ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆ ಸರಣಿ (Kashmiri Pandit shot dead) ಮುಂದುವರಿದಿದೆ. ಈ ಸಮುದಾಯಕ್ಕೆ ಸೇರಿದ ಸುನೀಲ್ ಕುಮಾರ್ ಎಂಬಾತನನ್ನು ಉಗ್ರರು ಇಂದು ಹತ್ಯೆ ಮಾಡಿದ್ದಾರೆ. ಹಾಗೇ, ಈತನ ಸಹೋದರ ಪಿಂಟು ಕುಮಾರ್ ಮೇಲೆ ಕೂಡ ಅಟ್ಯಾಕ್ ಆಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಬಗ್ಗೆ ಜಮ್ಮು-ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಸುನೀಲ್ ಕುಮಾರ್ ಹತ್ಯೆಯನ್ನು ಜಮ್ಮು-ಕಾಶ್ಮೀರ ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜಾದ್ ಲೋನ್ ಖಂಡಿಸಿ ಟ್ವೀಟ್ ಮಾಡಿದ್ದಾರೆ. ಹೇಡಿ ಉಗ್ರರು ಶೋಪಿಯಾನ್ದಲ್ಲಿ ಇನ್ನೊಂದು ಭೀಕರ ದಾಳಿ ಮಾಡಿದ್ದಾರೆ. ಈ ಹಿಂಸಾಚಾರವನ್ನು ನಾವೆಲ್ಲರೂ ಖಂಡಿಸುತ್ತೇವೆ. ಮೃತ ಸುನೀಲ್ ಕುಮಾರ್ ಕುಟುಂಬಕ್ಕೆ ನಮ್ಮ ಸಾಂತ್ವನಗಳು ಎಂದಿದ್ದಾರೆ. ಆಲ್ ಇಂಡಿಯಾ ಮಜ್ಲಿಸ್ ಇ ಇತ್ತೇಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮಾತನಾಡಿ, ‘ಕಾಶ್ಮಿರದಲ್ಲಿ ಕಾಶ್ಮೀರಿ ಪಂಡಿತರು ಸುರಕ್ಷಿತರಲ್ಲ. ಬಿಜೆಪಿ ನೇಮಕ ಮಾಡಿದ ಲೆಫ್ಟಿನೆಂಟ್ ಗವರ್ನರ್ ನೇತೃತ್ವದ ಸರ್ಕಾರ ಮತ್ತು ಪ್ರಧಾನಿ ಮೋದಿ ಆಡಳಿತ ವಿಫಲವಾಗಿದೆ. ಆರ್ಟಿಕಲ್ 370ನ್ನು ತೆಗೆಯುವಾಗ ಕಾಶ್ಮೀರ ಪಂಡಿತರಿಗೆ ನೀವೆಲ್ಲ ಇನ್ನು ಮುಂದೆ ಸುರಕ್ಷಿತರಾಗುತ್ತೀರಿ ಎಂದೇ ಭರವಸೆ ಕೊಡಲಾಗಿತ್ತು. ಆದರೆ ಅವರ ಹತ್ಯೆ ಸರಣಿ ಮುಂದುವರಿದಿದೆ. ಈ ಬಗ್ಗೆ ಪ್ರಧಾನಿ ಮೋದಿ, ಗೃಹ ಸಚಿವರು ಮತ್ತ ಇಡೀ ಬಿಜೆಪಿ ಪಕ್ಷ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಮುಖಂಡ, ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿ, ‘ದಕ್ಷಿಣ ಕಾಶ್ಮೀರದಿಂದ ಇಂದು ಕೆಟ್ಟ ಸುದ್ದಿಗಳೇ ಬರುತ್ತಿವೆ. ಸೈನಿಕರು ಪ್ರಯಾಣ ಮಾಡುತ್ತಿದ್ದ ಬಸ್ ನದಿಗೆ ಬಿದ್ದು, 6 ಯೋಧರು ಮೃತಪಟ್ಟಿದ್ದಾರೆ. ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅದರ ಬೆನ್ನಲ್ಲೇ ಕಾಶ್ಮೀರಿ ಪಂಡಿತ ಸುನೀಲ್ ಕುಮಾರ್ ಹತ್ಯೆ ಸುದ್ದಿ ಕೇಳಿಬಂತು. ಅವರ ಸೋದರನೂ ಗಾಯಗೊಂಡಿದ್ದಾರೆ. ಮೃತರ ಕುಟುಂಬಕ್ಕೆ ಸಾಂತ್ವನಗಳು ಎಂದು ಹೇಳಿದ್ದಾರೆ.
ಸೋಮವಾರ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದ ಹೊತ್ತಲ್ಲೇ ಬಡ್ಗಾಂವ್ನ ಮನೆಯೊಂದರ ಮೇಲೆ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದರು. ಅದರಲ್ಲಿ ಕಾಶ್ಮೀರಿ ಪಂಡಿತ್ ಕುಟುಂಬಕ್ಕೆ ಸೇರಿದ ಕರಣ್ ಕುಮಾರ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಗೇ, ಅವರು ನಿನ್ನೆ ಶ್ರೀನಗರದ ಬಾಟಾಮಾಲೂ ಏರಿಯಾದ ಪೊಲೀಸ್ ಠಾಣೆ ಮೇಲೆ ಕೂಡ ಗ್ರೆನೇಡ್ ದಾಳಿ ನಡೆಸಿದ್ದರು. ಅದರಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಮೇ ತಿಂಗಳಲ್ಲಿ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಎಂಬುವರ ಹತ್ಯೆಯಾಗಿತ್ತು. ಅವರು ಕಂದಾಯ ಇಲಾಖೆ ಉದ್ಯೋಗಿಯಾಗಿದ್ದರು.
ಇದನ್ನೂ ಓದಿ: ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆ; ಎಲ್ಲೆಡೆ ಪ್ರತಿಭಟನೆ, ಬಿಜೆಪಿ ವಿರುದ್ಧ ಆಕ್ರೋಶ