ಭಟಿಂಡಾ: ಪಂಜಾಬ್ನ ಭಟಿಂಡಾ ಸೇನಾ ನೆಲೆಯಲ್ಲಿ (Bathinda military station) ನಿನ್ನೆಯಷ್ಟೇ ನಾಲ್ವರು ಯೋಧರು ಗುಂಡಿನ ದಾಳಿಗೆ ಬಲಿಯಾಗಿದ್ದರು. ಅದರ ಬೆನ್ನಲ್ಲೇ ಅಲ್ಲಿ ಒಬ್ಬ ಸೈನಿಕ ತನಗೆ ತಾನೇ ಗುಂಡು ಹೊಡೆದುಕೊಂಡು ಮೃತಪಟ್ಟಿದ್ದಾನೆ. ಮೃತ ಸೈನಿಕನ ಹೆಸರು ಲಂಗು ರಾಜ್ ಶಂಕರ್ ಎಂದಾಗಿದ್ದು, ಈತ ಮಿಲಿಟರಿ ಸ್ಟೇಶನ್ ಬಳಿ ಕಾವಲು ಕರ್ತವ್ಯದಲ್ಲಿದ್ದ. ತನ್ನ ಕೈಯಲ್ಲಿದ್ದ ರೈಫಲ್ನಿಂದ ತಾನೇ ಗುಂಡು ಹೊಡೆದುಕೊಂಡು ಮೃತಪಟ್ಟಿದ್ದಾನೆ. ಅಂದಹಾಗೇ, ಭಟಿಂಡಾ ಸ್ಟೇಶನ್ನಲ್ಲಿ ನಡೆದ ನಾಲ್ವರು ಯೋಧರ ಹತ್ಯೆಗೂ, ಈ ಯೋಧನ ಸಾವಿಗೂ ಏನೂ ಸಂಬಂಧವಿಲ್ಲ ಎಂದೂ ಸೇನೆ ತಿಳಿಸಿದೆ.
ಬುಧವಾರ ಮುಂಜಾನೆ 4.30ರ ಹೊತ್ತಿಗೆ ಭಟಿಂಡಾ ಮಿಲಿಟರಿ ಸ್ಟೇಶನ್ನಲ್ಲಿ ಒಬ್ಬನ ಗುಂಡಿಗೆ ನಾಲ್ವರು ಯೋಧರು ಬಲಿಯಾಗಿದ್ದರು. ಅದಾದ ಮೇಲೆ ಸಂಜೆ 4.30ರ ಹೊತ್ತಿಗೆ ರಕ್ಷಣಾ ಕರ್ತವ್ಯದಲ್ಲಿದ್ದ ಈ ಯೋಧ ತನಗೆ ತಾನೇ ಗುಂಡು ಹಾರಿಸಿಕೊಂಡು ತೀವ್ರವಾಗಿ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರೂ ಪ್ರಯೋಜನ ಆಗಲಿಲ್ಲ. ಆತ ತನ್ನ ತಲೆಯ ಬಲಭಾಗಕ್ಕೆ ಶೂಟ್ ಮಾಡಿಕೊಂಡಿದ್ದಾನೆ. ಅವನ ಬಳಿಯಿದ್ದ ರೈಫಲ್ ಕೂಡ ಅಲ್ಲಿಯೇ ಸಿಕ್ಕಿದೆ. ಈ ಯೋಧ ಇತ್ತೀಚೆಗಷ್ಟೇ ರಜಾ ಮುಗಿಸಿಕೊಂಡು ವಾಪಸ್ ಬಂದಿದ್ದ ಎಂದು ಸೇನೆ ಮಾಹಿತಿ ನೀಡಿದೆ. ಈ ಬಗ್ಗೆಯೂ ತನಿಖೆ ಪ್ರಾರಂಭವಾಗಿದೆ.
ಬುಧವಾರ ಮುಂಜಾನೆ ಪಂಜಾಬ್ನ ಭಟಿಂಡಾ ಸೇನಾ ನೆಲೆಯಲ್ಲಿ ಫೈರಿಂಗ್ ಆಗಿತ್ತು. ಇದರಲ್ಲಿ ನಾಲ್ವರು ಮೃತಪಟ್ಟಿದ್ದರು. ಸೇನಾ ನೆಲೆಯನ್ನು ಉಗ್ರರು ಪ್ರವೇಶ ಮಾಡಲು ಪ್ರಯತ್ನಿಸಿದರು. ಅವರ ಮೇಲೆ ಅಲ್ಲಿನ ಯೋಧರು ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಂತರ ಸತ್ತಿದ್ದು ಉಗ್ರರಲ್ಲ, ಅಲ್ಲಿನ ನಾಲ್ವರು ಯೋಧರು ಎಂದು ಸೇನೆಯೇ ಹೇಳಿಕೆ ಬಿಡುಗಡೆ ಮಾಡಿತ್ತು. ಗುಂಡು ಹಾರಿಸಿದವರು ಬಿಳಿ ಕುರ್ತಾ ಮತ್ತು ಪೈಜಾಮಾ ಧರಿಸಿದ್ದರು. ಅವರ ಕೈಯಲ್ಲಿ ಇನ್ಸಾಸ್ ರೈಫಲ್ ಮತ್ತು ಹರಿತವಾದ ಕೊಡಲಿ ಇತ್ತು ಎಂದು ಹೇಳಲಾಗಿದೆ. ಅಂದಹಾಗೇ, ಇದೇ ಮಿಲಿಟರಿ ಸ್ಟೇಶನ್ನಿಂದ ಕಳೆದ ಎರಡು ದಿನಗಳ ಹಿಂದೆ ಇನ್ಸಾಸ್ ರೈಫಲ್ ಮತ್ತು 28 ಬುಲೆಟ್ಗಳು ನಾಪತ್ತೆಯಾಗಿದ್ದವು. ಅದೇ ರೈಫಲ್ನಿಂದಲೇ ದಾಳಿಯಾಗಿದೆಯಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಪಂಜಾಬ್ನ ಸೇನಾ ನೆಲೆಯಲ್ಲಿ ಹತ್ಯೆಗೀಡಾದ ನಾಲ್ವರು ಉಗ್ರರಲ್ಲ, ಸೇನಾ ಯೋಧರು; ಶೂಟ್ ಮಾಡಿದವನಿಗಾಗಿ ಹುಡುಕಾಟ