ನವದೆಹಲಿ: ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ (Amritpal Singh) ಜಲಂಧರ್ನಿಂದ ಪರಾರಿಯಾಗಲು ಬಳಸಿದ್ದ ಪ್ಲಾಟಿನಾ ಮೋಟರ್ಬೈಕ್ನ್ನು ಪೊಲೀಸರು ಬುಧವಾರ ಪತ್ತೆ ಹಚ್ಚಿ, ವಶಪಡಿಸಿಕೊಂಡಿದ್ದಾರೆ. ಧಾರಾಪುರ ಏರಿಯಾದಲ್ಲಿ ಬೈಕ್ ಸಿಕ್ಕಿದೆ. ಅದರ ಬೆನ್ನಲ್ಲೇ ಅವನ ಹೊಸದೊಂದು ಫೋಟೋ ಈಗ ವೈರಲ್ ಆಗುತ್ತಿದೆ. ಮೂರು ಚಕ್ರದ ಬಂಡಿಯಂಥ ವಾಹನದಲ್ಲಿ ಅವನು ಕುಳಿತಿರುವ ಫೋಟೋ ಇದು. ಮುಂಭಾಗ ಬೈಕ್ನಂತೆ ಇದ್ದರೆ, ಹಿಂಭಾಗ, ಟ್ರ್ಯಾಕ್ಟರ್ನಂತೆ, ಚಿಕ್ಕಿದಾಗಿದೆ. ಬೈಕ್ ಡ್ರೈವ್ ಮಾಡುವ ಜಾಗದಲ್ಲಿ ಯುವಕನೊಬ್ಬ ಕುಳಿತಿದ್ದು, ಆ ಬಂಡಿಯಲ್ಲಿ ಅಮೃತ್ಪಾಲ್ ಕುಳಿತಿದ್ದಾನೆ. ಆತ ಪ್ಯಾಂಟ್-ಶರ್ಟ್ ಹಾಕಿ, ಕನ್ನಡಕ ಹಾಕಿಕೊಂಡಿದ್ದಾನೆ. ಹಾಗೇ, ಅಲ್ಲಿ ಇನ್ನೊಬ್ಬಾತ ಕೂಡ ಇದ್ದಾನೆ. ಅವರು ಹೊರಟಿದ್ದ ಬೈಕ್ ಯಾಕೆ ಅಲ್ಲಿ ನಿಂತಿತ್ತು ಎಂಬುದು ಗೊತ್ತಾಗಿಲ್ಲ.
ನಾಕೋಡರ್ ಬಳಿ ಪೊಲೀಸರಿಂದ ತಪ್ಪಿಸಿಕೊಂಡ ಅಮೃತ್ಪಾಲ್ನನ್ನು ಪತ್ತೆ ಮಾಡುವ ಕಾರ್ಯವನ್ನು ಪೊಲೀಸರು ಮುಂದುವರಿಸಿದ್ದಾರೆ. ಅವನ ಸಹಚರರು, ವಾರಿಸ್ ಪಂಜಾಬ್ ದೆ ಸಂಘಟನೆಯ ಹಲವು ಸದಸ್ಯರನ್ನು ಈಗಾಗಲೇ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಪೊಲೀಸರು ಅಮೃತ್ಪಾಲ್ ಸಿಂಗ್ನ 7ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಆತ ಬಂಧನದಿಂದ ತಪ್ಪಿಸಿಕೊಳ್ಳಲು ತನ್ನ ರೂಪವನ್ನು ಬದಲಿಸಿಕೊಳ್ಳಬಹುದು ಎಂದು ಪೊಲೀಸರು ಹೇಳಿದ್ದು, 7 ವಿವಿಧ ರೀತಿಯ ಫೋಟೋಗಳನ್ನು ರಿಲೀಸ್ ಮಾಡಿದ್ದಾರೆ. ಸುಳಿವು ಸಿಕ್ಕವರು ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಪೊಲೀಸರು ಬುಧವಾರ ಅಮೃತ್ಪಾಲ್ ಹುಟ್ಟೂರಾದ ಜಲ್ಲುಪುರ್ ಖೇರಾಕ್ಕೆ ಭೇಟಿ ಕೊಟ್ಟಿದ್ದರು. ಆತನ ತಾಯಿ ಬಲ್ವಿಂದರ್ ಕೌರ್ ಮತ್ತು ಪತ್ನಿ ಕಿರೆಣ್ದೀಪ್ ಕೌರ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಫೆಬ್ರವರಿಯಲ್ಲಿ ಅಷ್ಟೇ ಅಮೃತ್ಪಾಲ್ ಮದುವೆಯಾಗಿದ್ದ. ಈ ಮದುವೆ ಅಷ್ಟೇನೂ ಅದ್ಧೂರಿಯಾಗಿ ನಡೆದಿರಲಿಲ್ಲ. ಈ ಕಿರೆಣ್ದೀಪ್ ಯುಕೆಯಲ್ಲಿ ಇದ್ದವಳು, ಮದುವೆಯ ನಂತರ ಪಂಜಾಬ್ಗೆ ಬಂದಿದ್ದಳು. ವಾರಿಸ್ ಪಂಜಾಬ್ ದೆ ಸಂಘಟನೆಗೆ ಈಕೆಯೂ ಹಣ ಹಾಕಿದ್ದಾಳೆ ಎಂಬ ಆರೋಪವೂ ಇದೆ.
ಇದನ್ನೂ ಓದಿ: Amritpal Singh: ಪಾಶ್ಚಾತ್ಯ ಶೈಲಿಯ ಉಡುಪು ಧರಿಸಿ ಪರಾರಿಯಾಗಿರುವ ಅಮೃತ್ಪಾಲ್ ಸಿಂಗ್; ಬೈಕ್ ವಶಪಡಿಸಿಕೊಂಡ ಪೊಲೀಸ್