀಯ ವಿಷಯದಲ್ಲಿ ನನ್ನ ಮತ್ತು ಅಪ್ಪನ ಮಧ್ಯೆ ಭಿನ್ನಾಭಿಪ್ರಾಯವಿದೆ. ನನ್ನ ತಂದೆಯವರು ಕಳೆದ ಆರು ದಶಕಗಳಿಂದಲೂ ಕಾಂಗ್ರೆಸ್ನಲ್ಲಿದ್ದಾರೆ. ನಾನೂ ಚಿಕ್ಕವನಾಗಿದ್ದಾಗಿನಿಂದಲೂ ಕಾಂಗ್ರೆಸ್ ಕುಟುಂಬದಲ್ಲಿಯೇ ಬೆಳೆದೆ. ಕಾಂಗ್ರೆಸ್ ಸಿದ್ಧಾಂತಗಳಿಂದ ಪ್ರಭಾವಿತನಾಗಿದ್ದೆ. ಆದರೆ, ಆಗಿನ ಕಾಂಗ್ರೆಸ್ಗೂ, ಈಗಿನ ಕಾಂಗ್ರೆಸ್ಗೂ ಸಾಕಷ್ಟು ವ್ಯತ್ಯಾಸವಿದೆ. ಅಂದು ನೋಡಿದ ಕಾಂಗ್ರೆಸ್ಗೂ, ಈಗಿನ ಕಾಂಗ್ರೆಸ್ಗೂ ಅಜಗಜಾಂತರ ವ್ಯತ್ಯಾಸವಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Anil Antony: ಕೈ ತೊರೆದಿದ್ದ ಎ.ಕೆ ಆ್ಯಂಟನಿ ಪುತ್ರ ಅನಿಲ್ ಆ್ಯಂಟನಿ ಬಿಜೆಪಿಗೆ, ಕೇರಳದಲ್ಲಿ ಹೆಚ್ಚಿದ ಕಮಲ ಬಲ
ಕಾಂಗ್ರೆಸ್ಗೆ ಖಂಡಿತ ಒಂದು ವೈಭವಯುತ ಇತಿಹಾಸ ಇದೆ. ಆದರೆ ಕಳೆದ ಕೆಲವು ವರ್ಷಗಳಿಂದ ಕಾಂಗ್ರೆಸ್ ಹಳಿತಪ್ಪಿದೆ. ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಿರ್ಧಾರ ತೆಗೆದುಕೊಂಡು, ಇಲ್ಲಿನ ನಾಯಕರು ಮಾತನಾಡಿದ ಅನೇಕ ಉದಾಹರಣೆಗಳು ಇವೆ ಎಂದು ಹೇಳಿದ ಅನಿಲ್ ಆ್ಯಂಟನಿ ‘ಬಿಜೆಪಿ ಅದ್ಭುತವಾಗಿ ಬೆಳೆಯುತ್ತಿದೆ. ಬಹುತೇಕ ಚುನಾವಣೆಗಳನ್ನು ಗೆಲ್ಲುತ್ತಿದೆ. ಕೇರಳ ಮತ್ತು ಈಶಾನ್ಯ ರಾಜ್ಯಗಳಲ್ಲೂ ಬಲ ಹೆಚ್ಚಿಸಿಕೊಂಡಿದೆ’ ಎಂದು ಹೇಳಿದರು.