ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿರ್ಬುಮ್ ಜಿಲ್ಲಾ ತೃಣಮೂಲ ಕಾಂಗ್ರೆಸ್ ಅಧ್ಯಕ್ಷ, ಮಮತಾ ಬ್ಯಾನರ್ಜಿ ಆಪ್ತ ಅನುಬ್ರತಾ ಮಂಡಲ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. 2020ರ ಜಾನುವಾರು ಕಳ್ಳಸಾಗಣೆ ಕೇಸ್ನಲ್ಲಿ ಇವರ ಬಂಧನವಾಗಿದ್ದು, ಇಂದು ಮುಂಜಾನೆ ಸಿಬಿಐ ಅಧಿಕಾರಿಗಳು ಅನುಬ್ರತಾ ಮನೆಗೇ ಬಂದು, ಅರೆಸ್ಟ್ ಮಾಡಿಕೊಂಡು ಕರೆದುಕೊಂಡು ಹೋಗಿದ್ದಾರೆ.
2015 ರಿಂದ 2017ರವರೆಗೆ ಪಶ್ಚಿಮ ಬಂಗಾಳ ಗಡಿಯ ಭಾಗಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜಾನುವಾರುಗಳ (ಹಸುಗಳು) ತಲೆ ಪತ್ತೆಯಾಗಿತ್ತು. 2020ರಲ್ಲಿ ಮತ್ತೆ 960 ಹಸುಗಳ ಕಡಿದ ತಲೆ ಸಿಕ್ಕಿತ್ತು. ಇವೆಲ್ಲವನ್ನೂ ಗಡಿ ಭದ್ರತಾ ಪಡೆಯ ಯೋಧರು ಪತ್ತೆ ಹಚ್ಚಿದ್ದರು. ಪಶ್ಚಿಮ ಬಂಗಾಳದ ಗಡಿ ಭಾಗಗಳ ಮೂಲಕ ಬಾಂಗ್ಲಾದೇಶಕ್ಕೆ ಹಸುಗಳ ಕಳ್ಳಸಾಗಣೆಯಾಗುತ್ತಿದ್ದುದು ಸ್ಪಷ್ಟವಾಗಿತ್ತು. ಈ ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡ ಸಿಬಿಐ, 2021ರಲ್ಲಿ ಬಿಎಸ್ಎಫ್ ಅಧಿಕಾರಿಗಳು, ಪಶ್ಚಿಮ ಬಂಗಾಳದ ಕೆಲವು ಪೊಲೀಸ್ ಅಧಿಕಾರಿಗಳು, ಕಸ್ಟಮ್ಸ್ ಅಧಿಕಾರಿಗಳ ಜತೆ, ಕೆಲವು ರಾಜಕೀಯ ನಾಯಕರನ್ನೂ ವಿಚಾರಣೆಗೆ ಒಳಪಡಿಸಿದೆ. ತೃಣಮೂಲ ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಮಿಶ್ರಾ ಮನೆಯ ಮೇಲೆ ಕೂಡ ಕಳೆದ ವರ್ಷ ರೇಡ್ ಮಾಡಿತ್ತು. ವಿನಯ್ಗೆ ಸಮನ್ಸ್ ಜಾರಿ ಮಾಡಿದ್ದರೂ, ಆತ ವಿಚಾರಣೆಗೆ ಹಾಜರಾಗದ ಕಾರಣ, ದೇಶ ಬಿಟ್ಟು ಹೋಗದಂತೆ ಲುಕ್ಔಟ್ ನೋಟಿಸ್ ಜಾರಿ ಮಾಡಿದೆ.
ಈ ಕೇಸ್ನಲ್ಲಿ ಅನುಬ್ರತಾ ಮಂಡಲ್ ಹೆಸರು ಕೇಳಿಬಂದಿದ್ದರಿಂದ ಸಿಬಿಐ ಅವರಿಗೂ ಸಮನ್ಸ್ ಜಾರಿ ಮಾಡಿತ್ತು. ಸುಮಾರು 9 ಬಾರಿ ವಿಚಾರಣೆಗೆ ಕರೆದರೂ ಮಂಡಲ್ ಹೋಗಿರಲಿಲ್ಲ. ಮತ್ತೆ ಆಗಸ್ಟ್ 10ರಂದು ವಿಚಾರಣೆಗೆ ಬರುವಂತೆ ಸಿಬಿಐ ಅಧಿಕಾರಿಗಳು ಅನುಬ್ರತಾರಿಗೆ ಹೇಳಿದ್ದರು. ಆದರೆ ನಿನ್ನೆಯೂ ಅವರು ತಪ್ಪಿಸಿಕೊಂಡಿದ್ದರಿಂದ, ಇಂದು (ಆಗಸ್ಟ್ 11) ಬೆಳಗ್ಗೆಯೇ ಮನೆಗೆ ಬಂದು ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದಾರೆ. ಆಗಸ್ಟ್ 10ರಂದು ಸಿಬಿಐ ನೋಟಿಸ್ ಜಾರಿ ಮಾಡುತ್ತಿದ್ದಂತೆ, ಬೋಲ್ಪುರ್ ಆಸ್ಪತ್ರೆಯಿಂದ ವೈದ್ಯರು ಮತ್ತು ನರ್ಸ್ಗಳ ತಂಡವೊಂದು ಅನುಬ್ರತಾ ಮನೆಗೆ ತೆರಳಿ, ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿತ್ತು. ಬಳಿಕ ಅನುಬ್ರತಾರಿಗೆ ಬೆಡ್ ರೆಸ್ಟ್ ಅಗತ್ಯ ತುಂಬ ಇದೆ ಎಂದೂ ವೈದ್ಯರು ಹೇಳಿದ್ದರು.
ಪಶ್ಚಿಮ ಬಂಗಾಳ ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ಟಿಎಂಸಿ ಸಚಿವನಾಗಿದ್ದ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪಾರ್ಥ ಚಟರ್ಜಿ ಕೂಡ ಮಮತಾ ಬ್ಯಾನರ್ಜಿ ಆಪ್ತವಲಯದಲ್ಲಿ ಗುರುತಿಸಿಕೊಂಡವರೇ ಆಗಿದ್ದರು.
ಇದನ್ನೂ ಓದಿ: BSF Soldier | ಪಶ್ಚಿಮ ಬಂಗಾಳದಲ್ಲಿ ಬೀದರ್ ಮೂಲದ ಬಿಎಸ್ಎಫ್ ಯೋಧ ಸಾವು