Site icon Vistara News

ಭಾರತದಲ್ಲಿ ಮಂಕಿಪಾಕ್ಸ್​ ಪ್ರಕರಣ 7ಕ್ಕೆ ಏರಿಕೆ; ಯುಎಇಯಿಂದ ಕೇರಳಕ್ಕೆ ಬಂದಿದ್ದವನಲ್ಲಿ ಸೋಂಕು

Monkeypox

ನವ ದೆಹಲಿ: ಭಾರತದಲ್ಲಿ ಮಂಕಿಪಾಕ್ಸ್​ ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಹಾಗೇ, ಕೇರಳದಲ್ಲಿ ಮಂಕಿಪಾಕ್ಸ್​ ಸೋಂಕಿತರೀಗ ಐವರಾಗಿದ್ದಾರೆ. ಜುಲೈ 27ರಂದು ಯುಎಇಯಿಂದ ಕೋಳಿಕ್ಕೋಡ್‌ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದ 30 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್​ ಸೋಂಕು ದೃಢಪಟ್ಟಿದೆ. ಇವರಿಗೆ ಈಗ ಮಲಪ್ಪುರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಗಸ್ಟ್​ 1ರಂದು ದೆಹಲಿಯಲ್ಲಿ 35 ವರ್ಷದ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್​ ಇರುವುದು ಖಚಿತವಾಗಿದೆ. ಇವರು ನೈಜೀರಿಯಾ ಪ್ರಜೆಯಾಗಿದ್ದರೂ, ಒಂದು ವರ್ಷದಿಂದ ಈಚೆಗೆ ವಿದೇಶಗಳಿಗೆ ಹೋಗಿರಲಿಲ್ಲ. ದೆಹಲಿಯಲ್ಲಿ ಇದು ಎರಡನೇ ಮಂಕಿಪಾಕ್ಸ್ ಪ್ರಕರಣವಾಗಿದೆ. ದೇಶದಲ್ಲಿ ಇದುವರೆಗೆ ಪತ್ತೆಯಾದ ಒಟ್ಟು ಏಳು ಮಂಕಿಪಾಕ್ಸ್​ ಪ್ರಕರಣಗಳಲ್ಲಿ ಐದು ಕೇರಳದಲ್ಲೇ ದಾಖಲಾಗಿದ್ದರೆ, ಇಬ್ಬರು ದೆಹಲಿಯಲ್ಲಿದ್ದಾರೆ.

ಕೇರಳದಲ್ಲಿ ಮಂಕಿಪಾಕ್ಸ್​​ನಿಂದ 22 ವರ್ಷದ ವ್ಯಕ್ತಿಯೊಬ್ಬ ಶನಿವಾರ (ಜುಲೈ 30) ಮೃತಪಟ್ಟಿದ್ದಾನೆ. ಈತ ಯುಎಇಯಿಂದ ಕೇರಳಕ್ಕೆ ಬಂದವನಾಗಿದ್ದ. ಮಂಕಿಪಾಕ್ಸ್ ಒಮ್ಮೆಲೇ ಮಾರಣಾಂತಿಕವಲ್ಲ. ಆದರೆ ಮೂತ್ರಪಿಂಡ ಸಮಸ್ಯೆ ಸೇರಿ ಇನ್ಯಾವುದೇ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ, ರೋಗ ನಿರೋಧಕ ಶಕ್ತಿ ತೀರ ಕಡಿಮೆ ಇದ್ದವರಿಗೆ ಮಂಕಿಪಾಕ್ಸ್​ ಪ್ರಾಣಾಪಾಯ ತಂದೊಡ್ಡಲಿದೆ. ಕೇರಳದಲ್ಲಿ ಮಂಕಿಪಾಕ್ಸ್​​ನಿಂದ ಮೃತಪಟ್ಟ ಯುವಕನಿಗೆ ಬೇರೆ ಕೆಲವು ಆರೋಗ್ಯ ತೊಂದರೆಗಳು ಇದ್ದವು. ಹಾಗೇ, ಅವನನ್ನು ಆಸ್ಪತ್ರೆಗೆ ದಾಖಲಿಸುವಾಗಲೇ ತುಂಬ ತಡವಾಗಿತ್ತು ಎಂದು ಅಲ್ಲಿನ ಆರೋಗ್ಯ ಸಚಿವೆ ವೀಣಾ ಜಾರ್ಜ್​ ತಿಳಿಸಿದ್ದಾರೆ.

