ನವ ದೆಹಲಿ: 2019ರಲ್ಲಿ ಮೋದಿ ಉಪನಾಮಕ್ಕೆ ಮಾಡಿದ ಅಪಮಾನದ ಪ್ರಕರಣದಲ್ಲಿ ಈಗಾಗಲೇ ದೋಷಿಯಾಗಿ, 2 ವರ್ಷಗಳ ಕಾಲ ಜೈಲುಶಿಕ್ಷೆಗೆ ಗುರಿಯಾಗಿರುವ ರಾಹುಲ್ ಗಾಂಧಿ ವಿರುದ್ಧ ಈಗ ಮತ್ತೆ ಸಾಲುಸಾಲು ಮಾನನಷ್ಟ ಮೊಕದ್ದಮೆಗಳು ಬೀಳುತ್ತಿವೆ. ಇದೀಗ ಆರ್ಎಸ್ಎಸ್ ವಿರುದ್ಧ ಅವಹೇಳನ ಮಾಡಿದ ಆರೋಪದಡಿ ರಾಹುಲ್ ಗಾಂಧಿ ವಿರುದ್ಧ ಹರಿದ್ವಾರ ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ. ರಾಹುಲ್ ಗಾಂಧಿಯವರು ಜನವರಿ ತಿಂಗಳಲ್ಲಿ ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಮಾತನಾಡುತ್ತ, ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು (RSS) 21ನೇ ಶತಮಾನದ ಕೌರವರು ಎಂದು ಹೇಳಿದ್ದರು. ಈಗ ಅದೇ ವಿಚಾರಕ್ಕೆ ಸಂಬಂಧಪಟ್ಟು ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
ಆರ್ಎಸ್ಎಸ್ ಸ್ವಯಂಸೇವಕರಾಗಿರುವ ಕಮಲ್ ಭಡೋರಿಯಾ ಅವರು ನೀಡಿದ ದೂರಿನ ಅನ್ವಯ ಮೊಕದ್ದಮೆ ದಾಖಲು ಮಾಡಿದ್ದಾಗಿ ವಕೀಲ ಅರುಣ್ ಭಡೋರಿಯಾ ತಿಳಿಸಿದ್ದಾರೆ. ಈ ಕೇಸ್ನ ವಿಚಾರಣೆಯನ್ನು ಕೋರ್ಟ್ ಏಪ್ರಿಲ್ 12ರಂದು ಕೈಗೆತ್ತಿಕೊಳ್ಳಲಿದೆ. ನಾವು ರಾಹುಲ್ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆ 499 ಮತ್ತು 500ರಡಿಯಲ್ಲಿ ಕೇಸ್ ದಾಖಲು ಮಾಡಿದ್ದೇವೆ. ಇವೆರಡೂ ಸೆಕ್ಷನ್ಗಳೂ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಪಟ್ಟವು ಮತ್ತು ಇದರಡಿಯಲ್ಲಿ ಗರಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಅರುಣ್ ಭಡೋರಿಯಾ ತಿಳಿಸಿದ್ದಾರೆ.
2019ರಲ್ಲಿ ರಾಹುಲ್ ಗಾಂಧಿ ಕೋಲಾರದಲ್ಲಿ ಭಾಷಣ ಮಾಡುತ್ತ, ಎಲ್ಲ ಕಳ್ಳರ ಉಪನಾಮವೂ ಮೋದಿ ಎಂದೇ ಇರುತ್ತದೆ ಎಂದು ಹೇಳಿದ್ದರು. ಈ ಹೇಳಿಕೆ ವಿರುದ್ಧ ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಸೂರತ್ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಅದರಲ್ಲಿ ರಾಹುಲ್ ಗಾಂಧಿ ದೋಷಿಯಾಗಿದ್ದಾರೆ. ಇದೇ ಕಾರಣಕ್ಕೆ ಅವರು ತಮ್ಮ ಲೋಕಸಭೆ ಸದಸ್ಯ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಬಿಹಾರ ಬಿಜೆಪಿ ನಾಯಕ ಸುಶೀಲ್ಕುಮಾರ್ ಮೋದಿಯವರು ಕೂಡ ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಬಿಹಾರ ಕೋರ್ಟ್ನಲ್ಲಿ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಹಣ ಅಕ್ರಮ ವರ್ಗಾವಣೆ, ತೆರಿಗೆ ವಂಚನೆ ಆರೋಪ ಹೊತ್ತು, ದೇಶದಿಂದ ಪಲಾಯಯಗೈದಿರುವ ಲಲಿತ್ ಮೋದಿ ಕೂಡ, ಯುಕೆ ಕೋರ್ಟ್ನಲ್ಲಿ ರಾಹುಲ್ ಗಾಂಧಿ ವಿರುದ್ಧ ಕೇಸ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದೆಲ್ಲದರ ಮಧ್ಯೆ ಸ್ವಯಂ ಸೇವಕ ಕಮಲ್ ಭಡೋರಿಯಾ ಅವರು ರಾಹುಲ್ ಗಾಂಧಿ ವಿರುದ್ಧ ದೂರು ನೀಡಿದ್ದಾರೆ. ಆರ್ಎಸ್ಎಸ್ನವರು 21ನೇ ಶತಮಾನದ ಕೌರವರು. ಈಗವರು ಖಾಕಿ ಚಡ್ಡಿ ಹಾಕಿರುತ್ತಾರೆ. ಕೈಯಲ್ಲಿ ಲಾಠಿ ಹಿಡಿದಿರುತ್ತಾರೆ. ಶಾಖಾಗಳನ್ನು ನಡೆಸುತ್ತಾರೆ. ಭಾರತದಲ್ಲಿರುವ 2-3 ಶ್ರೀಮಂತರು ಈ ಕೌರವರೊಂದಿಗೆ ನಿಂತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹೇಳಿದ್ದರು ಎಂದು ಕಮಲ್ ಭಡೋರಿಯಾ ದೂರಿನಲ್ಲಿ ತಿಳಿಸಿದ್ದಾರೆ. ಅಷ್ಟೆ ಅಲ್ಲ, ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಹುಲ್ ಗಾಂಧಿಯವರಿಗೆ ಜನವರಿ 11ರಂದು ಲೀಗಲ್ ನೋಟಿಸ್ ನೀಡಲಾಗಿತ್ತು. ಆದರೆ ಅವರು ಅದಕ್ಕೆ ಪ್ರತಿಕ್ರಿಯೆ ನೀಡಿಲಿಲ್ಲ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ಮಾನನಷ್ಟ ಮೊಕದ್ದಮೆ; ಸಮನ್ಸ್ ನೀಡಿದ ಬಿಹಾರ ಕೋರ್ಟ್