ಮಂಕಿಪಾಕ್ಸ್​​ನ್ನು ವಿಶ್ವ ಆರೋಗ್ಯ ಸಂಸ್ಥೆ ಗಂಭೀರವಾಗಿ ಪರಿಗಣಿಸಿದೆ. ಜಾಗತಿಕ ತುರ್ತು ಆರೋಗ್ಯ ಪರಿಸ್ಥಿತಿ ಎಂದು ಘೋಷಿಸಿದೆ. ಈಗಾಗಲೇ 75ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದ್ದು, 20 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ದೃಢಪಟ್ಟಿದೆ. ಮಂಕಿಪಾಕ್ಸ್​ ನಿಯಂತ್ರಣಕ್ಕೆ ವಿಶ್ವ ಒಟ್ಟಾಗಬೇಕು ಎಂದು ಡಬ್ಲ್ಯೂಎಚ್​ಒ ಕರೆ ಕೊಟ್ಟಿದೆ.

ಮಂಕಿಪಾಕ್ಸ್‌ ಲಕ್ಷಣಗಳೇನು?
1. ಜ್ವರ, ಆಯಾಸ, ತಲೆ ನೋವು, ಮಾಂಸ ಖಂಡಗಳಲ್ಲಿ ನೋವು, ಚಳಿ, ಬೆನ್ನು ನೋವು, ಗಂಟಲು ನೋವು, ಒಣ ಕೆಮ್ಮು, ಉಸಿರಾಟದ ತೊಂದರೆ.
2.ಮೈಮೇಲೆ ಸಣ್ಣ ಗುಳ್ಳೆಗಳು ಏಳುತ್ತವೆ. ಬಳಿಕ ಅದು ದೊಡ್ಡದಾಗಿ ಕೀವು ತುಂಬುತ್ತದೆ.
3.ಬಾಯಿಯ ಒಳಗೆ, ಕಣ್ಣಿನ ಒಳಭಾಗ, ಗುದದ್ವಾರಗಳಲ್ಲಿ ಈ ಗುಳ್ಳೆ, ದದ್ದು ಉಂಟಾಗುತ್ತದೆ.

ಹೇಗೆ ಹರಡುತ್ತದೆ?
ಮಂಕಿಪಾಕ್ಸ್‌ ರೋಗ ಒಬ್ಬರಿಂದ ಒಬ್ಬರಿಗೆ ಪ್ರಸರಣಗೊಳ್ಳುತ್ತದೆ. ಮಂಕಿಪಾಕ್ಸ್‌ ಸೋಂಕಿತ ಮನುಷ್ಯ ಅಥವಾ ಪ್ರಾಣಿಯ ಗಾಯದಿಂದ ಒಸರುವ ದ್ರವ ತಗುಲಿದರೆ, ಉಸಿರಾಟದ ಹನಿಗಳು, ಎಂಜಲು ಅಥವಾ ಸೋಂಕಿತ ಮಲಗಿದ್ದ ಜಾಗದಲ್ಲೇ ಇನ್ನೊಬ್ಬರು ಮಲಗಿದಾಗ ರೋಗ ಹರಡುತ್ತದೆ. ಸದ್ಯ ಭಾರತದಲ್ಲಿ ಕಾಣಿಸಿಕೊಂಡ ಮೂರೂ ಪ್ರಕರಣಗಳು ಕೇರಳದಲ್ಲೇ ದಾಖಲಾಗಿವೆ ಮತ್ತು ಈ ಮೂವರೂ ಹೊರದೇಶದಿಂದಲೇ ಬಂದವರಾಗಿದ್ದಾರೆ.

ಇದನ್ನೂ ಓದಿ: Monkeypox India | ಕೇರಳದಲ್ಲಿ ಭಾರತದ ಮೊದಲ ಮಂಕಿಪಾಕ್ಸ್‌ ಸಾವು

Exit mobile version